ತುಳುನಾಡ ವೈಭವ ಮೆರೆದ ಬಿ.ಡಿ.ಎನ್.ಇ: ಸಂಭ್ರಮದ ಹನ್ನೊಂದನೇ ವಾರ್ಷಿಕೋತ್ಸವ ಮನರಂಜಿಸಿದ ಕಾರ್ಯಕ್ರಮ |
ಪ್ರಕಟಿಸಿದ ದಿನಾಂಕ : 2008-10-11
ವಿಶೇಷ ಅತಿಥಿಗಳಾಗಿ ಸಚಿನ್ ಸುವರ್ಣ, ವಿದ್ವಾನ್ ಪ್ರಮೋದ್ ಉಳ್ಳಾಲ್ . ಶ್ರೀ ಶೋಧನ್ ಪ್ರಸಾದ್ ಹಾಗೂ ಶ್ರೀಮತಿ ಪ್ರಸನ್ನ ಕುಕ್ಯನ್ ಅವರ ನಿರೂಪಣೆಯಲ್ಲಿ ಅತ್ಯಂತ ವ್ಯವಸ್ಥಿತ ವಾಗಿ ಜರುಗಿ ನೆರೆದ ಸಾವಿರಕ್ಕೂ ಹೆಚ್ಚು ಸದಸ್ಯರ ಮನರಂಜಿಸಿತು.
ದುಬೈ, ಅಕ್ಟೋಬರ್ ೧೧: ಬಿಲ್ಲವರ ಸಂಘಟನೆಯಾದ ಬಿ.ಡಿ.ಎನ್.ಇ. (ಬಿಲ್ಲವಾಸ್ ದುಬೈ ಅಂಡ ನಾರ್ಥರ್ನ್ ಎಮಿರೇಟ್ಸ್) ತನ್ನ 11 ನೇ ವಾರ್ಷಿಕೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಕೊಂಡಿತು.
ದುಬೈ ದೇರಾದಲ್ಲಿರುವ ರಾಡಿಸನ್ ಸಾಸ್ ಹೋಟೆಲಿನ ಜಬೀಲ್ ಹಾಲ್ ಸಭಾಂಗಣದಲ್ಲಿ ಜರುಗಿದ ಉತ್ಸವದಲ್ಲಿ ಖ್ಯಾತ ಕನ್ನಡ ಹಾಗೂ ಹಿಂದಿ ಚಿತ್ರನಟ ಸಚಿನ್ ಸುವರ್ಣ ಹಾಗೂ ಖ್ಯಾತ ಭರತನಾಟ್ಯ ಕಲಾವಿದ ವಿದ್ವಾನ್ ಪ್ರಮೋದ್ ಉಳ್ಳಾಲ್ ಅವರು ಉಪಸ್ಥಿತರಿದ್ದು ವಿಶಿಷ್ಟ ಕಳೆ ನೀಡಿದ್ದರು.
ದಿನದುದ್ದಕ್ಕೂ ಹಲವು ಚಿಕ್ಕಪುಟ್ಟ ಸ್ಪರ್ಧೆಗಳನ್ನು ಸ್ಥಳದಲ್ಲಿಯೇ ಏರ್ಪಡಿಸಿ ವಿಜೇತರನ್ನು ಬಹುಮಾನಗಳಿಂದ ಪುರಸ್ಕರಿಸಲಾಯಿತು.
ಬೆಳೆಗ್ಗೆ ಹತ್ತು ಘಂಟೆಯಿಂದ ಸಂಜೆ ಆರು ಘಂಟೆಯವರೆಗೂ ನಡೆದ ಕಾರ್ಯಕ್ರಮ ಶ್ರೀ ಶೋಧನ್ ಪ್ರಸಾದ್ ಹಾಗೂ ಶ್ರೀಮತಿ ಪ್ರಸನ್ನ ಕುಕಿಯನ್ ಅವರ ನಿರೂಪಣೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿ ನೆರೆದ ಸಾವಿರಕ್ಕೂ ಹೆಚ್ಚು ಸದಸ್ಯರ ಮನರಂಜಿಸಿತು.
ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ಕುಕ್ಕಿಯಾನ್ ಅವರು ಸಭೆಗೆ ಅತಿಥಿಗಳನ್ನು ಹಾಗೂ ಸದಸ್ಯರನ್ನು ಸ್ವಾಗತಿಸಿದರು. ಅಬುಧಾಬಿ ಕರ್ನಾಟಕ ಸಂಘದ ಅದ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿ, ಅಬುಧಾಬಿ ಬಿಲ್ಲವರ ಬಳಗದ ಶ್ರೀ ಮನೋಹರ ತೋನ್ಸೆ, ಧ್ವನಿ ಪ್ರತಿಷ್ಟಾಪನದ ಶ್ರೀ ಪ್ರಕಾಶ ರಾವ್ ಪಯ್ಯಾರ್, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಪ್ರಭಾಕರ ಅಂಬಲಲ್ತೆರೆ, ನಿಕಟಪೂರ್ವ ಅಧ್ಯಕ್ಷ ಶ್ರೀ ಗಣೇಶ್ ರೈ ಸಹಿತ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಿನದುದ್ದಕ್ಕೂ ಹಲವಾರು ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿ ಮನಸೆಳೆ ಯುವಂತಿದ್ದರೂ ಕಾರ್ಯಕ್ರಮಕ್ಕೆ ಕಿರೀಟಪ್ರಾಯವಾದುದು ಬಿ.ಡಿ.ಎನ್.ಇ. ಮಹಿಳಾ ವಿಭಾಗದ ಪ್ರಸ್ತುತಿ. ಸಾಕ್ಷಾತ್ ದುರ್ಗಾಮಾತೆ ರಥದಲ್ಲಿ ಸಭಿಕರ ನಡುವೆ ಮೆರವಣಿಗೆಯಲ್ಲಿ ಬರುತ್ತಿದ್ದ ದೃಶ್ಯ ಅತ್ಯಂತ ಮನೋಹರ ಹಾಗೂ ಚೇತೋಹಾರಿಯಾಗಿತ್ತು.
ಸರಳ ಪರಿಕರಗಳಿಂದ ಸ್ಥಳೀಯವಾಗಿ ತಯಾರಿಸಿದ ರಥದಲ್ಲಿ ಆಗಮಿಸಿದ ದುರ್ಗೆ ಎಲ್ಲರ ಮನಗೆದಳು. ತನ್ನ ಪಾರಿವಾರದಲ್ಲಿ ಹುಲಿವೇಶ, ಹಾಗೂ ಹಣತೆಗಳನ್ನು ಕೈಯಲ್ಲಿ ಹಿಡಿದ ಮಹಿಳೆಯರು ಯು.ಎಇ.ಇ.ಯಲ್ಲಿಯೇ ಪ್ರಥಮ ಬಾರಿಗೆ ಹೊಸತನ ನೀಡಿದರು.
ಸಭೆಯ ಸ್ವಾಗತ ಗೀತೆಯನ್ನು ರಘು ಮತ್ತು ತಂಡದವರು ಪ್ರಸ್ತುತ ಪಡಿಸಿದರು.
ಊರಿನಿಂದ ಈ ಕಾರ್ಯಕ್ರಮಕ್ಕೆ ವಿಶೇಶವಾಗಿ ಆಗಮಿಸಿದ್ದ ವಿದ್ವಾನ್ ಪ್ರಮೋದ್ ಉಳ್ಳಾಲ್ ಅವರು ಅಲ್ಪಾವಧಿಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಿ ಹಲವು ನಾಟ್ಯ ಪ್ರಾಕಾರಗಳನ್ನು ಪ್ರಸ್ತುತ ಪಡಿಸಿದರು. ತಮ್ಮ ಅಮೋಘ ನಾಟ್ಯದಿಂದ ಯು.ಎ.ಇ. ಜನತೆಗೆ ವಿಶಿಠ ಅನುಭವ ನೀಡಿದರು. ಪ್ರಮೋದ್ ಉಳ್ಳಾಲರೊಂದಿಗೆ ಕೀರ್ತಿ, ಶುಭಾ ಪುಶ್ಪಾಂಜಲಿ ಸ್ವಾಗತನೃತ್ಯ ದಿಂದ ಸಭಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಮಹಿಳಾ ವಿಭಾಗದ ಏಳು ಮಹಿಳೆಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರಾದಾಯಿಕ ಮೆರುಗು ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಜ್ಮಾನಿನ ರೇಡಿಯೋ 4 ನಲ್ಲಿ ರೇಡಿಯೋ ರಿರೂಪಕರಾಗಿರುವ ಹರ್ಷ ಪೂಜಾರಿಯವರು ತಮ್ಮ ಎಂದಿನ ವಾಕ್ಚಾತುರ್ಯದಿಂದ ಸಭಿಕರನ್ನು ರಂಜಿಸಿದರು.
