ದುಬೈ: ಶಿಕ್ಷಣ ಸಚಿವರನ್ನು ಸತ್ಕರಿಸಿದ ದುಬೈ ಕರ್ನಾಟಕ ಸಂಘ |
ಪ್ರಕಟಿಸಿದ ದಿನಾಂಕ : 2008-10-05
ರಾಜ್ಯದ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಹಲವು ಕಾರ್ಯದ ಭರವಸೆ
ದುಬೈ, ಅಕ್ಟೋಬರ್ 5: ಕಳೆದ ಶುಕ್ರವಾರ ಅಕ್ಟೋಬರ್ 3ನೇ ತಾರೀಖಿನಂದು ದುಬೈ ಕರ್ನಾಟಕ ಸಂಘ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸನ್ಮಾನಿಸಲಾಯಿತು.

ನಗರದ ರಮೀ ರಾಯಲ್ ಹೋಟೆಲಿನ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಭಟ್ಕಳದ ಗಣ್ಯರಾದ ಶ್ರೀ ನಾರಾಯಣ ಜಿ. ಕೊಲ್ಲೆ ಹಾಗೂ ಬಹರೇನ್ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಾಜಕುಮಾರ್ ಉಪಸ್ಥಿತರಿದ್ದರು.

ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸಿ.ಆರ್. ಶೆಟ್ಟಿಯವರ ಅನುಪಸ್ಥಿತಿಯಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಆರ್ ತಂತ್ರಿಗಳು ಸಭಿಕರನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು.

ಎನ್. ಶಶಿಧರ್ ರವರು ದುಬೈ ಕರ್ನಾಟಕ ಸಂಘ ಬೆಳೆದು ಬಂದ ಹಾದಿಯ ಪಕ್ಷಿನೋಟ ನೀಡಿದರು. ಪೂರ್ವ ಅಧ್ಯಕ್ಷರಾದ ಶ್ರೀ ಸೈಯದ್ ಖಲೀಲ್ ಅವರು ಮಾತನಾಡಿ ಅತಿಥಿಗಳ ಪರಿಚಯ ನೀಡಿದರು.
ಆ ಬಳಿಕ ಸಚಿವರಿಗೆ ಶ್ರೀ ಸೈಯದ್ ಖಲೀಲ್ ಅವರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ನಂತರ ಮಾತನಾಡಿದ ಸಚಿವರು ವಿದೇಶದಲ್ಲಿ ಕನ್ನಡದ ಕಾರ್ಯ ನಿರ್ವಹಣೆಯ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಹಾಗೂ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ನಡೆಯಬೇಕಾದ ಪ್ರಗತಿಗಾಗಿ ಹೆಚ್ಚಿನ ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವ ಸರ್ಕಾರದ ಯೋಜನೆಗಳ ಕಿರುಪರಿಚಯ ನೀಡಿದರು. ಇತ್ತೀಚೆಗೆ ನೂರು ದಿನಗಳನ್ನು ಪೂರೈಸಿದ ಸರ್ಕಾರದ ಸಾಧನೆಗಳನ್ನು ಅವರು ಸಭಿಕರಿಗೆ ಸಾದರ ಪಡಿಸಿದರು.

ಶ್ರೀ ನಾರಾಯಣ ಜಿ. ಕೊಲ್ಲೆಯವರು ಮಾತನಾಡುತ್ತಾ ಉತ್ತರ ಕರ್ನಾಟಕ ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆಗಳ ಬೇಡಿಕೆ ಮುಂದಿಟ್ಟರು.

ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಹಾಗೂ ಶಿಕ್ಷಣಾಧಾರಿತ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವಂತೆ ದುಬೈ ಕರ್ನಾಟಕ ಸಂಘದ ಸದಸ್ಯರು ನೀಡಿದ ಅಹವಾಲುಗಳನ್ನು ಸಚಿವರು ಸ್ವೀಕರಿಸಿ ತಮ್ಮ ಕೈಲಾದ ಪ್ರಯತ್ನ ನಡೆಸುವ ಭರವಸೆ ನೀಡಿದರು.

ಅಂತಿಮವಾಗಿ ಕೆ.ಆರ್. ತಂತ್ರಿಯವರು ವಂದನಾರ್ಪಣೆ ಸಲ್ಲಿಸಿದರು.
ಚಿತ್ರ, ವರದಿ: ಸತೀಶ ವಿ.ದುಬೈ.
ವರದಿಯ ವಿವರಗಳು |
 |
ಕೃಪೆ : ಸತೀಶ ವಿ.ದುಬೈ. ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-05
|
|
| Indushekahr.Angadi, Dharwad-Dubai | 2008-10-12 | | It is not UTTARA KARNATAKA district as you have mentioned in the article.I think it should have been UTTARA KANNADA district.
-------------- |
|