ಶಿಕ್ಷಣ ಮಂತ್ರಿ ಶ್ರೀ ಕಾಗೇರಿ ವಿಶ್ವೇಶ್ವರ ಹೆಗಡೆಯವರ ಅಬುಧಾಬಿ ಭೇಟಿ : ವಿಶೇಷ ಸಂದರ್ಶನ |
ಪ್ರಕಟಿಸಿದ ದಿನಾಂಕ : 2008-10-08
ಅಬುಧಾಬಿಯ ಶಾಲೆ ವೀಕ್ಷಣೆ : ಅಚ್ಚುಕಟ್ಟುತನ ಹಾಗೂ ನಿರ್ವಹಣೆಯ ಶ್ಲಾಘನೆ
ಅಬುಧಾಬಿ, ಅಕ್ಟೋಬರ್ 7: ದುಬೈ ಭಟ್ಕಳ ನವಾಯತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಿಕ್ಷಣ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀ ಕಾಗೇರಿ ವಿಶ್ವೇಶ್ವರ ಹೆಗ್ಗಡೆಯವರು ಅಕ್ಟೋಬರ್ ೪ ರಂದು ಅಬುಧಾಬಿಗೆ ಭೇಟಿ ನೀಡಿದರು. ಅಬುಧಾಬಿ ಕರ್ನಾಟಕ ಸಂಘದ ಮಹಾಪೋಷಕರಾದ ಹಾಗೂ ಎನ್.ಎಮ್.ಸಿ. ಸಮೂಹ ಸಂಸ್ಥೆಗಳ ಮಾಲಿಕರಾದ ಡಾ. ಬಿ.ಆರ್. ಶೆಟ್ಟಿ ಹಾಗೂ ಇನ್ನೂ ಹಲವಾರು ಗಣ್ಯರನ್ನು ಭೇಟಿಯಾದ ಸಚಿವರು ಅಬುಧಾಬಿಯ ಭಾರತೀಯ ಶಾಲೆ-ಎ.ಡ್.ಐ.ಸಿ (ಅಬುಧಾಬಿ ಇಂಡಿಯನ್ ಸ್ಕೂಲ್)ಗೆ ಭೇಟಿ ನೀಡಿದರು. ಮೊದಲು ಎನ್.ಎನ್.ಸಿ. ಸಮೂಹ ಸಂಸ್ಥೆಗಳ ಹಲವು ಆಸ್ಪತ್ರೆ ಹಾಗೂ ಸಂಸ್ಥೆಗಳಿಗೆ ಭೇಟಿ ನೀಡಿದ ಬಳಿಕ ಅಬುಧಾಬಿಯ ಶಾಲೆ ನಿರ್ವಹಿಸುವ ಬಗ್ಗೆ ಹೆಚ್ಚಿನ ಕುತೂಹಲ ತೋರಿದರು.

ಸಚಿವರ ಕುತೂಹಲಕ್ಕೆ ಸ್ಪಂದಿಸಿದ ಅಬುಧಾಬಿ ಇಂಡಿಯನ್ ಸ್ಕೂಲ್ ಪ್ರಾಂಶುಪಾಲರಾದ ಶ್ರೀ ವಿ.ಕೆ. ಮಾಥುರವರು ಸಚಿವರನ್ನು ಹಾಗೂ ಅವರ ಬಳಗವನ್ನು ಇಡಿಯ ಶಾಲೆಯ ಆವರಣದ ದರ್ಶನ ಹಾಗೂ ಶಾಲೆಯ ನಿರ್ವಹಣೆಯ ಬಗ್ಗೆ ನಿರೂಪಣೆ ನೀಡಿದರು.