ದಿನವಿಡೀ ಹಲವು ಕಾರ್ಯಕ್ರಮಗಳು ಪ್ರದರ್ಶಿತಗೊಂಡವು. ಫ್ಯಾಶನ್ ಷೋ 2050 ಪ್ರದರ್ಶನದಲ್ಲಿ 2050 ರಲ್ಲಿ ಉಡುಗೆಗಳು ಹೇಗಿರಬಹುದೆಂಬು ದನ್ನು ಪ್ರಸ್ತುತಪಡಿಸಿದ ಸದಸ್ಯರು ವಿವಿಧ ವೇಷಗಳಿಂದ ಪ್ರೇಕ್ಷಕರನ್ನು ದಂಗುಬಡಿಸಿದರು. ಓರ್ವ ಪಾತ್ರಧಾರಿ ಮೀಸೆಯ ಅರ್ಧಭಾಗ ತೆಗೆದಿದ್ದು, ಇನ್ನೋರ್ವರು ಒಂದು ಕಾಲಿಗೆ ಪ್ಯಾಂಟ್ ಒಂದು ಕಾಲಿಗೆ ಚೆಡ್ಡಿ ಧರಿಸಿ ಗಮನ ಸೆಳೆದರು.
ಓಷಿಯನ್ ಕಿಡ್ಸ್ ಪ್ರಸ್ತುತ ಪಡಿಸಿದ ಸಮೂಹನೃತ್ಯ, ಚಿಕ್ಕಮಕ್ಕಳು ಪ್ರಸ್ತುತಪಡಿಸಿದ ಸಮೂಹನೃತ್ಯ ರಂಜಿಸಿದವು. ತುಳುನಾಡ ವೈಭವ ಎಂಬ ಪ್ರದರ್ಶನದಲ್ಲಿ ಒಂದೇ ಹಾಡಿನ ಹೆನ್ನೆಲೆಯಲ್ಲಿ ತುಳುನಾಡ ಸಂಸ್ಕೃತಿ ಯನ್ನು ಬಿಂಬಿಸುವ ಒಂದು ಪ್ರಯತ್ನ ಅಮೋಘವಾಗಿತ್ತು. ಕೋಟಿ ಚೆನ್ನಯ, ನಾಟಿ, ಒನಕೆ, ಮೀನುಬಲೆ, ಯಕ್ಷಗಾನ ಮೊದಲಾದ ಕಲೆಗಳು ವೇದಿಕೆಯಲ್ಲಿ ಜೀವತಳೆದವು.
ಹಲವಾರು ಹಾಸ್ಯ ಕಿರು ರೂಪಕಗಳು ಪ್ರದರ್ಶನಗೊಂಡವು. ಹೋಟೆಲ್ ಮ್ಯಾನೇಜ್ ಮೆಂಟ್ ಊರಿನ ಹೋಟೆಲಿನ ದೃಶ್ಯವನ್ನು ತೋರ್ಪಡಿಸಿದರೆ ಇನ್ನೊಂದು ರೂಪಕದಲ್ಲಿ ಚಿಕ್ಕವಸ್ತುಗಳನ್ನು ದೊಡ್ಡದಗಿಸುವ ಯಂತ್ರ ಮಗುವನ್ನು ಹಿರಿಯಗಾಗಿಸಿ ಎಲ್ಲರನ್ನೂ ನಕ್ಕುನಗಿಸಿತು.
ಕಳೆದ ಮೂವತ್ತು ವರ್ಷಗಳಿಂದ ಯು.ಎ.ಇ.ಯಲ್ಲಿ ವಾಸವಾಗಿರುವ ಹಾಗೂ ತುಳು ಸಂಘಟಾನೆಗಳಿಗೆ ತಮ್ಮ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯರಾದ ವಾಮನ್ ಪೂಜಾರಿ ಹಾಗೂ ಅವರ ಧರ್ಮಪತ್ನಿ ಚಂದ್ರಿಕಾ ವಾಮನ ಪೂಜಾರಿಯವರನ್ನು ಶಾಲು ಹೊದೆಸಿ ಫಲಪುಷ್ಪ ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು.
