ಮನಾಮಾ: ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ : ಕನ್ನಡ ವೈಭವಕ್ಕೆ ಭರದ ಸಿದ್ಧತೆ, ಕೈಪಿಡಿ ಬಿಡುಗಡೆ |
ಪ್ರಕಟಿಸಿದ ದಿನಾಂಕ : 2008-09-30
ಮನಾಮಾ, ಸೆಪ್ಟೆಂಬರ್ 30: ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆಗಳ ಹಿರಿಮೆ ಗರಿಮೆಯನ್ನು ಸಾರುವಂತಹ ಬೃಹತ್ ಕಾರ್ಯಕ್ರಮ - ಕನ್ನಡ ವೈಭವ-ಕ್ಕೆ ಇದಾಗಲೇ ರೂಪುರೇಷೆಗಳು ಸಿದ್ಧವಾಗಿದ್ದು ಇಲ್ಲಿನ ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘ ಆಯೋಜಿಸುತ್ತಿರುವ ಈ ಸಂಭಾವ್ಯ ಕಾರ್ಯಕ್ರಮದ ಬಗೆಗಿನ ಸಮಗ್ರ ಚಿತ್ರಣ ಹಾಗೂ ಪ್ರಾಯೋಜಕತ್ವದ ವಿವರವಿರುವ ಕೈಪಿಡಿಯೊಂದನ್ನು ಸಂಘದ ಸಾಂಸ್ಕೃತಿಕ ಸಭಾಂಗಣದಲ್ಲಿ ಜರುಗಿದ ಸರಳ ಸಮಾರಂಭವೊಂದರಲ್ಲಿ ಬಿಡುಗಡೆಗೊಳಿಸಲಾಯಿತು.

ಬಹರ್‍ಏನಿನ ಖ್ಯಾತ ಕನ್ನಡಿಗ ಉದ್ಯಮಿ ಶ್ರೀ ಸುಧಾಕರ ಶೆಟ್ಟಿ, ಕ್ವೀನ್ಸ ಮೆಡಿಕಲ್ ಸೆಂಟರಿನ ಆಡಳಿತ ನಿರ್ದೇಶಕ ಬೋಬಿನ್ ಇಡುಕುಳಾ ಅವರು ವೇದಿಕೆಯಲ್ಲಿದ್ದು ಈ ವರ್ಣಮಯ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಸಂಘದ ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ಬಿಡುಗಡೆಗೊಂಡ ಪ್ರಥಮ ಪ್ರತಿಗಳನ್ನು ಸಂಘದ ಕಾರ್ಯಕ್ರಮಗಳಿಗೆ ಸದಾ ಪ್ರಾಯೋಜಕತ್ವ ನೀಡಿ ಸಹಕರಿಸುವ ಹಲವು ಸದಸ್ಯರಿಗೆ ವಿತರಿಸಲಾಯಿತು.

ಈ ಸಂಭಾವ್ಯ ಕಾರ್ಯಕ್ರಮವು ಇದೇ ನವೆಂಬರ್ ತಿಂಗಳ ಹದಿನಾಲ್ಕ ರಂದು ಸ್ಥಳೀಯ ಬಹರೇನ್ ಕೇರಳೀಯ ಸಮಾಜದ ಡೈಮಂಡ್ ಜುಬಿಲಿ ಸಭಾಂಗಣದಲ್ಲಿ ಜರುಗಲಿದೆ.
ಇತ್ತೀಚೆಗಷ್ಟೇ ಅನಿವಾಸಿ ಭಾರತೀಯರು ಹಾಗೂ ಸಂಸದೀಯ ವ್ಯವಹಾರ ಗಳ ಸಚಿವರಾದ ವಯಲಾರ್ ರವಿಯವರು ಈ ಸಭಾಂಗಣವನ್ನು ಉದ್ಘಾಟಿಸಿದ್ದು ಅತ್ಯಂತ ವಿಶಾಲ ಹಾಗೂ ಅತ್ಯಾಧುನಿಕ ಸೌಲಭ್ಯ ಗಳನ್ನೊಳಗೊಂಡ ಈ ನೂತನ ಸಭಾಂಗಣದಲ್ಲಿ ಜರುಗಲಿರುವ ’ಕನ್ನಡ ವೈಭವ’ ಕಾರ್ಯಕ್ರಮವು ಈ ಸಭಾಂಗಣದಲ್ಲಿ ಜರುಗಲಿರುವ ಪ್ರಥಮ ಕನ್ನಡ ಕಾರ್ಯಕ್ರಮವಾಗಲಿರುವುದು ಎಂದು ಸಂಘದ ಅಧ್ಯಕ್ಷರಾದ ಶ್ರೀ ಆಸ್ಟಿನ್ ಸಂತೋಷ್ ಅವರು ತಿಳಿಸಿದರು.