ಶಾಲೆಯ ಆವರಣದ ಸ್ವಚ್ಛತೆ, ಶುಭ್ರವಾಗಿರುವ ಶೌಚಾಲಯ, ಶಿಸ್ತು, ಅಚ್ಚುಕಟ್ಟುತನ, ಸಮಯಪಾಲನೆ ಮೊದಲಾದವುಗಳನ್ನು ಸ್ವತಃ ಪರಿಶೀಲಿಸಿದ ಸಚಿವರು ತಮ್ಮ ಪ್ರಶಂಸೆ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ತನ್ನದೇ ಪ್ರತ್ಯೇಕ ಈಜುಕೊಳ ಹೊಂದಿರುವ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಳೆದ ನಾಲ್ಕು ವರ್ಷಗಳಿಂದ ಸಿ.ಬಿ.ಎಸ್.ಇ. ಚಾಂಪ್ಯನ್ ಶಿಪ್ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆ ವಿಶಾಲವಾದ ಸಭಾಂಗಣ ಹಾಗೂ ನೂರು ಜನರಿಗೆ ಸ್ಥಳಾವಕಾಶ ನೀಡುವ ವೇದಿಕೆಯನ್ನು ಹೊಂದಿರುವುದು ಸಚಿವರ ಶ್ಲಾಘನೆಗೆ ಪಾತ್ರವಾಯಿತು.
ಭಾರತದ ಯಾವುದೇ ಶಾಲೆಗೆ ಅಬುಧಾಬಿ ಭಾರತೀಯ ಶಾಲೆ ಮಾದರಿ ಯಾಗಿದೆ ಎಂದು ಉದ್ಗರಿಸಿದ ಸಚಿವರು ಮುಕ್ತಕಂಠದಿಂದ ತಮ್ಮ ಮೆಚ್ಚುಗೆ ಯನ್ನು ಪ್ರಕಟಿಸಿದರು.

ಅಬುಧಾಬಿ ಕನ್ನಡ ಸಂಘದ ಮಹಾಪೋಷಕರಾದ ಡಾ. ಬಿ.ಆರ್. ಶೆಟ್ಟಿ, ಮುಖ್ಯ ಸಂಘಟಕರಾದ ಶ್ರೀ ಸರ್ವೋತ್ತಮ ಶೆಟ್ಟಿ, ಯು.ಎಇ. ಎಕ್ಸ್ ಚೇಂಜ್ ಸಂಸ್ಥೆಯ ಜಿ.ಎಮ್.ಐ ಹಾಗೂ ಸಿ.ಇ.ಒ. ಶ್ರೀ ಸುಧೀರ್ ಕುಮಾರ್ ಶೆಟ್ಟಿ, ಶ್ರೀ ನಾರಾಯಣ ಜಿ. ಕೊಲ್ಲೆ, ಭಟ್ಕ್ಳ ನವಾಯತರ ಸಂಘಟನೆಯ ಸದಸ್ಯರಾದ ಶ್ರೀ ಬಾಷಾ, ಅಬುಧಾಬಿ ಇಂಡಿಯನ್ ಸ್ಕೂಲ್ ಪ್ರಾಂಶುಪಾಲರಾದ ಶ್ರೀ ವಿ.ಕೆ. ಮಾಥು ಸಹಿತ ಹಲವು ಗಣ್ಯರು ಸಚಿವರೊಂದಿಗೆ ಶಾಲೆಯ ಆವರಣಕ್ಕೆ ಭೇಟಿ ನೀಡಿದರು.
ಆ ಬಳಿಕ ಸಚಿವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಹೀಗಿವೆ:
ಪ್ರ: ಯು.ಎಇ.ಗೆ ಇದು ನಿಮ್ಮ ಪ್ರಥಮ ಭೇಟಿ. ಮೊದಲ ಪ್ರತಿಕ್ರಿಯೆ ಏನು? ಉ: ಮರಳುಗಾಡನ್ನು ಹಸಿರು ಮಾಡಿದ್ದಾರೆ ಎಂಬ ವಿಷಯ ತಿಳಿದಿತ್ತು. ಇಲ್ಲಿನ ಅಭಿವೃದ್ಧಿಯನ್ನು ಕಂಡಾಗ ಇದು ಯಾರಿಗೂ ಸ್ಪೂರ್ತಿ ನೀಡಬಲ್ಲದು ಎನ್ನಿಸಿತು
ಪ್ರ: ಶಿಕ್ಷಣ ಕ್ಷೇತ್ರದಲ್ಲಿ ನೀವು ಎದುರಿಸುತ್ತಿರುವ ಒಂದು ಅತಿ ದೊಡ್ಡ ಸಮಸ್ಯೆ ಯಾವುದು? ಉ: ಮನಸ್ಸಿಟ್ಟು ದುಡಿಯುವ ಶಿಕ್ಷಕರ ಕೊರತೆಯೇ ನಮ್ಮ ದೊಡ್ಡ ಸಮಸ್ಯೆ. ಶಿಕ್ಷಕ ವೃತ್ತಿಗೆ ಪ್ರಥಮ ಆದ್ಯತೆ ಬರುವ ತನಕ ನಮಗೆ ಈ ಸಮಸ್ಯೆಯನ್ನು ಎದುರಿಸದೆ ಬೇರೆ ದಾರಿಯೇ ಇಲ್ಲ.
