ದುಬೈ: ಈದ್ ಮಿಲನ್ ಕಾರ್ಯಕ್ರಮದಲ್ಲಿ ಭಾಗಿಯಾದ ಶಿಕ್ಷಣ ಸಚಿವರು |
ಪ್ರಕಟಿಸಿದ ದಿನಾಂಕ : 2008-10-05
ಉತ್ತಮ ಆಹಾರ, ವಿಶೇಷ ಮನರಂಜನೆ, ಹೆಚ್ಚಿನ ಬಹುಮಾನಗಳಿಂದ ಕೂಡಿದ ಈದ್ ಮಿಲನ್
ದುಬೈ, ಅಕ್ಟೋಬರ್ 5: ಕೆಲದಿನಗಳ ಹಿಂದೆ ಆಚರಿಸಿದ್ದ ಈದ್ ಉಲ್ ಫಿತ್ರ್ ಹಬ್ಬದ ಸಲುವಾಗಿ ದುಬೈಯಲ್ಲಿ ನೆಲೆಸಿರುವ ಭಟ್ಕಳ ಮೂಲದ ನವಾಯತ ಸಂಘಟನೆ ವಾರ್ಷಿಕ ಈದ್ ಮಿಲನ್ ಕೂಟವನ್ನು ಅಕ್ಟೋಬರ್ 3 ನೇ ತಾರೀಖಿನಂದು ಅಲ್ ಬೂಮ್ ಟೂರಿಸ್ಟ್ ವಿಲೇಜ್ ಸಭಾಂಗಣದಲ್ಲಿ ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆಗಮಿಸಿದ್ದರು.
ಸಾಮಾನ್ಯವಾಗಿ ಹಬ್ಬ ಕಳೆದು ವಾರ ಅಥವಾ ಹದಿನೈದು ದಿನಗಳ ಬಳಿಕ ನಡೆಯುವ ವಾರ್ಷಿಕ ಕಾರ್ಯಕ್ರಮ ಸಚಿವರ ಸಮಯಕ್ಕೆ ಹೊಂದಾಣಿಕೆ ಯಾಗುವಂತೆ ಹಬ್ಬದ ಮೂರನೆಯ ದಿನದಂದೇ ಆಯೋಜಿಸಲ್ಪಟ್ಟಿತ್ತು. ಕೂಟದಲ್ಲಿ ಅತ್ಯುತ್ತಮ ಆಹಾರ, ಅತ್ಯುತ್ತಮ ಮನರಂಜನೆ ಮಾತ್ರವಲ್ಲದೇ ಹಲವರಿಗೆ ಬಹುಮಾನಗಳು ಅದೃಷ್ಟರೂಪದಲ್ಲಿ ಒಲಿದುಬಂದವು.
ಭೋಜನದ ಬಳಿಕ ತೊಡಗಿದ ಕಾರ್ಯಕ್ರಮ ಇಮೇಜಸ್ ಆಫ್ ಭಟ್ಕಲ್ (ಭಟ್ಕಳದ ಚಿತ್ರಗಳು) ಎಂಬ ಸ್ಲೈಡ್ ಶೋ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಭಟ್ಕಳದ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಅಪರೂಪದ ಚಿತ್ರಗಳು ಎಲ್ಲರ ಪ್ರಶಂಸೆಗೆ ಪಾತ್ರವಾದವು.
ಆ ಬಳಿಕ ಮಾತನಾಡಿದ ಶಿಕ್ಷಣ ಸಚಿವರು ವಿದೇಶದಲ್ಲಿ ಭಟ್ಕಳದ ಜನರು ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿರುವುದು ಹಾಗೂ ಇಂತಹ ಒಂದು ಕಾರ್ಯಕ್ರಮದಲ್ಲಿ ತಮ್ಮನ್ನು ಆಹ್ವಾನಿಸಿರುವುದು ತಮಗೆ ಅತೀವ ಸಂತೋಷ ನೀಡಿದೆ, ಈ ಈದ್ ಮಿಲನ ಕೂಟದಲ್ಲಿ ಭಾಗಿಯಾಗಲು ತಮಗೆ ಅತೀವ ಹರ್ಷವಾಗುತ್ತಿದೆ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.
ಆ ಬಳಿಕ ಭಟ್ಕಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನೆರವೇರಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದರು. ನಗರದಲ್ಲಿ ಹಲವು ಸಮಾಜಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ರಾಬಿತಾ ಸಂಘವನ್ನೂ ಸಚಿವರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ದೂತಾಧಿಕಾರಿ ಶ್ರೀ ವೇಣು ರಾಜಮಣಿಯವರು ಮಾತನಾಡುತ್ತಾ ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಮುಸ್ಲಿಮರ ಕೊಡುಗೆ ಬಹಳಷ್ಟಿದ್ದು ಮನರಂಜನೆ, ಕ್ರೀಡೆ ಅಥವಾ ವಾಣಿಜ್ಯ ಕ್ಷೇತ್ರಗಳಲ್ಲಿ ಬಹಳಷ್ಟನ್ನು ನೀಡಿದ್ದಾರೆ ಎಂದು ತಿಳಿಸಿದರು.
