ಮನಾಮಾ: ಬಹರೇನ್ ಕನ್ನಡ ಸಂಘದಲ್ಲಿ ಮೂಡಿದ ರಂಗುರಂಗಿನ ರಂಗೋಲಿಗಳು |
ಪ್ರಕಟಿಸಿದ ದಿನಾಂಕ : 2008-09-24
ಮನಾಮಾ, ಸೆಪ್ಟೆಂಬರ್ ೨೪: ರಂಗೋಲಿ ಕಲೆಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸನಾತನ ಕಾಲದಿಂದಲೂ ಒಂದು ಪೂಜನೀಯ ಸ್ಥಾನವಿದೆ. ರಂಗೋಲಿ ಬಿಡಿಸುವುದು ಒಂದು ಕಲೆ ಮಾತ್ರವಲ್ಲದೇ ನಮ್ಮ ಸಂಸ್ಕೃತಿ, ಸಂಸ್ಕಾರದ ಒಂದು ಪ್ರತೀಕವಾಗಿದೆ.
ಅದಕ್ಕಾಗಿಯೇ ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ ಪೂಜಾ ಕಾರ್ಯಗಳಲ್ಲಿ ಈ ರಂಗೋಲಿ ಗಳು ನಮಗೆ ಕಾಣಸಿಗುತ್ತವೆ. ಮುಂಜಾನೆದ್ದು ಮುತ್ತೈದೆಯರು ಮನೆಯೆದುರು ರಂಗೋಲಿ ಬಿಡಿಸುವುದನ್ನು ನೋಡುವುದೇ ಒಂದು ಸೊಬಗು. ಆದರೆ ಆಧುನೀಕತೆಯು ಹೆಚ್ಚಾಗಿ ಆವರಿಸಿದಂತೆಲ್ಲಾ ಈ ರಂಗೋಲಿಗಳು ನಗರದಲ್ಲಷ್ಟೇ ಅಲ್ಲದೇ ಹಳ್ಳಿಗಳಲ್ಲಿಯೂ ಅಪರೂಪವಾಗುತ್ತಿವೆ. ಹಬ್ಬ ಹರಿದಿನಗಳಲ್ಲಿ ಮಾತ್ರ ಎಲ್ಲೋ ಒಂದೆರೆಡು ರಂಗೋಲಿ ಗಳನ್ನು ಕಾಣಬಹುದಾದಂತಹ ಪರಿಸ್ಥಿತಿ ಬಂದಿದೆ.
ಇಂತಹ ಪುರಾತನ ಹಾಗೂ ಅನನ್ಯ ಕಲೆಯನ್ನು ಜೀವಂತವಾಗಿರಿಸಬೇಕೆಂಬ ಉದ್ದೇಶದಿಂದ ಇಲ್ಲಿನ ಕನ್ನಡ ಸಂಘವು ಕಳೆದ ಅನೇಕ ವರ್ಷಗಳಿಂದ ಸಂಘದ ಸದಸ್ಯ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿಕೊಂಡು ಬರುತ್ತಿದೆ. ಈ ಸ್ಪರ್ಧೆಯು ಇತ್ತೀಚೆಗೆ ಸಂಘದ ಸಾಂಸ್ಕೃತಿಕ ಸಭಾಂಗಣದಲ್ಲಿ ಜರುಗಿ ಸಭಾಂಗಣದ ನೆಲದೆಲ್ಲೆಡೆ ರಂಗುರಂಗಿನ ಚಿತ್ತಾರಗಳು ಆಕರ್ಷಕವಾಗಿ ಮೂಡಿಬಂದು ವೀಕ್ಷಕರ ಕಣ್ಮನ ಸೆಳೆಯಿತು. ಸಂಘದ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಚುಕ್ಕೆಯಾಧಾರಿತ ಸಾಂಪ್ರಾದಾಯಿಕ ರಂಗೋಲಿಗಳಿಗೆ ಮಹತ್ವ ನೀಡಲಾಗಿದ್ದು ಹೆಚ್ಚಿನವರು ಚುಕ್ಕೆ ರಂಗೋಲಿಗಳನ್ನು ಬಿಡಿಸಿ ಪೂರಕವಾದ ವಿವಿಧ ಬಣ್ಣಗಳಿಂದ ಜೀವ ತುಂಬಿದರು. ಸ್ಪರ್ಧೆಯನ್ನು ಮನರಂಜನಾ ಕಾರ್ಯದರ್ಶಿಯವರಾದ ದೂಮಣ್ಣ ರೈ ಯವರು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಘದ ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ಮಾತನಾಡಿ ಮಹಿಳೆಯರ ಪ್ರತಿಭೆಗೆ ತಮ್ಮ ಮೆಚ್ಚುಗೆ ಪ್ರಕಟಿಸಿದರು.
ಸ್ಪರ್ಧೆಯ ವಿಜೇತರ ವಿವರ ಈ ಕೆಳಗಿನಂತಿದೆ:
ಪ್ರಥಮ: ಶ್ರೀಮತಿ ಪಲ್ಲವಿ ರಘುನಾಥ್ ದ್ವಿತೀಯ: ಶ್ರೀಮತಿ ಲೋಲಾಕ್ಷಿ ರಾಜಾರಾಮ್ ತೃತೀಯ: ಶ್ರೀಮತಿ ಶಾಲಿನಿ ರಾಜೇಶ್ ಶೆಟ್ಟಿ
ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-24
|
|
|