ಸ್ವಾದಿಷ್ಟ ಮಧ್ಯಾಯನದ ಭೋಜನದ ಬಳಿಕ ಮತ್ತೆ ಪ್ರಾರಂಭವಾದ ಕಾರ್ಯಕ್ರಮಗಳು ಸಂಜೆಯವರೆಗೂ ಮುಂದುವರೆದವು.
ಬಿಲ್ಲವಸ್ ದುಬೈ ಅಂಡ್ ನಾರ್ರ್ಥನ್ ಎಮಿರೇಟ್ಸ್ ಮಹಿಳಾ ವಿಭಾಗ ಪ್ರಸ್ತುತಪಡಿಸಿದ ಗರ್ಭಾ ನೃತ್ಯ (ಕೋಲಾಟ) ಎಲ್ಲರ ಗಮನ ಸೆಳೆಯಿತು. ನಡುನಡುವೆ ರಾಜೇಶ್ ಬಜಲ್ ರವರು ಕೆಲವು ಕನ್ನಡ ಚಿತ್ರಗೀತೆಗಳಿಂದ ಮನರಂಜಿಸಿದರು.
ತುಳುನಾಡಿನ ಒಂದು ಪುರಾತನ ನೃತ್ಯಪ್ರಾಕಾರವಾರ ಕಣಗಿಲು ನೃತ್ಯದಲ್ಲಿ ತೆಂಗಿನಗರಿಗಳ ಸಾಂಪ್ರಾದಾಯಿಕ ಉಡುಗೆ ತೊಟ್ಟ ಸಮೂಹ ಉತ್ತಮ ಪ್ರದರ್ಶನ್ ನೀಡಿತು. ತಂಡದ ಮುಖ್ಯಸ್ಥ ಬಿದಿರಿನ ಬುಟ್ಟಿಯನ್ನು ಹಿಡಿದು ಗಣ್ಯರಿದ್ದಲ್ಲಿ ಸಂಭಾವನೆ ಬೇಡುವ ದೃಶ್ಯ ರಂಜಿಸಿತು. ಉಪಸ್ಥಿತರಿದ್ದ ಗಣ್ಯರು ಕಾಣಿಕೆ ನೀಡಿ ಅವರನ್ನು ಪ್ರೋತ್ಸಾಹಿಸಿದರು.
ಪೋಲೀಸ್ ವೇಷಧಾರಿಯೊಬ್ಬರು ಇಡಿಯ ಸಭಾಂಗಣದಲ್ಲಿ ತಿರುಗಿ ಊರಿನ ಸಾಮಾನ್ಯ ಪೋಲೀಸ್ ಅಧಿಕಾರಿ ತೋರುವ ದರ್ಪದಿಂದ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ತಂದರು.
ಕಳೆದ ವರ್ಷ ಹತ್ತನೆಯ ಹಾಗೂ ಹನ್ನೆರಡೆಯ ವರ್ಗದ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಬಿಲ್ಲವ ಬಳಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೂಕ್ತ ಬಹುಮಾನಗಳೊಂದಿಗೆ ಪ್ರೋತ್ಸಾಹಿಸಲಾಯಿತು. ಈ ಪ್ರಶಸ್ತಿ ಪಡೆದ ನಾಲ್ವರೂ ಹೆಣ್ಣುಮಕ್ಕಳೆಂಬುದು ಒಂದು ವಿಷೇಶ.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತ ಶ್ರೀ ಉಮೇಶ್ ಕುಕ್ಕಿಯಾನ್ ಅವರು ಊರಿನಲ್ಲಿ ತಮ್ಮ ಸಂಘಟನೆ ನೀಡಿದ ಸಹಾಯಗಳ ಕಿರುಪರಿಚಯ ನೀಡಿದರು. ಈದುವರೆಗೂ ಶಿಕ್ಷಣಾರ್ಥ ಹಾಗೂ ವೈದ್ಯಕೀಯ ಮೊದಲಾದ ನೆರವುಗಳಿಗಾಗಿ ಒಟ್ಟು ಇಪ್ಪತ್ತಮೂರು ಲಕ್ಷ ರೂಪಾಯಿ ಗಳನ್ನು ನೀಡಿರುವುದನ್ನು ಅವರು ಪ್ರಚುರಪಡಿಸಿದರು.
