ಮನಾಮಾ: ಗುರುಸೇವಾ ಸಮಿತಿಯ ಸಂಭ್ರಮದ ವಿಹಾರಕೂಟ ಹಾಗೂ ಖಾದ್ಯೋತ್ಸವ |
ಪ್ರಕಟಿಸಿದ ದಿನಾಂಕ : 2008-10-06
ಮನಾಮಾ, ಅಕ್ಟೋಬರ್ ೬:ಇಲ್ಲಿನ ಬಿಲ್ಲವರ ಸಂಘಟನೆಯಾದ ಗುರುಸೇವಾ ಸಮಿತಿಯು ಈದ್ ಹಬ್ಬದ ರಜಾದಿನಗಳಲ್ಲಿ ವಿಹಾರ ಕೂಟವೊಂದನ್ನು ಏರ್ಪಡಿಸಿತ್ತು. ನಗರದ ಸಿತ್ರಾದಲ್ಲಿರುವ ಹಾಲಿಡೇ ವಿಲ್ಲಾಸ್ ನ ವಿಶಾಲವಾದ ಈಜುಕೊಳದ ಪರಿಸರದಲ್ಲಿ ಜರುಗಿದ ಈ ವಿಹಾರಕೂಟದಲ್ಲಿ ಗುರುಸೇವಾ ಸಮಿತಿಯ ಇನ್ನೂರಕ್ಕೂ ಹೆಚ್ಚು ಸದಸ್ಯರು ತಮ್ಮ ಪರಿವಾರದೊಂದಿಗೆ ಪಾಲ್ಗೊಂಡು ಇಡಿಯ ದಿನ ಆನಂದದಿಂದ ಕಾಲ ಕಳೆದರು.
ವಿಹಾರ ಕೂಟದಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಪುಟಾಣಿಗಳಿಗೆ ವಿವಿಧ ರೀತಿಯ ಮಜರಂಜನಾ ಆಟೋಟ ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು. ಇವುಗಳಲ್ಲಿ ವಾಲಿಬಾಲ್, ಚಮಚದಲ್ಲಿ ನಿಂಬೆಹಣ್ಣು, ಹಗ್ಗಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ಸಂಗೀತ ಕುರ್ಚಿ ಮೊದಲಾದವು ಒಳಗೊಂಡಿದ್ದವು.
ಮಹಿಳೆಯರು ಹಾಗೂ ಪುರುಷರು ಮನೆಯಿಂದ ತಯಾರಿಸಿಕೊಂಡು ತಂದಿದ್ದ ಹಲಬಗೆಯ ರುಚಿಯಾದ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಭಕ್ಷ್ಯಗಳು ಹಾಗೂ ಖಾದ್ಯಗಳು ಈ ವಿಹಾರ ಕೂಟದ ಪ್ರಧಾನ್ ಆಕರ್ಷಣೆಯಾಗಿತ್ತು. ಈ ಖಾದ್ಯೋತ್ಸವದಲ್ಲಿ ಗ್ರಾಮೀಣ ಪದಾರ್ಥಗಳಾದ ಬಂಡಾನ್ ಗಸಿ, ಪುರುವಯಿ ಗಸಿ, ಎಟ್ಟಿ ಗಸಿ ಮೊದಲಾದವುಗಳು ಎಲ್ಲರೂ ಚಪ್ಪರಿಸುವಂತೆ ಮಾಡಿದವು. ಮಾಂಸಾಹಾರಿ ಹಾಗೂ ಸಸ್ಯಾಹಾರಿ ವಿಭಾಗಗಳಲ್ಲಿ ಪ್ರತ್ಯೇಕವಾದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಅಂತಿಮವಾಗಿ ವಿಜೇತರಿಗೆ ಬಹುಮಾನಗಳಿಂದ ಸತ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ಇಲ್ಲಿನ ಹಿರಿಯ ಅನಿವಾಸಿ ಬಿಲ್ಲವರಾದ ಶ್ರೀ ಲೋಕೇಶ್ ಮಣಿಪಾಲ್ ಅವರು ತಾಯ್ನಾಡಿನಲ್ಲಿ ಶಾಶ್ವತವಾಗಿ ನೆಲೆಸಲು ತೆರಳುತ್ತಿರುವುದರಿಂದ ಗುರುಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಶುಭವಿದಾಯ ಕೋರಿದರು.
ಷರೀಫ್ ಸಮೂಹ ಸಂಸ್ಥೆಯ ವಿಜಯ ಕುಮಾರ್ ಬ್ರಹ್ಮಾವರ್, ಬ್ರಾಮ್ಕೋ ಸಂಸ್ಥಯ ಸೀನಪೂಜಾರಿ, ಫೈನ್ ಫುಡ್ ಸಂಸ್ಥೆಯ ಶಂಕರ್ ಜತ್ತನ್ನ ಮೊದಲಾದವರು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದರು.
ತಾಯ್ನಾಡಿನಿಂದ ದೂರವಿದ್ದು ತಾಯ್ನಾಡಿನ ನೂರಾರು ಜನರೊಂದಿಗೆ ಕಲೆತು ನಕ್ಕು ನಲಿದು ಸಂತೋಷದಿಂದ ದಿನವಿಡೀ ಕಾಲ ಕಳೆಯುವಂತೆ ಮಾಡಿದ ಈ ವಿಹಾರ ಕೂಟ ಬಹಳ ಕಾಲ ಜನಮನದಲ್ಲಿ ಅಚ್ಚಳಿಯದ ಒಂದು ನೆನಪಾಗಿ ಉಳಿಯುವಂತಿತ್ತು.
ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-06
|
|
|