ಮನಾಮಾ: ತುಳು ಚಿತ್ರ ಹಾಗೂ ರಂಗನಟ ಆನಂದ್ ಬೋಳಾರ್ ನಿಧನ : ಬಹರೇನ್ ರಂಗಕರ್ಮಿಗಳ ತೀವ್ರ ಸಂತಾಪ |
ಪ್ರಕಟಿಸಿದ ದಿನಾಂಕ : 2008-09-24
1988 ರಲ್ಲಿ ಆನಂದ್ ಬೋಳಾರ್ ಅವರು ಬಹರೇನಿಗೆ ಭೇಟಿ ನೀಡಿದ್ದಾಗ ತೆಗೆದ ಚಿತ್ರ : ನಿಂತವರಲ್ಲಿ ಮಧ್ಯಭಾಗದಲ್ಲಿರುವವರು ದಿ.ಆನಂದ್ ಬೋಳಾರ್. ಎಡದಿಂದ ಕೊನೆಯವರೇ ಪ್ರಸಿದ್ಧ ಪ್ರಸಾದನ ಕಲಾವಿದ ಹಾಗೂ ರಂಗಕರ್ಮಿ ಶಂಕರ್ ಜತ್ತನ್ನ
ಮನಾಮಾ, ಸೆಪ್ಟೆಂಬರ್ 24: ಸಾಮಾಜಿಕ ಹಾಗೂ ಹಾಸ್ಯ ನಾಟಕಗಳೂ ಸೇರಿದಂತೆ ಸುಮಾರು ಏಳು ನೂರಕ್ಕೂ ಹೆಚ್ಚು ತುಳು ನಾಟಕಗಳು ಹಾಗೂ ಏಳು ಚಲನಚಿತ್ರಗಳಲ್ಲಿ ಅಭಿನಯಿಸಿ ತುಳು ರಂಗಭೂಮಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹಿರಿಯ ನಟ ಆನಂದ ಬೋಳಾರ್ ಅವರ ಹಠಾತ್ ನಿಧನಕ್ಕೆ ಬಹರೇನಿನ ಖ್ಯಾತ ಪ್ರಸಾದನ ಕಲಾವಿದ ಹಾಗೂ ರಂಗಕರ್ಮಿ ಶ್ರೀ ಜಂಕರ್ ಜತ್ತನ್ನರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತುಳು ರಂಗಭೂಮಿಯ ಹಿರಿಯಣ್ಣನಂತಿದ್ದು ತುಳುರಂಗಭೂಮಿಯ ನಿನ್ನೆ ಹಾಗೂ ಇಂದಿನ ಕೊಂಡಿಯಂತಿದ್ದ ಆನಂದ್ ಬೋಳಾರ್ ಅವರ ನಿಧನ ತುಳುರಂಭೂಮಿಯನ್ನು ಬರಡಾಗಿಸಿದೆಯಲ್ಲದೇ ತುಳುರಂಗಭೂಮಿ ತನ್ನ ಸ್ಪೂರ್ತಿಯ ಚಿಲುಮೆಯನ್ನೇ ಕಳೆದುಕೊಂಡಿದೆ ಎಂದು ಶಂಕರ್ ಜತ್ತನ್ನರವರು ಅಭಿಪ್ರಾಯಪಟ್ಟಿದ್ದಾರೆ. 1988 ರಲ್ಲಿ ಆನಂದ ಬೋಳಾರ್ ಅವರು ಬಹರೇನ್ ದ್ವೀಪರಾಷ್ಟ್ರಕ್ಕೆ -ಬಲೇ ಚಾ ಪರ್ಕ- ತಂಡದೊಂದಿಗೆ ನಾಟಕ ಪ್ರದರ್ಶನ ನೀಡಲು ಆಗಮಿಸಿದ್ದಾಗ ಶಂಕರ್ ಜತ್ತನ್ನರವರು ಆ ನಾಟಕದಲ್ಲಿ ಒಂದು ಚಿಕ್ಕ ಪಾತ್ರವನ್ನು ಅಭಿನಯಿಸಿದ್ದರು. ಆ ಸಮಯದಲ್ಲಿ ದಿ. ಆನಂದ್ ಬೋಳಾರ್ ಅವರೊಂದಿಗೆ ಶಂಕರ್ ಜತ್ತನ್ನರವರ ಬಾಂಧವ್ಯ ಬೆಳೆದಿತ್ತು. ಆ ಬಳಿಕ ಸುಮಾರು ಇಪ್ಪತ್ತು ವರ್ಷಗಳಷ್ಟು ಹಳೆಯದಾದ ಅವರೊಡನ ಒಡನಾಟ ಹಾಗೂ ಅನುಭವಗಳ ನೆನಪುಗಳ ಬುತ್ತಿಯನ್ನು ಭಾರವಾದ ಹೃದಯದಿಂದ ಬಿಚ್ಚಿಟ್ಟ ಶಂಕರ್ ಜತ್ತನ್ನ ತಾವು ಜೋಪಾನವಾಗಿರಿಸಿಕೊಂಡಿದ್ದ ಅಂದಿನ ದಿನಗಳಲ್ಲಿ ಜೊತೆಜೊತೆಯಾಗಿ ತೆಗೆಸಿಕೊಂಡಿದ್ದ ಆಲ್ಬಂ ಅನ್ನು ತೋರಿಸಿದರು.

