ಮಿತ್ತ ಬೈಲು ಯಮುನಕ್ಕ ತುಳುನಾಡಿನ ಸಾಂಸ್ಕೃತಿಕ ಕೃತಿ: ಡಿ.ಕೆ. ಚೌಟ |
ಪ್ರಕಟಿಸಿದ ದಿನಾಂಕ : 2008-10-11
ಮಂಗಳೂರು: ಮಿತ್ತಬೈಲು ಯಮುನಕ್ಕೆ ಎನ್ನುವ ತುಳು ಕೃತಿ ಕೇವಲ ಬಂಟರ ಸಮುದಾಯಕ್ಕೆ ಅಥವಾ ಗುತ್ತಿನ ಮನೆಗೆ ಸೀಮಿತವಾದ ಕೃತಿಯಲ್ಲ ಅದು ಇಡೀ ತುಳುನಾಡಿನ ಸಾಂಸ್ಕೃತಿಕ ಜನಜೀವನದ ಯಾವುದೇ ಜನಾಂಗದ ವಿವರಗಳನ್ನೊಗಂಡ ಕೃತಿಯಾಗಿದೆ ಎಂದು ಮಿತ್ತಬೈಲು ಯಮುನಕ್ಕೆ ತುಳು ಕಾದಂಬರಿಯ ಲೇಖಕ ಡಿ.ಕೆ. ಚೌಟ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಪುರಭವನದಲ್ಲಿ ಲೇಖಕ ಮುಹಮ್ಮದ್ ಕುಳಾಯಿಯವರು ತುಳುನಾಡು ಪಬ್ಲಿಕೇಶನ್ ಅಶ್ರಯದಲ್ಲಿ ಕನ್ನಡಕ್ಕೆ ಅನುವಾದಿಸಲ್ಪಟ್ಟ ಮಿತ್ತ ಬೈಲು ಯಮುನಕ್ಕ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಮಿತ್ತ ಬೈಲು ಯಮುನಕ್ಕೆ ಮೂಲಕೃತಿಯಲ್ಲಿ ತುಳುನಾಡಿನ ಬಂಡ ಸಮುದಾಯದ ಬಗ್ಗೆ ವಿವರ ಇದೆ. ಜೊತೆಗೆ ಒಂದು ಕಾಲದ ಸಾಮಾಜಿಕ, ಸಾಂಸ್ಕರತಿಕ ಬದುಕಿನ ಚಿತ್ರಣ ಇದೆ. ಕಾರಂತರ ಕಾದಂಬರಿಯಲ್ಲೂ ತುಳುನಾಡಿನ ಸಾಂಸ್ಕೃತಿಕ ಸಾಮಾಜಿಕ ಬದುಕಿನ ಚಿತ್ರಣಗಳು ಕಾಣ ಸಿಗುತ್ತವೆ. ಈ ನಿಟ್ಟಿನಲ್ಲಿ ಈ ಇತಿಹಾಸದ ಕೃತಿಯಲ್ಲ. ಅದರೆ ಒಂದು ಕಾಲದ ಜನರ ಜನಜೀವನದ ಚಿತ್ರಣವನ್ನು ನೀಡುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಬ್ರಿಟಿಷರ ವಿರುದ್ಧ ನಡೆದ ದಂಗೆ, ಗಾಂಧೀಜಿಯ ಮರಣದವರೆಗಿನ ಹೋರಾಟದ ಚಿತ್ರಣಗಳು ಸಿಗುತ್ತವೆ. ಗಾಂಧಿಜಿಯ ಕೈಯಲ್ಲಿರುವ ಬೆತ್ತ ಮಂಜೇಶ್ವರ ಗೋವಿಂದ ಪೈ ಅವರು ಕೊಡುಗೆಯಾಗಿ ನೀಡಿರುವುದು ಅದು ಒಂದು ನೈಜ ಘಟನೆ. ಇಂತಹದೇ ಹಲವು ಘಟನೆಗಳು ಈ ಕಾದಂಬರಿಯಲ್ಲಿ ಚಿತ್ರಣಗೊಂಡಿವೆ. ಹಿಂದೆ ನಡೆದಿರ ಬಹುದಾದ ತಪ್ಪುಗಳನ್ನು ನಾನೆಲ್ಲೂ ಸಮರ್ಥಿಸಲು ಹೋಗಿಲ್ಲ. ಒದೊಂದು ಸೃಜನಶೀಲ ಕೃತಿಯೆಂದು ಡಿ.ಕೆ. ಚೌಟ ತಿಳಿಸಿದರು.

