ಅಮೃತ ಮಹೋತ್ಸವದ ಸಡಗರದಲ್ಲಿ ಕರ್ನಾಟಕ ಸಂಘ ಮುಂಬಯಿ.ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ - ಪ್ರೊ. ಬರಗೂರು |
ಪ್ರಕಟಿಸಿದ ದಿನಾಂಕ : 2008-10-13
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಅಮೃತ ಮಹೋತ್ಸವದ ಸಡಗರದಲ್ಲಿ ಕರ್ನಾಟಕ ಸಂಘ ಮುಂಬಯಿ
ಇವತ್ತು ದೇಶವನ್ನು ಧರ್ಮ, ರಾಜಕೀಯ ಹೋಳು ಮಾಡುತ್ತಿದೆ. ಆದರೆ ಸಾಂಸ್ಕೃತಿಕ ಕ್ಷೇತ್ರ ಜನರಿಗೆ ಕನಸನ್ನು ಕೊಡುವ ಕೆಲಸ ಮಾಡುತ್ತಿದೆ. ಆದುದರಿಂದ ಕೊಟ್ಟ ಮಾತಿಗೆ ತಪ್ಪಿ ನಡೆಯದ ಮಂತ್ರಿಗಳಿದ್ದರೆ ನೀವು ಮುಂಬಯಿಗೆ ಕರೆಸಿ. ಮುಂಬೈ-ಚೆನೈಯು 30ರ ದಶಕದಲ್ಲಿ ಕನ್ನಡದ ಸ್ಪಂದನ ಆರಂಭವಾದುದು ಅಭಿಮಾನ ಪಡುವ ಸಂಗತಿ. ಈ ಮಹಾ ನಗರಿಗಳು ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕಾಳಜಿಯನ್ನು ಕೇಂದ್ರ ವಾಗಿಟ್ಟುಕೊಂಡು ರಚನಾತ್ಮಕವಾಗಿ ಆಸ್ಮಿತೆಯ ಉಳಿವಿಗೆ ಕೆಲಸ ಮಾಡುತ್ತಿರುವ ಕಾರ್ಯ ಪ್ರಶಂಸನೀಯ. ಇದೊಂದು ಸಾಂಸ್ಕೃತಿಕ ಪವಾಡ. ಮಹಾರಾಷ್ಟ್ರ ಭೂಗೋಳ ಕರ್ನಾಟಕ ಚರಿತ್ರೆ ದೇಹ ಮನಸ್ಸುಗಳ ಹೊಂದಾಣಿಕೆ ಅಗತ್ಯ. ಕರ್ನಾಟಕದ ಚರಿತ್ರೆ ಇಲ್ಲಿ ಜೀವಂತವಾಗಿದೆ. ಕನ್ನಡದ ವಿವೇಕ ಅನ್ಯ ಭಾಷಿಕರ ದ್ವೇಷದಿಂದ ಕೂಡಿದ್ದಲ್ಲ. ಅದು ಕನ್ನಡ ಸಂಸ್ಕೃತದ ಜ್ಞಾನವನ್ನು ವಿರೋಧಿಸಿದ್ದೂ ಇಲ್ಲ ನಿರಾಕರಿಸಿದ್ದೂ ಇಲ್ಲ. ಕನ್ನಡದ ವಿವೇಕವು ಇಂಗ್ಲೀಷನ್ನು ಕನ್ನಡೀಕರಣ ಗೊಳಿಸಿಕೊಂಡಿದೆ. ಎಂದು ಪ್ರೊ. ಬರಗೂರು ತಿಳಿಸಿದರು.

ಕನ್ನಡದ ಮನಸ್ಸು ಚಲನಶೀಲ ವಾದುದು ಆದುದರಿಂದ ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ. ಸಾಂಸ್ಕೃತಿಕ ಆಸಕ್ತಿ ಇಂದಿನ ತುರ್ತು ಆಗಿದೆ. ನೆಲವನ್ನು ಸ್ಪರ್ಶ ಮಾಡದ ಮನುಷ್ಯ ಸತ್ಯವನ್ನು ಹೇಳಲಾರ. ಮನುಷ್ಯಪರವಾದ ಕನ್ನಡ ಮನಸ್ಸು ಇಂದಿನ ಅಗತ್ಯ. ಕಟುವಾಸ್ತವಗಳ ಬಗೆಗೂ ಕನ್ನಡಿಗರು ಎಚ್ಚರವಾಗಿರಬೇಕು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೃಹನ್ಮುಂಬಯಿ ಯಲ್ಲಿನ ಕರ್ನಾಟಕ ಸಂಘ ಮುಂಬಯಿ ಅಮೃತ ಮಹೋತ್ಸವದ ಸಡಗರದಲ್ಲಿದ್ದು, ಮಾಟುಂಗಾ ಪಶ್ಚಿಮದ ಮೊಗಲ್‌ಲೇನ್‌ಲ್ಲಿನ ಭವ್ಯ ಕರ್ನಾಟಕ ಸಂಘದ ಡಾ| ಎಂ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಇಂದು ಸಂಜೆ ದೀಪ ಪ್ರಜ್ವಲಿಸಿ ಅಮೃತ ಮಹೋತ್ಸವ ಆಚರಣೆಗೆ ಚಾಲನೆಯನ್ನಿತ್ತು ಪ್ರಖ್ಯಾತ ವಿಮರ್ಶಕ, ಸಾಹಿತಿ ಪ್ರೊ| ಬರಗೂರು ರಾಮಚಂದ್ರಪ್ಪ ಇವರು ನುಡಿದರು.

