ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಮೊತ್ತ 1 ಲಕ್ಷರು.ಗೆ ಏರಿಕೆ |
ಪ್ರಕಟಿಸಿದ ದಿನಾಂಕ : 2008-10-08
ಧಾರವಾಡ: ಧಾರವಾಡದ ಸಾಧನಕೇರಿಯಲ್ಲಿರುವ ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್, ನೀಡುವ ’ಅಂಬಿಕಾತನಯದತ್ತ’ ಪ್ರಶಸ್ತಿಯ ಮೊತ್ತವನ್ನು ಈ ವರ್ಷದಿಂದ 1 ಲಕ್ಷ ರು.ಗೆ ಏರಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ಹೇಳಿದರು.
ಪ್ರಶಸ್ತಿ ಮೊತ್ತ 10 ಸಾವಿರದಿಂದ ಆರಂಭವಾಗಿ 25 ಸಾವಿರ, 50 ಸಾವಿರ ರು.ವರೆಗೆ ನಿಗದಿ ಮಾಡಲಾಗಿತ್ತು. ಈಗ 1 ಲಕ್ಷಕ್ಕೆ ಏರಿಸಲಾಗಿದೆ.
ಸರ್ಕಾರದಿಂದ ವರ್ಷಕ್ಕೆ 11 ಲಕ್ಷ ಅನುದಾನ ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸಿದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
4 ನೇ ಬಾರಿ: ಈ ಅಂಬಿಕಾತನಯದತ್ತ ಪ್ರಶಸ್ತಿಯನ್ನು ಮೂರು ವರ್ಷ ರಾಜ್ಯದ ಸಾಹಿತಿಗಳಿಗೆ ಅವರ ಕಾವ್ಯ, ವಿಮರ್ಶೆ, ನಾಟಕ ಸಾಹಿತ್ಯದ ಮಾನದಂಡ ಪರಿಶೀಲಿಸಿ ನೀಡಲಾಗುವುದು.
ಹಾಗೂ 4 ನೇ ವರ್ಷ ಮಾತ್ರ ರಾಷ್ಟ್ರಮಟ್ಟದ ಕವಿಗೆ ಈ ಪ್ರಶಸ್ತಿ ನೀಡಲಾಗುವುದು. ಅಂತೆಯೇ ಈ ವರ್ಷ ರಾಷ್ಟ್ರಮಟ್ಟದ ಸಾಹಿತಿಗೆ ಅಂಬಿಕಾತನಯದತ್ತ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದರು.
8 ಸಾಹಿತ್ಯ ಪ್ರಕಾರಗಳಿಗೆ: ಪ್ರತಿ ವರ್ಷ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಇಬ್ಬರಿಗೆ 10 ಸಾವಿರ ರು. ಅಂತೆ ಶಿಷ್ಯ ವೇತನ ನೀಡುತ್ತಿತ್ತು. ಆದರೆ ಪ್ರಸಕ್ತ ವರ್ಷ ತಲಾ 5 ಸಾವಿರ ರು. ಮೊತ್ತದ 8 ಸಾಹಿತ್ಯ ಪ್ರಕಾರಗಳಿಗೆ ಅಂದರೆ ಕಾವ್ಯ, ನಾಟಕ, ವಿಮರ್ಶೆ, ಜೀವನ ಚರಿತ್ರೆ, ಆತ್ಮ ಚರಿತ್ರೆ, ಸಂಶೋಧನೆ, ಜನಪದ ಪ್ರಕಾರಗಳಿಗೆ ಆಯ್ಕೆಯಾದ 40 ವರ್ಷದ ಕೆಳಗಿನ ಸಾಹಿತಿಗಳಿಗೆ ನೀಡಲು ಚರ್ಚಿಸಲಾಗಿದೆ ಎಂದು ಕಲಬುರ್ಗಿ ಹೇಳಿದರು.
ಬೇಂದ್ರೆ ವೇದಿಕೆ: ರಾಜ್ಯದ ಹುನಗುಂದ ಸಿಂದಗಿ ಸೇರಿದಂತೆ ಅನೇಕ ಪ್ರದೇಶದಲ್ಲಿ ಬೇಂದ್ರೆ ವೇದಿಕೆಗಳು ಕಾರ್ಯ ನಿರ್ವಹಿಸುತ್ತಿವೆ.
ಆ ವೇದಿಕೆಗಳಿಗೆ ಪ್ರೇರಣೆ ನೀಡಲು ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ವರ್ಷಕ್ಕೆ ಒಂದು ಬಾರಿ ಇಲ್ಲಿ ಎಲ್ಲ ವೇದಿಕೆ ಸದಸ್ಯರನ್ನು ಒಗ್ಗೂಡಿಸಿ ಅವರ ಜೊತೆಯಲ್ಲಿ ಮುಕ್ತ ಚರ್ಚೆ ಮಾಡಲಾಗುವುದು ಎಂದರು. ಅಲ್ಲದೆ ಅವುಗಳ ಬೆಳವಣಿಗೆಗೆ ಬೇಕಾದ ಸೌಲಭ್ಯಗಳನ್ನು ಈಡೇರಿಸ ಲಾಗುವುದು ಎಂದು ತಿಳಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-08
|
|
|