ದೋಹಾ: ನಗರದಲ್ಲಿ ಸಂಭ್ರಮದ ಈದ್ ಆಚರಣೆ |
ಪ್ರಕಟಿಸಿದ ದಿನಾಂಕ : 2008-09-30
(Clk above or this link for more Pics)
ಎಲ್ಲಾ ಮಧ್ಯಪ್ರಾಚ್ಯ ದೇಶಗಳಲ್ಲಿ ಇಂದು ಹಬ್ಬ
ದೋಹಾ, ಸೆಪ್ಟೆಂಬರ್ 30: ಇಂದು ಮಧ್ಯಪ್ರಾಚ್ಯದ ಎಲ್ಲಾ ದೇಶಗಳಲ್ಲಿ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸೌದಿ ಅರೇಬಿಯಾ, ಯು.ಎ.ಇ. ಬಹರೇನ್, ಕುವೈಟ್, ಲೆಬನಾನ್, ಲಿಬಿಯ, ಜೋರ್ಡಾನ್ ಸಹಿತ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಿಸಲಾಗುತ್ತಿದೆ.

ಕತರ್ ಅವ್ಕಾಫ್ ಸಚಿವಾಲಯದ The Crescent Moon Sighting Committee ನಿನ್ನೆ ಸೂರ್ಯಾಸ್ತದ ಬಳಿಕ ಇಂದು ಈದ್ ಉಲ್ ಫಿತ್ರ್ ಹಬ್ಬ ಆಚರಿಸಲಾಗುವುದೆಂದು ಪ್ರಕಟಿಸಿತ್ತು.

ಇದಕ್ಕೆ ಪೂರ್ವ ಸೌದಿ ಅರೇಬಿಯಾದ ಚಂದ್ರದರ್ಶನ ಸಮಿತಿ ಸೌದಿ ಅರೇಬಿಯಾದಲ್ಲಿ ಚಂದ್ರದರ್ಶನವಾದ ಬಗ್ಗೆ ಖಚಿತ ಮಾಹಿತಿಯನ್ನು ನೀಡಿತ್ತು. ಆ ಬಳಿಕ ಕತರ್ ಆಡಳಿತಗಾರರಾದ ಎಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಹಾಗೂ ಯುವರಾಜ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿಯವರು ಇತರ ಗಲ್ಫ್ ರಾಷ್ಟ್ರಗಳ ಆಡಳಿತಗಾರರಿಗೆ ಶುಭಸಂದೇಶಗಳನ್ನು ರವಾನಿಸಿದರು.

ಇಂದು ಬೆಳಿಗ್ಗೆ ಐದೂವರೆಯ ಪ್ರಥಮ ಪ್ರಾರ್ಥನೆಯ ವೇಳೆಯಿಂದಲೇ ನಗರದ ಪ್ರಮುಖ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಮುಸ್ಲಿಮ್ ಬಾಂಧವರು ನೆರೆಯತೊಡಗಿದ್ದರು. ಐದೂವರೆಗೆ ಪ್ರಾರಂಭವಾದ್ ಈದ್ ನಮಾಜ್ ಬಳಿಕ ಈದ್ ಖುತ್ಬಾ (ಪ್ರವಚನ) ವನ್ನು ಆಯಾ ಮಸೀದಿ ಹಾಗೂ ಈದ್ಗಾಗಳಲ್ಲಿ ಪ್ರಾರ್ಥನೆ ನಿರ್ವಹಿಸಿದ ಈಮಾಂಗಳು ನೀಡಿದರು.

ನಗರದ ಅರಬ್ ರೌಂಡ್ ಅಬೌಟ್ ಬಳಿ ಇರುವ ಈದ್ಗಾ ಮೈದಾನದಲ್ಲಿ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಈದ್ ನಮಾಜಿನಲ್ಲಿ ಪಾಲ್ಗೊಂಡರು. ಮಕ್ಕಳಿಂದ ಹಿರಿಯರವರೆಗೆ ಎಲ್ಲಾ ವರ್ಗದ ಜನರು ನೆರೆದು ಒಬ್ಬರನ್ನೊಬ್ಬರು ಆಲಂಗಿಸಿ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ದೃಶ್ಯ ಚೇತೋಹಾರಿಯಾಗಿತ್ತು.

ನಗರದ ಪ್ರಮುಖ ಮಸೀದಿಗಳಲ್ಲೂ ಜನಸಂದಣೆ ಹೆಚ್ಚಾಗಿದ್ದು ವಾಹನ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಪೋಲೀಸರು ಹರಸಾಹಸ ಪಡಬೇಕಾಯಿತು.

ದೋಹಾದಲ್ಲಿರುವ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷರಾದ ಜನಾಬ್ ಸೈಯದ್ ಅಬ್ದುಲ್ ಹಾಯ್, ತುಳುಕೂಟ ಕತರ್ ಅಧ್ಯಕ್ಷರಾದ ಶ್ರೀ ರವಿಶೆಟ್ಟಿ, ಕರ್ನಾಟಕ ಸಂಘ ಕತರ್ ಅಧ್ಯಕ್ಷರಾದ ಶ್ರೀ ಅರವಿಂದ ಪಾಟೀಲ್, ಮಂಗಳೂರು ಕ್ರಿಕೆಟ್ ಕ್ಲಬ್ ಅಧ್ಯಕ್ಷ ಶ್ರೀ ಆಲ್ವಿನ್ ಡಿಸೋಜಾ ಸಹಿತ ಹಲವಾರು ಗಣ್ಯರು ಎಲ್ಲಾ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯಗಳನ್ನು ತಿಳಿಸಿದ್ದಾರೆ.

ಚಿತ್ರ, ವರದಿ: ಇಕ್ಬಾಲ್ ಮನ್ನಾ, ಕತರ್.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ, ಕತರ್. ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-30
|
|
|