ಈಗ ಆನಂದ್ ಬೋಳಾರ ಬಗ್ಗೆ ಅವರದ್ದೇ ಮಾತುಗಳಲ್ಲಿ ಕೇಳೋಣ: "ಆ ದಿನಗಳಲ್ಲಿ ಆನಂದ್ ಬೋಳಾರ್ ಅವರು ತುಳು ರಂಗಭೂಮಿಯ ಹಾಗೂ ಚಲನಚಿತ್ರರಂಗದ ಮೇರುನಟರಾಗಿದ್ದರು. ಆದರೆ ಆ ಒಂದು ಅಹಂಭಾವ ಅವರಲ್ಲಿ ಎಂದೂ ಕಂಡುಬಂದಿರಲಿಲ್ಲ. ಎಲ್ಲರೊಂದಿಗೆ ಸರಳವಾಗಿ ಮಾತನಾಡುತ್ತಾ ನಗುನಗುತ್ತಾ ಬೆರೆಯುತಿದ್ದರು. ಅವರೊಂದಿಗೆ ಬಲೇ ಚಾ ಪರ್‍ಕ ನಾಟಕದಲ್ಲಿ ನಾನೂ ಒಂದು ಪಾತ್ರ ಮಾಡಿದ್ದೆ. ಅವರಿಂದ ಬಹಳಷ್ಟು ಕಲಿತಿದ್ದೇನೆ. ನಾಟಕದ ಒಂದು ಚಿಕ್ಕ ಪಾತ್ರಧಾರಿಯೊಂದಿಗೂ ಅವರು ಪ್ರೀತಿಯಿಂದ ಮಾತನಾಡುತ್ತಿದ್ದರು. ತಪ್ಪಿದಾಗ ನಯವಾಗಿ ತಿದ್ದುತ್ತಿದ್ದರು. ಅಂತಹ ಸರಳ ವ್ಯಕ್ತಿತ್ವ ಅವರದ್ದು. ಅವರೊಂದಿಗಿನ ನನ್ನ ಪರಿಚಯ ಒಡನಾಟ ಇಪ್ಪತ್ತು ವರ್ಷಗಳಷ್ಟು ಹಳೆಯದಾದರೂ ಆ ನೆನಪುಗಳು ಮಾತ್ರ ಇಂದಿಗೂ ನನ್ನ ಮನದಾಳದಲ್ಲಿ ಹಸಿರಾಗಿದೆ"
ಮುಂದಕ್ಕೆ ಮಾತನಾಡಿದ ಜತ್ತನ್ನರವರು ಬೋಳಾರರವರಿಂದ ತುಳುರಂಗಭೂಮಿಯ ನಟರು ಬಹಳಷ್ಟು ಕಲಿತಿದ್ದಾರೆ. ಅವರು ರಂಗಭೂಮಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಜೀವನದ ಕೊನೆಯುಸಿರಿರುವವರೆಗೂ ಬಣ್ಣದ ಬದುಕಿಗಾಗಿ ತಮ್ಮನ್ನು ತಾವು ಮುಡು ಪಾಗಿಸಿಕೊಂಡಿದ್ದ ಆ ಮೇರು ನಟ ಒಬ್ಬ ನಟ ಮೈಗೂಡಿಸಿಕೊಳ್ಳಬೇಕಾದ ಬಹಳಷ್ಟು ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಶರೀರ ನಮ್ಮಿಂದ ಕಣ್ಮರೆಯಾಗಿರಬಹುದು. ಆದರೆ ಅವರು ಬಿಟ್ಟು ಹೋಗಿರುವ ಆದರ್ಷ ಮೌಲ್ಯಗಳು ಶಾಶ್ವತವಾಗಿ ನಮ್ಮೊಂದಿಗೆ ನಮ್ಮ ಕಣ್ಣೆದುರಿನಲ್ಲೇ ಇವೆ. ಅವುಗಳನ್ನು ತುಳುರಂಗಭೂಮಿಯ ಪ್ರತಿಯೊಬ್ಬನೂ ಪಾಲಿಸಿದರೆ ಅದುವೇ ತುಳುರಂಗಭೂಮಿಯನ್ನ ಗಲಿದೆ ಮಹಾನ್ ಆಸ್ತಿಗೆ ಸಲ್ಲಿಸುವ ಬಹುದೊಡ್ಡ ಶೃದ್ಧಾಂಜಲಿ ಎಂದರು
(ಚಿತ್ರ, ವರದಿ : ಕಮಲಾಕ್ಷ ಅಮೀನ್, ಬಹರೇನ್)
ಹಾಸ್ಯಕ್ಕೆ ತಾರಾ ಮೌಲ್ಯ ತಂದ ನಟ ಇನ್ನಿಲ್ಲ .ಬಾಳ ನಾಟಕ ಮುಗಿಸಿದ ಆನಂದ್ ಬೋಳಾರ್ (ಕ್ಲಿಕ್)
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-24
|
|
|