ಮತಾಂತರ ವಿರೋಧಿ ಕಾಯ್ದೆಗೆ ಪೇಜಾವರಶ್ರೀ ಆಗ್ರಹ |
ಪ್ರಕಟಿಸಿದ ದಿನಾಂಕ : 2008-09-24
ಮತಾಂತರ ವಿರೋಧಿ ಕಾಯಿದೆ ಜಾರಿಗೆ ತರುವಂತೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವ ಇಚ್ಛೆಯ ಮತಾಂತರಕ್ಕೆ ಅಭ್ಯಂತರವೇನೂ ಇಲ್ಲ. ಆದರೆ ಆಮಿಷಗಳ ಮೂಲಕ ಮತಾಂತರ ಮಾಡುವುದಕ್ಕೆ ತಮ್ಮ ವಿರೋಧವಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಧರ್ಮ ಪ್ರಚಾರಕ್ಕೆ ಅವಕಾಶವಿದೆ. ಆದರೆ ಮತ್ತೊಂದು ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದಕ್ಕೆ ಯಾರಿಗೂ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಚರ್ಚ್ ಮೇಲಿನ ದಾಳಿಯನ್ನು ಖಂಡಿಸಿದ ಅವರು, ಮುಂದೆ ಕೂಡ ಇಂತಹ ಮತೀಯ ಗಲಭೆಗಳು ಸಂಭವಿಸಿದಲ್ಲಿ 24 ಗಂಟೆಗಳ ಕಾಲ ಉಪವಾಸ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಈ ನಡುವೆ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವಂತೆ ಒತ್ತಾಯಿಸಿ ವಿಶ್ವೇಶ ತೀರ್ಥ ಸ್ವಾಮೀಜಿ, ಯೋಗಾನಂದ ಸರಸ್ವತಿ ಸ್ವಾಮೀಜಿ, ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
‘ಬಲವಂತದ ಮತಾಂತರ ನಿಯಂತ್ರಿಸಿ’
ಬೆಂಗಳೂರು: ‘ಹಿಂದು ಹಾಗೂ ಕ್ರೈಸ್ತರೇ, ಗಡಿ ನಿಯಂತ್ರಣ ರೇಖೆ ದಾಟಬೇಡಿ. ಮತ ಪ್ರಚೋದನೆ ಇಲ್ಲದೆ ಸೇವೆ ಮಾಡಿ. ಒಬ್ಬರು ಇನ್ನೊಬ್ಬರ ಕ್ಷೇತ್ರಕ್ಕೆ ಪ್ರವೇಶ ಮಾಡಿ ಶಾಂತಿ ಕದಡಬೇಡಿ. ಅಲ್ಲದೆ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ನಮಗೆಲ್ಲರಿಗೂ ಶಾಂತಿ ಬೇಕು, ಹಿಂಸೆ ಬೇಡ’.
‘ಆಮಿಷವೊಡ್ಡಿ ಮತಾಂತರಕ್ಕೆ ಪ್ರಚೋದನೆ ನೀಡಿದರೆ ದೇಶಕ್ಕೆ ಅಪಾಯ ಖಂಡಿತ. ಎಲ್ಲಾ ಧಾರ್ಮಿಕ ಮುಖಂಡರು ಪಂಚಶೀಲ ತತ್ವಕ್ಕೆ ಬದ್ಧರಾಗಿ ಶಾಂತಿ ಕಾಪಾಡಿ’. ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳ ಒಕ್ಕೊರಲಿನ ಘೋಷಣೆ ಇದು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪೇಜಾವರ ಶೀಗಳ ಜತೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು, ಕೊಲ್ಯ ರಮಾನಂದಾಶ್ರಮದ ಶ್ರೀ ರಮಾನಂದ ಶ್ರೀಗಳು, ಉಪ್ಪಳದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ವಜ್ರದೇಹಿ ಉಪ್ಪುಗೋಡು ಮಠದ ಶ್ರೀ ರಾಜಶೇಖರಾನಂದ ಶ್ರೀಗಳು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು, ಕೇಮಾರು ಸಾಂದಿಪನಿ ಈಶವಿಠಲದಾಸ ಸ್ವಾಮೀಜಿಯವರು ಮಾತನಾಡಿ, ಬಲವಂತದ ಮತಾಂತರ ಮತ್ತು ಇತ್ತೀಚೆಗೆ ನಡೆದ ಚರ್ಚ್ ಮೇಲೆ ದಾಳಿ ಹಾಗೂ ಅನಂತರದ ಘಟನೆಗಳನ್ನು ಖಂಡಿಸಿದರು.
