ಮನಾಮಾ: ನಗರದಲ್ಲಿ ತುಳು ಸಂಭ್ರಮ - ಏತುಲಾ ತೆಲಿಪೊಲಿ ಪ್ರದರ್ಶನ |
ಪ್ರಕಟಿಸಿದ ದಿನಾಂಕ : 2008-10-12
{ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್}
ಮನಾಮಾ, ಅಕ್ಟೋಬರ್ ೧೨: ಇಲ್ಲಿನ ಡೆಲ್ಮನ್ ಇಂಟರ್ ನ್ಯಾಶನಲ್ ಹೋಟೆಲಿನ ಸಹಯೋಗದೊಂದಿಗೆ ತುಳು ಸ್ನೇಹಿತರ ಬಳಗ ಇದೇ ಬರುವ ನವೆಂಬರ್ ತಿಂಗಳ 7 ನೇ ತಾರೀಖಿನ ಸಂಜೆ -ತುಳು ಸಂಭ್ರಮ- ಎನ್ನುವ ತುಳು ಸಂಸ್ಕೃತಿಯನ್ನು ಬಿಂಬಿಸುವ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕಾಗಿ ಭರದ ಪೂರ್ವ ಸಿದ್ಧತೆ ಇದಾಗಲೇ ಪ್ರಾರಂಭಗೊಂಡಿದೆ.
ಈಗಾಗಲೇ ಹಲವಾರು ತುಳುಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ ರಾಗಿ ದುಡಿದು ಅನುಭವವಿರುವ ಶ್ರೀಯುತ ಭರತ್ ಶೆಟ್ಟಿಯವರು ಈ ಕಾರ್ಯಕ್ರಮದ ಸಾರಥ್ಯವನ್ನು ವಹಿಸಿದ್ದಾರೆ.

ಕರ್ನಾಟಕದ ಸುಪ್ರಸಿದ್ಧ ಮಿಮಿಕ್ರಿ ಕಲಾವಿದ ಶ್ರೀ ಕಿಶೋರ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ದ್ವೀಪರಾಷ್ಟ್ರಕ್ಕೆ ಆಗಮಿಸಿ ಕಲಾಪ್ರದರ್ಶನ ನೀಡಲಿದ್ದಾರೆ.
ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿ ಪ್ರತಿಭಾವಂತ ಉದಯೋನ್ಮುಖ ನಿರ್ದೇಶಕ ಕರುಣಾಕರ್ ಪದ್ಮಶಾಲಿಯವರು ರಚಿಸಿ, ನಿರ್ದೇಶಿಸಿ ಸಂಭಾಷಣೆ ನೀಡಿರುವ ಹಾಸ್ಯಮಯ ತುಳುನಾಟಕ -ಏತುಲಾ ತೆಲಿಪೊಲಿ- ಪ್ರದರ್ಶನಗೊಳ್ಳಲಿದ್ದು ತುಳು ನಾಟಕಗಳಿಗೆ ತಮ್ಮ ಅದ್ಭುತ ಸಂಗೀತದಿಂದ ಜೀವ ತುಂಬಿ ಮನೆಮಾತಾಗಿರುವ ಜನಪ್ರಿಯ ಸಂಗೀತ ನಿರ್ದೇಶಕ ಶ್ರೀ ಶಶಿಕುಮಾರ್ ಹೆಜಮಾಡಿಯವರು ಈ ನಾಟಕಕ್ಕೆ ಸಂಗೀತ ನೀಡಲು ಬಹರೇನಿಗೆ ಆಗಮಿಸಲಿದ್ದಾರೆ.

ಬಹರೇನಿನ ಅನೇಕ ಪ್ರಬುದ್ಧ ಕಲಾವಿದರು ಈ ನಾಟಕದ ಪಾತ್ರ ವರ್ಗದಲ್ಲಿದ್ದು ನಾಟಕದ ಅಭ್ಯಾಸ ಈಗಾಗಲೇ ಪ್ರಾರಂಭವಾಗಿದೆ. ಶ್ರೀ ಭರತ್ ಶೆಟ್ಟಿಯವರೊಂದಿಗೆ ಶ್ರೀ ನವೀನ್ ಶೆಟ್ಟಿ ಹಾಗೂ ಪ್ರವೀಣ್ ಅವರು ಸಹಕರಿಸಲಿದ್ದು ಬಹರೇನ್ ದ್ವೀಪದಲ್ಲಿ ಚದುರಿರುವ ತುಳುವರನ್ನು ಒಂದುಗೂಡಿಸಿ ತುಳುಸಂಸ್ಕೃತಿಯ ಸವಿಯನ್ನುಣ್ಣಿಸುವುದೇ ತುಳು ಸಂಭ್ರಮದ ಪ್ರಮುಖ ಉದ್ದೇಶವಾಗಿದೆ ಇದಕ್ಕೆ ಎಲ್ಲಾ ತುಳುಭಾಂಧವರ ಸಹಕಾರ ಅಗತ್ಯ ಎಂದು ಪ್ರಧಾನ ಸಂಘಟಕರಾದ ಭರತ್ ಶೆಟ್ಟಿ ತಿಳಿಸಿದ್ದಾರೆ.
ತುಳುನಾಡ ಸಂಸ್ಕೃತಿಯನ್ನು ಬಹರೇನಿನಲ್ಲಿ ಪಸರಿಸಲು ಮುಂದಾಗಿರುವ ತುಳು ಸ್ನೇಹಿತರ ಬಳಗದ ಕನಸು ನನಸಾಗಲಿ ಎಂಬುದೇ ಗಲ್ಫ್ ಕನ್ನಡಿಗದ ಶುಭ ಹಾರೈಕೆ. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಭರತ್ ಶೆಟ್ಟಿ ಯವರನ್ನು ದೂರವಾಣಿ 00973-39677316 ಮೂಲಕ ಸಂಪರ್ಕಿಸಬಹುದಾಗಿದೆ.
ಚಿತ್ರಳಲ್ಲ್ಲಿ ಏತುಲಾ ತೆಲಿಪೊಲಿ ನಾಟಕ ತಂಡದ ಕಲಾವಿದರು ಹಾಗೂ ಅಭ್ಯಾಸನಿರತ ತಂಡವನ್ನು ಗಮನಿಸಬಹುದುದು.
ವರದಿಯ ವಿವರಗಳು |
 |
ಕೃಪೆ : ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-12
|
|
|