ಕೃತಿಯನ್ನು ಲೋಕಾರ್ಪಣೆ ಮಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ಟಿ. ಎಸ್. ನಾಗಾಭರಣ ಮಾತನಾಡಿ, ಇದೊಂದು ಅಪೂರ್ವವಾದ ಕೃತಿ. ಡಿ.ಕೆ. ಚೌಟರು ಸಾಂಸ್ಕರತಿಕ ರಂಗದಲ್ಲಿ ಬಹುಮುಖಕ್ಷೇತ್ರದಲ್ಲಿ ಕೆಲಸ ಮಾಡಿದರು. ಇದೀಗ ಅದ್ಭುತ ಕಾದಂಬರಿಕಾರರಾಗಿ ರೂಪುಗೊಂಡಿದ್ದಾರೆ. ಮುಹಮ್ಮದ್ ಕುಳಾಯಿ ಅವರು ಅನುವಾದಿಸಿದ ಕನ್ನಡ ಕೃತಿ ಸರಳವಾಗಿ ಒಂದು ಕಾಲದ ಇತಿಹಾಸದ ಚಿತ್ರಣವನ್ನು ನೀಡುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಾಹಿತಿ ಡಾ. ವಾಮನ ನಂದಾವರ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಸಾಹಿತಿ ನಾ ಮೊಗಸಾಲೆ, ಕರಾವಳಿ ಸಮೂಹ ಕಾಲೇಜು ಅಧ್ಯಕ್ಷ ಗಣೇಶ್ ರಾವ್, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಿ. ಅಬ್ದುಲ್ ರೆಹ್ಮಾನ್ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ವಹಿಸಿದ್ದರು.
ರತ್ನಾವತಿ ಅವರ ತುಳು ಜನಪದ ಹಾಡಿನ ಮೂಲಕ ಕಾರ್ಯಕ್ರಮ ಅರಂಭಗೊಂಡಿತು.
ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ ಮುಹಮ್ಮದ್ ಕುಳಾಯಿ, ಅನುವಾದಕ್ಕೆ ಸಹಕರಿಸಿದವರನ್ನು ಸ್ಮರಿಸಿದರು. ಬಿ.ಎ. ಮುಹಮ್ಮದಾಲಿ ಕಾರ್ಯಕ್ರಮ ನಿರೂಪಿಸಿದರು. ಉಮರ್ ಯು.ಎಚ್. ಸ್ವಾಗತಿಸಿ, ವಂದಿಸಿದರು.
ಸಾಂಸ್ಕೃತಿಕ ರಂಗ ವಿಸ್ತರಣೆ ಕಷ್ಟ: ನಾಗಾಭರಣ
ಮಂಗಳೂರು, ಅ.10: ಇಂದಿನ ಎಲ್ಲಾ ಕ್ಷೋಭೆಗಳ ನಡುವೆ ಸಾಂಸ್ಕೃತಿಕ ಜಗತ್ತನ್ನು ರೂಪಿಸಿಕೊಳ್ಳುವುದು ತೀರಾ ಕಷ್ಟದ ಕಾರ್ಯ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಇಂದಿಲ್ಲಿ ಅಭಿಪ್ರಾಯಿಸಿ ದರು.
ಮುಹಮದ್ ಕುಳಾಯಿ ಅವರು ಕನ್ನಡಕ್ಕೆ ಅನುವಾದಿಸಿದ ಡಿ. ಕೆ. ಚೌಟ ಅವರ `ಮಿತ್ತಬೈಲ್ ಯಮುನಕ್ಕ' ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಇಂದಿನ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ರಂಗವನ್ನು ವಿಸ್ತರಿಸಿಕೊಳ್ಳುವುದು ಬಹು ಕಷ್ಟದ ಕೆಲಸವಾಗಿದೆ. ಅದೇ ರೀತಿಯಲ್ಲಿ ಪುಸ್ತಕ ಪ್ರಕಾಶನ ಕೂಡಾ ಅತೀ ಅಪಾಯಕಾರಿ ಉದ್ಯಮವಾಗಿ ಪರಿಣಮಿಸಿದೆ ಎಂದರು.