ಭಟ್ಕಳ ನವಾಯತರ ಹಿರಿಯ ನಾಯಕರಾದ ಎಸ್.ಎಮ್ ಸೈಯದ್ ಖಲೀಲ್ ಅವರು ಸಚಿವರನ್ನು ಹಾಗೂ ಆಹ್ವಾನಿತ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಆ ಬಳಿಕ ಮೌಲಾನಾ ಮಕ್ಬೂಲ್ ಕೋಬಟ್ಟೆಯವರು ಶಿಕ್ಷಣದ ಮಹತ್ವ, ಶಾಂತಿ ಹಾಗೂ ವಿಶ್ವಭ್ರಾತೃತ್ವದ ಸಂದೇಶವನ್ನು ಸಭೆಯಲ್ಲಿ ಅರುಹಿದರು. ಅಲ್ತಾಫ್ ದಾಮೂದಿಯವರು ಚಿತ್ರದ ಸ್ಲೈಡ್ ಶೋ ಪ್ರದರ್ಶನದ ವೀಕ್ಷಕ ವಿವರಣೆ ನೀಡಿದರೆ ಶಹರಿಯಾರ್ ಖತೀಬ್ ಅವರು ವಂದನಾರ್ಪಣೆ ಸಲ್ಲಿಸಿದರು.
ಬಳಿಕ ನಡೆದ ಮನರಂಜನಾ ಕಾರ್ಯಕ್ರಮಗಳಲ್ಲಿ ಬಾಲಕಿಯರ ಸಮೂಹವೊಂದು ಉರ್ದು ನಾಅತ್ ಪ್ರಸ್ತುತಪಡಿಸಿದರೆ ಬಾಲಕರು ಅರೇಬಿಕ್ ಪದ್ಯವನ್ನು ಹಾಡಿದರು. ಆ ಬಳಿಕ ಮೌಲಾನಾ ಹಫೀಜ್ ಇರ್ಶಾದ್ ಸಿದ್ದೀಕಾ ಅವರು ರಚಿಸಿದ -ಕೋಯ್ಪಾ ಮ್ಹೇಲಿ- (ಚಿಕ್ಕಪ್ಪನ ಹೆಂಡತಿ) ನಾಟಕ ನೆರೆದವರ ಪ್ರಚಂಡ ಕರತಾಡನದ ಬಹುಮಾನ ಪಡೆಯಿತು.
ಭಾರತದಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವು ಪ್ರತಿಭಾವಂತರು ತಮ್ಮ ಪ್ರತಿಭೆ ಮೆರೆದರು. ಜಗ್ತಿಯಾಲಿ ಯವರ ಎಂದಿನ ಲವಲವಿಕೆಯ ಕವನವಾಚನ ಎಲ್ಲರನ್ನೂ ರಂಜ್ಜಿಸಿತು. ಉಸ್ಮಾನ್ ಜಬೀಲ್ ರವರ ನಾಅತ್ ಕವನ, ಶಬ್ಬೀರ್ ಅಹ್ಮದ್ ಅವರ ಹಾಸ್ಯಪ್ರದರ್ಶನ ಎಲ್ಲರ ಮನಗೆದ್ದವು. ಅಂತಿಮವಾಗಿ ರಾಫೆಲ್ ಡ್ರಾ ಮೂಲಕ ಅದೃಷ್ಟಶಾಲಿಗಳಿಗೆ ವಿಮಾನದ ಟಿಕೆಟ್, ಚಿನ್ನದ ಆಭರಣ, ಡಿಜಿಟಲ್ ಕ್ಯಾಮೆರಾ ಮೊದಲಾದ ಬಹುಮಾನಗಳು ಒಲಿದವು. ಬಂಪರ್ ಬಹುಮಾನವಾದ ಹೀರೋ ಹೊಂಡಾ ಮೋಟಾರ್ ಬೈಕ್ ಮೊಹಮ್ಮದ್ ಫಯ್ಯಾಸ್ ಮಲ್ಪಾ ಅವರಿಗೆ ಒಲಿಯಿತು.
ಎರೆಡು ಬೃಹತ್ ಪರದೆ, ಹಲವು ವಾಗ್ಮಿಗಳ ಭಾಷಣ, ನಾಲ್ಕು ವೀಡಿಯೋ ಕ್ಯಾಮೆರಾಗಳಿಂದ ನೇರ ಪ್ರಸಾರ, ಉತ್ತಮ ಧ್ವನಿ ಸಜ್ಜಿಕೆಗಳಿಂದ ಈ ಕಾರ್ಯಕ್ರಮ ಅನುರೂಪವಾದ ಅನುಭವ ನೀಡಿತ್ತು.
ವರದಿ: ಮುಆಝ್ ಶಾಬಂದರಿ ಚಿತ್ರ: ಅರ್ಮಾರ್ ಶಫಿ ಮತ್ತು ಮುಆಝ್
ವರದಿಯ ವಿವರಗಳು |
 |
ಕೃಪೆ : ಭಟ್ಕಲೀಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-05
|
|
|