ಆ ಬಳಿಕ ಮಾತನಾಡಿದ ಸರ್ವೋತ್ತಮ ಶೆಟ್ಟರು ತುಳುನಾಡಿನ ಮೂರು ಪ್ರಮುಖ ಸಂಘಟನೆಗಳಾದ ಬಿಲ್ಲವ, ಬಂಟ ,ಮೊಗವೀರರು ಹಾಗೂ ಇನ್ನಿತರ ಸಂಘಟನೆಗಳು ಸೇರಿ ಒಂದೇ ಸೂರಿನಡಿ ಕಾರ್ಯನಿರ್ವಹಿಸುವ ತಮ್ಮ ಅಭಿಲಾಷೆಯನ್ನು ತೋಡಿಕೊಂಡರು.
ನಾವು ಇಲ್ಲಿ ವ್ಯರ್ಥವಾಗಿ ವ್ಯಯಿಸುವ ದುಂದುವೆಚ್ಚಗಳಿಂದ ಊರಿನಲ್ಲಿ ಹಲವು ಹಸಿದ ಕುಟುಂಬಗಳಿಗೆ ಸಹಾಯ ನೀಡಬಹುದೆಂದು ಶ್ರೀ ಗಣೇಶ್ ರೈಯವರು ತಮ್ಮ ಭಾಷಣದಲ್ಲಿ ನುಡಿದರು. ಆ ಬಳಿಕ ಮಾತನಾಡಿದ ಮನೋಹರ ತೋನ್ಸೆಯವರು ಈಗಾಗಲೇ ನೀಡಿದ ಇಪ್ಪತ್ತಮ್ಮೂರು ಲಕ್ಷಕ್ಕೂ ಹೆಚ್ಚಿನ ಸಹಾಯ ಮುಂದಿನ ದಿನಗಳಲ್ಲಿ ನೀಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಕಡೆಯಲ್ಲಿ ಆಯೋಜಿಸಲಾಗಿದ್ದ ಲೈವ್ ಡೀಜೆ ಕಾರ್ಯಕ್ರಮದಲ್ಲಿ ಹಲವು ತೀವ್ರಗತಿಯ ಹಾಡುಗಳೂ ವೇದಿಕೆಯನ್ನು ನೃತ್ಯಾಕಣವನ್ನಾಗಿಸಿತು. ಮಕ್ಕಳಾದಿಯಾಗಿ ಹಿರಿಯರೆಲ್ಲರೂ ಕುಣಿದು ಕಪ್ಪಳಿಸಿ ಹಿಂದೆಂದೂ ಇಲ್ಲದಷ್ಟು ಸಂಭ್ರಮ ಮಟ್ಟರು.
ರಾಫೆಲ್ ಡ್ರಾ ಮೂಲಕ ಹಲವು ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು. ಮಂಗಳೂರಿಗೆ ರಿಟರ್ನ್ ಟಿಕೆಡ್, 25 ಗ್ರಾಂ ಚಿನ್ನ, ವಾಚುಗಳು ಅದೃಷ್ಟಶಾಲಿಗಳನ್ನು ಅರಸಿ ಬಂದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಕ್ವಾಲಿಟಿ ಐಸ್ ಕ್ರೀಂ ಸಂಸ್ಥೆ ಉಚಿತ ಐಸ್ ಕ್ರೀಂ ಕೂಪನ್ನುಗಳಿಂದ ಪ್ರೋತ್ಸಾಹಿಸಿತು.
ಅಂತಿಮವಾಗಿ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿಯವರು ವಂದ್ನಾರ್ಪಣೆ ಸಲ್ಲಿಸಿದರು.
ಪ್ರದರ್ಶನದುದ್ದಕ್ಕೂ ಬೃಹತ್ ಪರದೆಗಳ ಮೇಲೆ ಸಂಘದ ಪ್ರಾಯೋಜಕರ ಹಾಗೂ ಸದಸ್ಯರ ವಿವರಗಳು ಮೂಡಿಬರುತ್ತಿದ್ದವು.
ವರದಿ: ಅರ್ಶದ್ ಹುಸೇನ್, ಚಿತ್ರಗಳು: ಸುಜಯ್ ಬೆಂದೂರ್
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-11
|
|
| N. Mohammed Hussain, Dammam | 2008-10-11 | | It must have been a good programme as reported. Even though there are many tulu speaking people in Saudi Arabia, they are not united as people in UAE. We must give importance to the sentence given by Mr. Sarvotham shetty. thanks |
|