ಇದಾಗಲೇ ಮಣಿಪಾಲ ಸಮೂಹ ಸಂಸ್ಥೆಗಳ ಜನಪ್ರಿಯ ವಾರಪತ್ರಿಕೆಯಾದ ತರಂಗದ ವ್ಯವಸ್ಥಾಪಕ ಸಂಪಾದಕಿ ಶ್ರೀಮತಿ ಸಂಧ್ಯಾ ಪೈ ಯವರು ಸಂಘದ ಆಹ್ವಾನವನ್ನು ಸ್ವೀಕರಿಸಿ ಸಂತೋಷದಿಂದ ಬರಲು ಒಪ್ಪಿಕೊಂಡಿ ದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ನಾಡಿನ ಪ್ರಸಿದ್ಧ ಪ್ರಶಸ್ತಿ ವಿಜೇತ ನೃತ್ಯ ವಿದೂಶಿ ಸಹನಾ ಭಟ್ ಅವರು ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಗಮಿಸಿ ಸಂಘದ ಸುಮಾರು ಐವತ್ತು ಕಲಾವಿದರನ್ನು ತರಬೇತುಗೊಳಿಸಿ ನೃತ್ಯ ರೂಪಕವನ್ನು ನೀಡಲಿದ್ದಾರೆ.

ಅಲ್ಲದೇ ಈ ಕಾರ್ಯಕ್ರಮಕ್ಕೆ ಬರುವವರ ಸಂಭಾವ್ಯ ಪಟ್ಟಿಯಲ್ಲಿ ಕನ್ನಡ ಚಲನಚಿತ್ರ ತಾರೆಯರು, ಪ್ರಸಿದ್ಧ ರಾಜಕೀಯ ಮುತ್ಸದ್ಧಿಗಳು, ವಿವಿಧ ಕಲಾವಿದರು ಇರುವುದಾಗಿಯೂ, ಅಂತಿಮ ಪಟ್ಟಿಯನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವುದಾಗಿಯೂ ಅಧ್ಯಕ್ಷರಾದ ಶ್ರೀ ಆಸ್ಟಿನ್ ಸಂತೋಷ್ ಅವರು ತಿಳಿಸಿದರು.
ನಾಡಿನ ಸಾಂಸ್ಕೃತಿಕ ತೇರು ಮುತ್ತುಗಳ ದ್ವೀಪದಲ್ಲಿ ಚಲಿಸಲು ಸಿದ್ಧ ವಾಗುತ್ತಿದೆ, ಬಹರೇನ್ ಕನ್ನಡಿಗರು ಈ ತೇರನ್ನು ಎಳೆಯಲು ಕಾತುರ ದಿಂದ ಕಾಯುತ್ತಿದ್ದಾರೆ, ಬಹರೇನ್ ಕನ್ನಡಿಗರ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಇನ್ನೊಂದು ಕಾರ್ಯಕ್ರಮ ಇದಾ ಗುವುದುದರಲ್ಲಿ ಸಂಶಯವಿಲ್ಲ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ ಸಂಘದ ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ರವರನ್ನು ದೂರವಾಣಿ 39837771 ಮೂಲಕ ಸಂಪರ್ಕಿಸಬಹುದಾಗಿದೆ.
ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-30
|
|
|