ಐವರು ಗಣ್ಯರಿಗೆ ಅನುವಾದ ಅಕಾಡೆಮಿ ಗೌರವ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2008-09-25
ಬೆಂಗಳೂರು: ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ 2008-09ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಅನುವಾದ ಕ್ಷೇತ್ರದ ಸಾಧನೆಗಾಗಿ ಮಹಾಮಹೋಪಾಧ್ಯಾಯ ಎನ್. ರಂಗನಾಥ ಶರ್ಮ, ವಿ. ನಾಗರಾಜರಾವ್, ಪ್ರೊ|ಮಾಹೀರ ಮನ್ಸೂರ್, ಡಾ|ಎಚ್. ಎಸ್. ಪಾರ್ವತಿ ಮತ್ತು ಡಿ.ಎಸ್. ಚೌಗಲೆ ಅವರು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಡಾ|ಪ್ರಧಾನ್ ಗುರುದತ್ತ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಗೌರವ ಪ್ರಶಸ್ತಿ 10 ಸಾವಿರ ರು. ನಗದು, ಸರಸ್ವತಿ ಪುತ್ಥಳಿ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ಅನುವಾದಿತ ಕೃತಿಗಳಿಗೆ ನೀಡುವ 2007ನೇ ಸಾಲಿನ ಪುಸ್ತಕ ಬಹುಮಾನವನ್ನು ಡಾ|ಡಿ.ಎ. ಶಂಕರ್, ಎಂ.ಆರ್. ಕಮಲ, ಡಾ|ಎಸ್. ರಘುನಾಥ್, ಎಚ್.ಡಿ. ಶಾಂತಾ ಮತ್ತು ಡಿ.ಎನ್. ಶ್ರೀನಾಥ್ ಗಳಿಸಿದ್ದಾರೆ. ತಲಾ 5 ಸಾವಿರ ರು. ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಪಡೆಯುವರು. ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಅ.13ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಲಿದೆ ಎಂದು ಡಾ|ಪ್ರಧಾನ್ ಗುರುದತ್ತ ತಿಳಿಸಿದರು.
100 ಆಂಗ್ಲ ಕೃತಿ ಕನ್ನಡಕ್ಕೆ:
ಅಕಾ ಡೆಮಿ 3 ತಿಂಗಳಿನಲ್ಲಿ ಅನುವಾದಿತ ಕೃತಿಗಳ ಮಾರಾಟದಿಂದ 2.25 ಲಕ್ಷ ರುಪಾಯಿ ಆದಾಯ ಗಳಿಸಿದೆ. 100 ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಗುರಿ ಇದೆ. ಇಂಗ್ಲಿಷ್, ಹಿಂದಿ, ಮರಾಠಿ, ಬಂಗಾಳಿ ಮತ್ತು ಜರ್ಮನ್ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ ಕೃತಿಗಳು ಅಕಾಡೆಮಿಯಲ್ಲಿವೆ ಎಂದು ಹೇಳಿದರು.
ಪ್ರಶಸ್ತಿಗೆ ಪಾತ್ರರಾದ ಮಹಾನುಭಾವರು:
ಮಹಾಮಹೋಪಾಧ್ಯಾಯ ರಂಗನಾಥ ಶರ್ಮ ಕನ್ನಡ ನಾಡು ಕಂಡಿರುವ ಬಹು ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು. ವಾಲ್ಮೀಕಿ ರಾಮಾಯಣದ ಕನ್ನಡ ಆವೃತ್ತಿಯನ್ನು ಸಿದ್ಧಪಡಿಸಿ ಪ್ರಕಟಿಸುವಲ್ಲಿ ಅವರು ಸಲ್ಲಿಸಿರುವ ಸೇವೆ ಅತ್ಯಂತ ಗಮನಾರ್ಹ.
ಆಕಾಶವಾಣಿಯಲ್ಲಿ ಸಂಪಾದಕರಾಗಿರುವ ವಿ. ನಾಗರಾಜರಾವ್, ಥಾಮಸ್ ಹಾರ್ಡಿಯ ಇಂಗ್ಲಿಷ್ ಕಾದಂಬರಿಗಳು, ಗ್ರೀಕ್ ನಾಟಕಕಾರ ಯೂರಿಪಿಡೀಸ್‌ನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಜ್ಯ ಸರ್ಕಾರದ ವಿಧಾನ ಮಂಡಲ ಇತಿಹಾಸಕ್ಕಾಗಿ ಸುಮಾರು 5 ಸಾವಿರಕ್ಕೂ ಹೆಚ್ಚು ಪುಟಗಳನ್ನು ಅನುವಾದಿಸಿದ್ದಾರೆ.
ಎಚ್.ಎಸ್. ಪಾರ್ವತಿ ಅನೇಕ ರಾಷ್ಟ್ರೀಯ ನಾಟಕಗಳನ್ನು ಹಿಂದಿ ಮತ್ತಿತರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಉರ್ದು ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತರಾದ ಪ್ರೊ|ಮಾಹೀರ್ ಮನ್ಸೂರ್ ಸರ್ವಜ್ಞನ ವಚನಗಳು, ಪುರಂದರ ದಾಸರ ಕೃತಿಗಳು, ಸಿರಿಸಂಪಿಗೆ ನಾಟಕವನ್ನು ಉರ್ದು ಭಾಷೆಗೆ ಅನುವಾದಿಸಿದ್ದಾರೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದವರ ವಚನಗಳನ್ನು, ದೇವನೂರು ಮಹಾದೇವ, ವೈದೇಹಿ, ರಾಮಚಂದ್ರಶರ್ಮ ಮತ್ತಿತರರ ಕತೆಗಳು, ಕುವೆಂಪು, ದ.ರಾ. ಬೇಂದ್ರೆ, ಪುತಿನ, ಅಡಿಗ, ನಿಸಾರ್ ಅಹಮದ್ ಮತ್ತಿತರರ ಕವಿತೆಗಳನ್ನು ಭಾಷಾಂತರಿಸಿದ್ದಾರೆ. ಒಡಲಾಳ, ಕಾಡು ಕೃತಿಗಳು ಉರ್ದುಗೆ ಅನುವಾದಗೊಂಡ ಕೆಲ ಕೃತಿಗಳು. ಕನ್ನಡ-ಮರಾಠಿ ಸಾಹಿತ್ಯದ ಸೇತುವೆ ಡಾ|ಡಿ.ಎಸ್. ಚೌಗಲೆ. ಗಾಂಧಿ ವಿರುದ್ಧ ಗಾಂಧಿ, ಗಾಂಧಿ- ಅಂಬೇಡ್ಕರ್, ನೆರಳುಗಳು ಮತ್ತಿತರ ಕೃತಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-25
|
|
|