ಅಲ್ಲದೆ, ಇದಕ್ಕೆ ಮುನ್ನ ರಾಜ್ಯಪಾಲರನ್ನು ಭೇಟಿ ಮಾಡಿದ ಈ ಸ್ವಾಮೀಜಿಗಳು ಮನವಿ ಪತ್ರ ಸಲ್ಲಿಸಿ ಈ ಅಭಿಪ್ರಾಯಗಳನ್ನು ಮಂಡಿಸಿದರು. ಸ್ವಾಮೀಜಿಗಳ ಇದೇ ಮನವಿ ಪತ್ರವನ್ನು ಪ್ರತ್ಯೇಕವಾಗಿ ಗೃಹ ಸಚಿವ ಡಾ|ವಿ.ಎಸ್.ಆಚಾರ್ಯ ಅವರು ವಿದ್ಯಾಪೀಠದಲ್ಲಿ ಸ್ವೀಕರಿಸಿದರು.
ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದ ಮುಖ್ಯಾಂಶಗಳು:
-ಪರಮತ ಸಹಿಷ್ಣುವಾದ ಹಿಂದು ಸಮಾಜಕ್ಕೆ ಕ್ರೈಸ್ತ ಸಮುದಾಯದ ಬಗ್ಗೆ ಯಾವುದೇ ರೀತಿಯ ಅವಿಶ್ವಾಸ, ಅಪನಂಬಿಕೆ ಇರಲಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಸಮಾಜದ ಸಾಮರಸ್ಯ ಹಾಗೂ ಸ್ವಾಸ್ಥ್ಯ ಕೆಡಿಸುವ ಮತಾಂತರ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಧರ್ಮಾಧಿಕಾರಿಗಳ ಮನಸ್ಸಿಗೆ ತೀವ್ರ ನೋವು ತಂದಿದೆ.
-ಯಾವುದೇ ತೆರನಾದ ಆಸೆ, ಆಮಿಷ, ಒತ್ತಡದ ಪ್ರಯೋಗವಿಲ್ಲದೆ ಮತಾಂತರ ತನ್ನಿಂದತಾನೆ ಆಗಲು ಸಾಧ್ಯವಿಲ್ಲ. ಅವರವರ ಧಾರ್ಮಿಕ ನಂಬಿಕೆ, ಶ್ರದ್ಧೆಯ ರೀತಿಯಲ್ಲಿ ಧರ್ಮಾಚರಣೆ ನಡೆಸುವಂತಾದ್ದು ಪ್ರತಿ ನಾಗರಿಕನ ಮೂಲಭೂತ ಹಕ್ಕು. ಆದರೆ ಈ ರೀತಿ ದೇವದೇವತೆಗಳನ್ನು ಕೀಳು ಮಟ್ಟದಲ್ಲಿ ಚಿತ್ರಿಸಿ, ಅವಹೇಳನಗೈದು ಸಾಹಿತ್ಯವನ್ನು ಹಿಂದುಗಳಿಗೆ ಹಂಚಿದ ಪ್ರಕರಣಗಳಿಂದ ಬಹುಸಂಖ್ಯಾತ ವರ್ಗಕ್ಕೆ ತೀವ್ರ ನೋವುಂಟು ಮಾಡಿದೆ. ಪರಿಣಾಮ ಕೆಲವು ಪ್ರಾರ್ಥನಾ ಕೇಂದ್ರಗಳಿಗೆ ಹಾನಿ ಉಂಟಾಗುವಂತಹ ಘಟನೆಗಳು ನಡೆದಿರುವುದೂ ನಮಗೆ ನೋವು ಉಂಟು ಮಾಡಿದೆ.