ಪ್ರ: ಸಧ್ಯದ ಪರಿಹಾರ ಯೋಜನೆ ಏನು (ಈ ಸಮಸ್ಯೆಗೆ)? ಉ: ಮಾಸಿಕ ವೇತನವನ್ನು ಖಾಸಗಿಯವರಿಗಿಂತ ಮೂರು ಪಟ್ಟು ನೀಡುತ್ತಿದ್ದೇವೆ. ಇನ್ನೂ ಹತ್ತು ಹಲವಾರು ಸೌಲಭ್ಯಗಳನ್ನು ನೀಡಿ ಶಿಕ್ಷಕರನ್ನು ಹುರಿದುಂಬಿಸುವ ಪ್ರಯತ್ನ ನಡೆದಿದೆ.
ಪ್ರ: ಮಧ್ಯಾಹ್ನದ ಊಟ ಮತ್ತು ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಯೋಜನೆಯಲ್ಲಿ ಮೋಸ ನಡೆಯುತ್ತಿದೆ ಎಂಬ ಆರೋಪಕ್ಕೆ ನಿಮ್ಮ ಉತ್ತರ? ಉ: ಯೋಜನೆಗಳು ಅನುಷ್ಠಾನದ ಹಂತದಲ್ಲಿರುವಾಗ ಅಥವಾ ಯಾವುದೇ ಹಂತದಲ್ಲಿರಲಿ ಆರೋಪಗಳು ರಾಜಕೀಯದಲ್ಲಿ ಸಾಮಾನ್ಯ. ಅವುಗಳನ್ನು ಎದುರಿಸಿ ಮುನ್ನಡೆಯಬೇಕಾಗುತ್ತದೆ. ೧ರಿಂದ್ ೭ ನೇ ತರಗತಿಯವರೆಗೆ ಇದ್ದ ಮಧ್ಯಾಹ್ನದ ಊಟದ ಯೋಜನೆಯನ್ನು ೮ರಿಂದ ೧೦ ನೇ ತರಗತಿಯವರೆಗೆ ವಿಸ್ತರಿಸಿದ್ದೇವೆ. ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಊರ ಸಮುದಾಯದ ಸಮ್ಮುಖದಲ್ಲಿಯೇ ಸೈಕಲ್ ವಿತರಣೆ ನೀಡಲಾಗಿದೆ. ಅಪಚಾರ ನಡೆಯದೇ ಇರುವುದಕ್ಕೆ ಜನರೇ ಸಾಕ್ಷಿ.
ಪ್ರ: ಭಾಗ್ಯಲಕ್ಷ್ಮಿ ಯೋಜನೆ ನಿಮಗೆ ತೃಪ್ತಿ ತಂದಿದೆಯೇ? ಇದರಲ್ಲಿ ನಿಮ್ಮ ಸರಕಾರ ಪಾರದರ್ಶಿಕತೆಯನ್ನು ತೋರಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಆರೋಪ ಹೊರಿಸಿದ್ದಾರಲ್ಲ? ಉ: ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಒಂದು ಹೆಣ್ಣು ಮಗುವಿನ ಹೆಸರಲ್ಲಿ ರಾಜ್ಯದ ಸರಕಾರದ ವತಿಯಿಂದ ಇಪ್ಪತ್ತು ಸಾವಿರ ರೂಪಾಯಿ ಠೇವಣಿ ಇಡುವ ಈ ಯೋಜನೆ ಜನತೆಯ ಪ್ರಶಂಸೆಯನ್ನು ಪಡೆದಿದೆ. ಆ ಮಗು 18 ರ ಪ್ರಾಯ ಪಡೆಯುವಾಗ ಒಂದು ಲಕ್ಷ ರೂಪಾಯಿ ಪಡೆಯುವುದು ಮಾತ್ರವಲ್ಲದೇ ವೈದ್ಯಕೀಯ ಸೌಲಭ್ಯ ಇದರಲ್ಲಿ ಸೇರಿದೆ. ಆರೋಪಗಳನ್ನು ಬದಿಯಲ್ಲಿಟ್ಟು ನಾವು ಜನರಿಗೋಸ್ಕರ ನಡೆಸುತ್ತಿರುವ ಯೋಜನೆಗಳತ್ತ ಗಮನ ಹರಿಸುವ.