ಚೌಟ ಅವರನ್ನು ಸಮ್ಮಾನಿಸಿದ ಮಾಹೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎಂ. ಹೆಗ್ಡೆ ಮಾತನಾಡಿ, ಬರಹಗಳು ಓದುಗರಿಗೆ ಅರ್ಥವಾಗುವಂತಿರಬೇಕು. ಉದ್ದುದ್ದ ವಾಕ್ಯಗಳ ಬರಹಗಳನ್ನು ಜನರು ಇಷ್ಟಪಡುವುದಿಲ್ಲ. ಇದೇ ಕಾರಣದಿಂದ ಆರ್.ಕೆ. ನಾರಾಯಣ ಇಂಗ್ಲಿಷ್‌ನ ಮೇರು ಕೃತಿಕಾರನಾದರು. ಚೌಟರ ಕೃತಿಗಳು ಕೂಡಾ ಜನಸಾಮಾನ್ಯರು ಓದುವಂತಿವೆ ಎಂದರು.
ಕೃತಿ ಪರಿಚಯ ಮಾಡಿದ ಕನ್ನಡ ವಿವಿ ಸಿರಿಗನ್ನಡ ಮುಖ್ಯಸ್ಥೆ ಡಾ| ಎಚ್. ನಾಗವೇಣಿ ಅವರು ಚೌಟರ ಕೃತಿ ಜಾನಪದೀಯ, ಜನಾಂಗೀಯ ಹಾಗೂ ಮಾನವೀಯ ಅಧ್ಯಯನವೂ ಹೌದು. ಸುಮಾರು 160 ವರ್ಷಗಳ ಕಾಲದ ಕಥೆಯನ್ನು ಚೌಟರು ಸುಂದರವಾಗಿ ಹೆಣೆದಿದ್ದಾರೆ ಎಂದರು.
ಚೌಟರ ಚಿತ್ರಿಕ ಶಕ್ತಿ ಹಾಗೂ ಸನ್ನಿವೇಶಗಳನ್ನು ಜೋಡಿಸುವ ಸಾಮರ್ಥ್ಯ ಅದ್ಭುತವಾದುದು ಎಂದು ಅವರು ಬಣ್ಣಿಸಿದರು.
ಸಮ್ಮಾನಕ್ಕೆ ಉತ್ತರಿಸಿದ ಡಿ.ಕೆ. ಚೌಟ ತನ್ನ ಕಾದಂಬರಿ ಇತಿಹಾಸವಂತೂ ಅಲ್ಲ. ಅದೊಂದು ಸಾಮಾನ್ಯ ಕಥಾನಕ. ಯಾವುದೇ ಸಮಾಜದಲ್ಲೂ ನಡೆಯಬಹುದಾದ ಘಟನೆಗಳ ಕಥೆಯಿದು ಎಂದರು.
ತುಳು ಅಕಾಡೆಮಿಯ ಅಧ್ಯಕ್ಷರಾಗಿದ್ದ ಬಾಲಕೃಷ್ಣ ಪೊಳಲಿ ಅವರ ಒತ್ತಾಯಕ್ಕೆ ಈ ಕೃತಿಯನ್ನು ಬರೆಯಲು ಆರಂಭಿಸಿದೆ. ಅರ್ಧದಲ್ಲಿ ನಿಂತಾಗ ಡಾ| ವಿವೇಕ ರೈ, ವಾಮನ ನಂದಾವರ ಅವರ ಒತ್ತಡದಿಂದ ಪೂರ್ಣಗೊಳಿಸಿದೆ ಎಂದು ಚೌಟ ವಿವರಿಸಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕರಾವಳಿ ಕಾಲೇಜು ಸಮೂಹ ಸಂಸ್ಥೆ ಸಂಸ್ಥಾಪಕ ಗಣೇಶ್ ರಾವ್, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ವಾಮನ ನಂದಾವರ , ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಿ. ಅಬ್ದುಲ್ ರೆಹಮಾನ್, ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ. ಮೊಗಸಾಲೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಅತಿಥಿಗಳಾಗಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ| ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ತುಳುನಾಡು ಪಬ್ಲಿಕೇಷನ್ ಅಧ್ಯಕ್ಷ ಉಮರ್ ಯು.ಎಚ್. ಸ್ವಾಗತಿಸಿದರು. ಬಿ.ಎ. ಮಹಮದ್ ಅಲಿ ಕಾರ್ಯಕ್ರಮ ನಿರ್ವಹಿಸಿದರು
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ| ಉದಯವಾಣಿ ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-11
|
|
|