ಸಂಘದ ಪ್ರಸಕ್ತ ಅಧ್ಯಕ್ಷ ಮನೋಹರ್ ಎಂ. ಕೋರಿ ಇವರ ಘನಾಧ್ಯಕ್ಷತೆ ಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಕನ್ನಡ ದೈನಿಕದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ಮನು ಬಳಿಗಾರ್, ಚಲನಚಿತ್ರ ನಟಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ| ಜಯಮಾಲ ಪಣಂಬೂರು ಹಾಗೂ ಗೌರವ ಅತಿಥಿಗಳಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಅಜಿತ್ ಸುವರ್ಣ, ಪ್ರಸಿದ್ಧ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೈಸೂರು ಎಸೋಸಿಯೇಶನ್ ಮುಂಬಯಿ ಅಧ್ಯಕ್ಷ ವೆಂಕಟೇಶ ಐ. ರಾಮಭದ್ರ, ಬಿ.ಎಸ್.ಕೆ.ಬಿ.ಎಸೋಸಿಯೇಶನ್ ಮುಂಯಿ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಜಯ ಸಿ. ಸುವರ್ಣ, ಸಂಘದ ಮಾಜಿ ಅಧ್ಯಕ್ಷ ಕೆ. ಜಯರಾಮ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಣ್ಣ ಅಪಾಯದ ಬೇರು ಇಂದು ನಮ್ಮನ್ನು ಕಾಡುತ್ತಿದ್ದ ಜಾಗತೀಕರಣ ಅಂದು ಮಾಮಾಲಿ ಪದವಾಗಿತ್ತು. ಆದರೆ ಇಂದು ನಾವು ಬಲಿಪಶುವಾಗಿ ದ್ದೇವೆ. ಜಾಗತೀಕರಣದಿಂದ ಸಾಂಸ್ಕೃತಿಕ ಕಂಪನವಾಗಿತ್ತಿದೆ. ಭಾಷೆಯೂ ಕೂಡಾ ಜಾಗತೀಕರಣದಿಂದ ವಿರೂಪಗೊಂಡಿದೆ. ನಮ್ಮ ಕನ್ನಡ ಎಫ್‌ಎಂ ಕನ್ನಡ ವಾಗುತ್ತಿದೆ. ನಮ್ಮ ನಾಲಿಗೆಯ ಮೇಲೆ ಇಂಗ್ಲೀಷ್ ಗುಮ್ಮನಂತೆ ಒಂದು ಹೆದರಿಸುತ್ತಿದೆ. ಕನ್ನಡ ಮನಸ್ಸು ಈ ಕುರಿತು ಜಾಗೃತಗೊಳ್ಳಬೇಕು ಎಂದು ವಿಶ್ವೇಶ್ವರ ಭಟ್ ಗೌರವ ಅತಿಥಿ ಸ್ಥಾನದಿಂದ ಮಾತನಾಡುತ್ತಾ ತಿಳಿಸಿದರು.

ವೇದಿಕೆಯಲ್ಲಿ ಸಂಘದ ವಿವಿಧ ವಿಭಾಗದ ಮುಖ್ಯಸ್ಥರು, ಪದಾಧಿಕಾರಿಗಳು ಉಪಸ್ಥಿತರಿದ್ದು, ಗೌ| ಕೋಶಾಧಿಕಾರಿ ಬಿ.ಜಿ.ನಾಯಕ್ ಸ್ವಾಗತಿಸಿದರು.

ಉಪಾಧ್ಯಕ್ಷ ಭರತ್ ಕುಮಾರ್ ಪೊಲಿಪು ಕಾರ್ಯಕ್ರಮ ನಿರ್ವಾಹಿಸಿದರು. ಗೌ| ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸಂಘದ ಸಾಧನೆಯನ್ನು ಭಿತ್ತರಿಸಿದರು.
ಪದ್ಮನಾಭ ಸಹಿಶಿತ್ಲು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

ಮಹಿಳಾ ಸದಸ್ಯೆಯರು ನಾಡ ಗೀತೆಯನ್ನು ಹಾಡಿದರು. ಜೊತೆ ಕಾರ್ಯದರ್ಶಿ ಶ್ರೀನಿವಾಸ್ ಜೋಕಟ್ಟೆ ವಂದಿಸಿದರು.
ಚಿಣ್ಣರಬಿಂಬ ಸಂಸ್ಥೆಯ ಪುಟಾಣಿ ಕಲಾವಿದರಿಂದ, ಮತ್ತು ಇತರ ಕಲಾ ತಂಡಗಳಿಂದ ನೃತ್ಯ ವೈವಿಧ್ಯ ಹಾಗೂ ಶೇಷಗಿರಿ ಕಲಾ ತಂಡ ಹಾವೇರಿ ಇವರಿಂದ ಶಾಂತಕವಿ ರಚಿತ ಪ್ರಸಿದ್ಧ ನಾಟಕ’ಉಷಾ ಹರಣ ಪ್ರದರ್ಶಿಸಲ್ಪಟ್ಟಿತು.
ವರದಿಯ ವಿವರಗಳು |
 |
ಕೃಪೆ : (ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-13
|
|
|