ಪ್ರ: -ಸರ್ವಶಿಕ್ಷ- ಯೋಜನೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಇದರ ಬಗ್ಗೆ ಸ್ವಲ್ಪ ವಿವರಣೆ: ಉ: ಈ ಅಭಿಯಾನದಲ್ಲಿ ಮುಖ್ಯವಾಗಿ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಹಲವಾರು ಕಾರಣಗಳಿಂದ ಶಿಕ್ಷಣವನ್ನು ಮುಂದುವರಿಸಲಾಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪುನಃ ಶಾಲೆಗೆ ಕರೆತಂದು ಮುಂದಿನ ಜೀವನವನ್ನು ರೂಪಿಸುವತ್ತ ಸೂಕ್ತ ಮಾರ್ಗದರ್ಶನ ನೀಡುವುದೇ ಆಗಿದೆ.
ಪ್ರ: ಇಂತಹ ವಿದ್ಯಾರ್ಥಿಗಳನ್ನು ಗುರುತಿಸುವ ಬಗೆ ಹೇಗೆ? ಅಥವಾ ಇಂತಹ ಒಂದು ಯೋಜನೆ ಇದೆ ಎಂದು ತಂದೆ ತಾಯಿಯರಿಗೆ ತಿಳಿಯುವುದು ಹೇಗೆ? ಉ: ಒಳ್ಳೆಯ ಪ್ರಶ್ನೆ. ಈ ನಿಟ್ಟಿನಲ್ಲಿ ನಾವು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಇದರ ಬಗ್ಗೆ ಚಿಂತಕರೊಂದಿಗೆ ಚರ್ಚೆ ನಡೆದಿದೆ. ಕಾರ್ಯಸೂಚಿ ತಯಾರಾದ ಬಳಿಕ ಅನುಷ್ಠಾನಕ್ಕೆ ತಂದು ಯಶಸ್ವಿಗೊಳಿಸದೇ ಬಿಡುವುದಿಲ್ಲ
ಪ್ರ: ಶಿಕ್ಷಣಾ ಮಾಧ್ಯಮದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆಂಬ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಅಡ್ಡ ಬಂದಿದೆಯೆಲ್ಲಾ, ಇದನ್ನು ಹೇಗೆ ನಿಭಾಯಿಸುತ್ತೀರಿ? ಉ: ಮಾತೃಭಾಷೆ ಕಲಿಸಲು ಅಡ್ಡಿಯಿಲ್ಲವಾದರೂ ಶಿಕ್ಷಣ ಮಾಧ್ಯಮ ಇಂಗ್ಲಿಷಿನಲ್ಲೇ ಆಗಬೇಕೆಂಬ ಉಚ್ಛನ್ಯಾಯಾಲಯದ ಆದೇಶ ನಮಗೆ ತೊಂದರೆ ತಂದಿದೆ. ಮತ್ತೊಮ್ಮೆ ನಾವು ಮನವಿ ಸಲ್ಲಿಸಿದ್ದೇವೆ. ಉದ್ದೇಶ ಒಳ್ಳೆಯದಿರುವಾಗ ಜಯ ಲಭಿಸುತ್ತದೆ ಎಂಬ ನಂಬಿಕೆ ನಮಗಿದೆ.
ಪ್ರ: ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಕಾಲ ವ್ಯಯಿಸಿದ ತಮಗೆ ಧನ್ಯವಾದಗಳು. ತಮ್ಮ ಪ್ರಯತ್ನಗಳಿಗೆ ಜಯ ಸಿಗಲಿ ಎಂದು ಹಾರೈಸುತ್ತೇವೆ. ಉ: ಧನ್ಯವಾದಗಳು.
ವರದಿ ಮತ್ತು ಸಂದರ್ಶನ: ಅನಂತ್, ಅಬುಧಾಬಿ ಚಿತ್ರ: ಸರ್ವೋತ್ತಮ ಶೆಟ್ಟಿ.