-ಶಾಲೆಗಳಲ್ಲಿ ಹೆಣ್ಣುಮಕ್ಕಳು ಹೂ ಮುಡಿಯಬಾರದು. ಬಳೆ ಧರಿಸಬಾರದು. ಮೂಗುತಿ ಇಡಬಾರದು. ಬಿಂದಿ ಇಡಬಾರದು ಎಂಬಿತ್ಯಾದಿ ನಿರ್ಬಂಧಗಳು ಸಮಾಜದಲ್ಲಿ ತೀವ್ರ ಬೇಸರ ಉಂಟು ಮಾಡಿತ್ತು. ಒರಿಸ್ಸಾದಲ್ಲಿ ಹಿಂದು ಸಂತ ಶ್ರೀ ಲಕ್ಷ್ಮಣಾನಂದ ಸರಸ್ವತಿ ಸ್ವಾಮಿಗಳು ಮತ್ತು ನಾಲ್ವರು ಸಾಧುಗಳ ಹತ್ಯೆ ಹಿಂದು ಸಮಾಜಕ್ಕೆ ತೀವ್ರ ಆಘಾತ ವಾಗಿತ್ತು. ಅಲ್ಲದೆ, ಈ ಪ್ರಕರಣದಿಂದಾಗಿ ಅಲ್ಲಿ ಉಂಟಾಗಿದ್ದ ಅಶಾಂತಿಯನ್ನು ನೆಪ ಮಾಡಿಕೊಂಡು ಕರ್ನಾಟಕದಲ್ಲಿ ಕ್ರೈಸ್ತ ಶಾಲೆಗಳನ್ನು ಬಂದ್ ಮಾಡಿ ಹಿಂದು ಮಕ್ಕಳನ್ನು ಪ್ರತಿಭಟನೆಯಲ್ಲಿ ಬಳಸಿಕೊಂಡದ್ದು ವ್ಯಾಪಕ ಅಚ್ಚರಿಗೆ ಕಾರಣವಾಗಿತ್ತು.
-ಮಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆದು ಎರಡೇ ದಿನಗಳಲ್ಲಿ ಶಾಂತಿ ನೆಲೆಸಿದೆ. ಇದು ಇಲ್ಲಿನ ಜನರ ಶಾಂತಿಪ್ರಿಯತೆಯ ದ್ಯೋತಕವೂ ಹೌದು. ಆದರೆ ಅನಂತರ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಹಿತಾಸಕ್ತ ಗುಂಪುಗಳು ಆಗಮಿಸಿ ಏಕಪಕ್ಷೀಯ ನಿಲುವು ತಳೆದು ಶಾಂತಿ ಸ್ಥಾಪನೆಯ ಯತ್ನಕ್ಕೆ ತೊಡರುಗಾಲು ಹಾಕುತ್ತಿರುವುದು ವಿಷಾದನೀಯ. ಇಂತಹ ಗುಂಪುಗಳು ಅನಾವಶ್ಯಕವಾಗಿ ಒಂದು ವರ್ಗದ ಪರ ಹಾಗೂ ಇನ್ನೊಂದು ವರ್ಗದ ವಿರುದ್ಧ ದೂಷಣೆಯಲ್ಲಿ ತೊಡಗಿ ಸಾಮಾಜಿಕ ಸಾಮರಸ್ಯ ಹಾಳು ಮಾಡುತ್ತಿರುವುದು ನಮಗೆ ತೀವ್ರ ಕಳವಳ ಉಂಟು ಮಾಡಿದೆ. ಹಿಂದು -ಕ್ರೈಸ್ತರು ನಾವು ಒಂದಾಗಿದ್ದೇವೆ ಎಂದು ಘೋಷಿಸಿದ ಹೊರತಾಗಿಯೂ ಸಾಮರಸ್ಯ ಕೆಡಿಸುವ ಇಂತಹ ಚಟುವಟಿಕೆಗಳು ನಡೆಯುತ್ತಿರುವುದು ನಮಗೆ ಆತಂಕ ತಂದಿದೆ.
-ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟದಂತೆ ಹಾಗೂ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳದಂತೆ ಸೂಚನೆ ಕೊಡಿ.
-ಸಂವಿಧಾನಬಾಹಿರ ಮತಾಂತರ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕು. ಹಿಂದು ದೇವತೆಗಳ ವಿರುದ್ಧ ಅಪಚಾರವೆಸಗುವ, ಕರಪತ್ರ ಹಂಚುವ, ಹಿಂದು ಮನೆಗಳಿಗೆ ಭೇಟಿ ನೀಡಿ ಮತಾಂತರಕ್ಕೆ ಪ್ರಚೋದಿಸುವವರಿಗೆ ಎಚ್ಚರಿಕೆ ನೀಡಬೇಕು.
ಎಲ್ಲೇ ದಾಳಿ ನಡೆದರೂ 24 ಗಂಟೆ ಉಪವಾಸ: ಪೇಜಾವರಶ್ರೀ ಘೋಷಣೆ
ರಾಜ್ಯದ ಎಲ್ಲೇ ಆಗಲಿ ದೇವಾಲಯ, ಮಸೀದಿ ಅಥವಾ ಚರ್ಚ್ ಮೇಲೆ ದಾಳಿ ನಡೆದರೆ ಶಾಂತಿಗಾಗಿ ಜನರಿಗೆ ಮನವಿ ಮಾಡಿ 24 ಗಂಟೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪೇಜಾವರ ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಎಲ್ಲಾ ಧರ್ಮದವರು ಶಾಂತಿಯಿಂದ ಜೀವನ ಮಾಡಬೇಕು ಎಂಬುದೇ ನನ್ನ ಉದ್ದೇಶ. ಎಲ್ಲೇ ದಾಳಿ ನಡೆದರೂ ಅಹಿಂಸಾತ್ಮಕ ಹೋರಾಟ ಮಾಡುತ್ತೇನೆ. ಅದಕ್ಕಾಗಿ ತಾವು ಈ ನಿರ್ಧಾರ ಪ್ರಕಟಿಸುತ್ತಿರುವುದಾಗಿ ಶ್ರೀಗಳು ಸ್ಪಷ್ಟಪಡಿಸಿದರು.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ | ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-24
|
|
| Lancelot N. Tauro, Manglore/ Doha Qatar | 2008-09-25 | | Modulu RSS / Bajrangdal avarige Hindu Dharma matthu Hindu Veda Bhagwatgita pavitra vakyavanna ati tiluvalike needa beku. Himsa karyakke Hindu Dharmadalli Swagatha illa endu spashta thilisabeku. SARVE JAANAM SUKHION BHAVANTHU. |
| Mohan H Naik, Mangaluru | 2008-09-24 | | Shri Pejavar swamyji's statement is true and sensible very much imperative. Violence must be condemned and equally the cause should be addressed. It is the time for, Hindu-Samaj to peep-in and start ‘Soul-search operation’, eradicate all obsolete in-human practice, such as un-touchability, dowry system, Caste system, etc...( to name few), which do not fetch any dignity to Hinduism. Swamy’s/Mut Chiefs have greater role in strengthening the Hindu faith, and social transformation of Hindu-Samaj. Lets hope in coming days, more and more Saints will come out of their mut, and tread on the path of Swamy Vivekananda, who taught ‘Universal brotherhood’ to the whole international community. |
| nityananda prabhu, kundapur | 2008-09-24 | | modalu bajarangadaladavaru hindu dharmakke maralida nantara matantara kayide jaarige barali. |
|