ವರದಿಯ ವಿವರಗಳು |
 |
ಕೃಪೆ : ವರದಿ ಮತ್ತು ಸಂದರ್ಶನ: ಅನಂತ್, ಅಬುಧಾಬಿ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-08
|
|
| Franklin Almeda, Udupi | 2008-10-08 | | ಪಠ್ಯ ಬದಲಾವಣೆಗೆ ಇಷ್ಟು ಚುರುಕಿನಿಂದ ನೀಲ ನಕಾಶೆ ತಯಾರಿಸುವ ಸರಕಾರ, ರೈತರ ಕುರಿತಂತೆ, ಪ್ರಾಥಮಿಕ ಶಿಕ್ಷಣದ ಇನ್ನಿತರ ಮೂಲಭೂತ ಅತ್ಯಗತ್ಯ ಬೇಡಿಕೆಗಳಿಗೆ ಯಾಕೆ ಅಷ್ಟೇ ಚುರುಕಾಗಿ ಸ್ಪಂದಿಸಲು ಸಾಧ್ಯವಾಗಿಲ್ಲ? ಇದರರ್ಥ ಪಠ್ಯಪುಸ್ತಕ ಬದಲಾವಣೆಯ ಅವಶ್ಯಕತೆಯಿಲ್ಲ ಎಂದಲ್ಲ. ಪಠ್ಯ ಪುಸ್ತಕ ಮಾತ್ರವಲ್ಲ, ಒಟ್ಟು ಶಿಕ್ಷಣವೇ ಅಮೂಲಗ್ರಾ ಬದಲಾವಣೆಯನ್ನು ಬಯಸುತ್ತಿದೆ. ಆಧುನಿಕ ಬದಲಾವಣೆಗೆ ಪೂರಕವಾಗಿ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ಕಳೆದ ೧೫ ವರ್ಷಗಳಲ್ಲಿ ಸಮಾಜದ ಬೆಳವಣಿಗೆ ಅತ್ಯಂತ ವೇಗವಾಗಿ ನಡೆದಿದೆ. ಆದರೆ ನಮ್ಮ ಪಠ್ಯಗಳು ಮಾತ್ರ ನಿಂತ ನೀರಾಗಿವೆ. ಕಂಪ್ಯೂಟರ್ ತಂತ್ರಜ್ಞಾನವನ್ನು ಕಲಿಕೆಯಲ್ಲಿ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಈ ಎಲ್ಲಾ ಕಾರಣದಿಂದ, ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡ ಶಿಕ್ಷಣ ತಜ್ಞರನ್ನು, ಚಿಂತಕರನ್ನು ಬಳಸಿಕೊಂಡು ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ಮಾಡಲು ಸರಕಾರ ಹೆಜ್ಜೆಯಿಡಬೇಕು.
ಬದಲಾವಣೆ ಅವಸರವಸರವಾಗಿ ಸಂಘಪರಿವಾರದ ಮೂಗಿನ ನೇರಕ್ಕೆ ನಡೆಯುವುದಲ್ಲ. ಬದಲಾವಣೆ ನಮ್ಮ ಮಕ್ಕಳನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಬೇಕೇ ಹೊರತು, ಹಿಂದಕ್ಕಲ್ಲ. ಕೆಲವು ಪಾಠಗಳನ್ನು ಸೇರಿಸಿ, ತಮಗೆ ಬೇಕಾದಂತೆ ತಿದ್ದು ಪಡಿ ಮಾಡಿದರೆ ಅದನ್ನು ಬದಲಾವಣೆಯೆಂದು ಕರೆಯಲಾಗುವುದಿಲ್ಲ. ಬದಲಿಗೆ ಪಠ್ಯಪುಸ್ತಕಗಳ ವಿರೂಪ ಎಂದು ಕರೆಯಬೇಕಾಗುತ್ತದೆ. ಕಾಗೇರಿ ಹೇಳಿದ ಮಾತು ಇದಕ್ಕೆ ಪೂರಕವಾಗಿಯೇ ಇದೆ. ಅವರ ಕಣ್ಣು ಗಣಿತ, ವಿಜ್ಞಾನ ಇತ್ಯಾದಿಗಳ ಮೇಲೆ ಬಿದ್ದಿಲ್ಲ. ನೇರವಾಗಿ ಇತಿಹಾಸ ಪಠ್ಯದಲ್ಲಿ ತಿದ್ದುಪಡಿ ಮಾಡಲು ಹೊರಟಿದ್ದಾರೆ. ‘ಪಠ್ಯ ಕ್ರಮದಲ್ಲಿ ಈಗಿರುವ ಇತಿಹಾಸವನ್ನು ಬದಲಾಯಿಸಿ ಇತಿಹಾಸವನ್ನು ಹೊಸ ರೂಪದಲ್ಲಿ ಕೊಡಬೇಕು' ಎಂಬ ಹೇಳಿಕೆ ಸಂಘಪರಿವಾರ ಹಿನ್ನೆಲೆಯಲ್ಲಿರುವ ಸಚಿವರ ಬಾಯಿಯಿಂದ ಹೊರಬಿದ್ದರೆ ಅದರ ಉದ್ದೇಶ ಏನು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಕಾಗೇರಿ ಪಠ್ಯ ಪುಸ್ತ್ತಗಳನ್ನು ಮುಂದಕ್ಕೆ ಕೊಂಡೊಯ್ಯುವ ಬದಲು, ಹಿಂದಕ್ಕೆ ಕೊಂಡೊಯ್ಯಲು ಹೊರಟಿದ್ದಾರೆ. ಅಂಬೇಡ್ಕರ್, ಗಾಂಜಿ, ಪೆರಿಯಾರ್, ಜ್ಯೋತಿಬಾ ಪುಲೆ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಚಿಂತನೆಗಳ ಸ್ಥಾನದಲ್ಲಿ ವರ್ಗಭೇದ, ವರ್ಣಭೇದಗಳನ್ನು ಪೋಷಿಸಿದ ಮನುವಿನ ಚಿಂತನೆಯನ್ನು ಸ್ಥಾಪಿಸಲು ಹೊರಟಿದ್ದಾರೆ. ಇದರ ನೀಲನಕ್ಷೆ ಅಥವಾ ಕೇಸರಿ ನಕ್ಷೆಯನ್ನು ಆರೆಸ್ಸಸ್ ಕೃಪಾಪೋಷಿತ ಚಿದಾನಂದಮೂರ್ತಿಯವರಂತಹ ಚಿಂತಕರು ಈಗಾಗಲೇ ಸಿದ್ಧಪಡಿಸಿದ್ದಾರೆ. ಅಕಾರ ಉರುಳುವ ಮೊದಲು ಆ ಕೇಸರಿ ನಕ್ಷೆಗೆ ಜೀವ ಕೊಡುವ ಪ್ರಯತ್ನದಲ್ಲಿದ್ದಾರೆ ಕಾಗೇರಿ.
ಬಿಜೆಪಿ ಅಕಾರಕ್ಕೇರಿದ ಒಂದೇ ಒಂದು ತಿಂಗಳಲ್ಲಿ ರೈತ ವಿರೋದಿ ಎನ್ನುವುದನ್ನು ನಿರೂಪಿಸಿತು. ಇದೀಗ ಅದು ತನ್ನ ನಂಜು ಉಗುರುಗಳನ್ನು ಎಳೆಯ ಕಂದಮ್ಮಗಳ ಎಡೆಗೆ ಚಾಚಿದೆ. ಅವರ ಮೆದುಳನ್ನೇ ವಿಷಪೂರಿತಗೊಳಿಸಲು ಹೊರಟಿದೆ. ಆ ಉಗುರುಗಳಿಂದ ನಮ್ಮ ಮಕ್ಕಳನ್ನು ಕಾಪಾಡಲೇ ಬೇಕಾಗಿದೆ. ಆ ಮೂಲಕ ನಾವು ನಮ್ಮ ಭವಿಷ್ಯವನ್ನು ಕಾಪಾಡಬೇಕಾಗಿದೆ |
| RAMESH MANJESHWAR, BAHRAIN | 2008-10-08 | | CONGRATULATIONS TO THE ORGANISERS
VERY CONSTRUCTIVE INTERVIEW.
HON'BLE MINISTER ANSWERED VERY THOROUGHLY
ALL THE BEST.
BEST REGARDS |
|