ದೋಹಾ: ಇಫ್ತಾರ್ ಕೂಟ ಆಚರಿಸಿದ ಕೆ.ಎಮ್.ಸಿ.ಎ. |
ಪ್ರಕಟಿಸಿದ ದಿನಾಂಕ : 2008-09-20
ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಖಂಡನೆ : ರಮಧಾನ್ ತಿಂಗಳ ಮಹತ್ವಕ್ಕೆ ಆದ್ಯತೆ
ದೋಹಾ, ಸೆಪ್ಟೆಂಬರ್ 20: ನಗರದಲ್ಲಿ ಕಾರ್ಯನಿರತವಗಿರುವ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ (ಕೆ.ಎಮ್.ಸಿ.ಎ) ತನ್ನ ಸದಸ್ಯರು ಹಾಗೂ ಕುಟುಂಬವರ್ಗದವರಿಗಾಗಿ ಇಫ್ತಾರ್ ಕೂಟವನ್ನು ಏರ್ಪಡಿಸಿತ್ತು.
ಗೋಲ್ಡನ್ ಫೋರ್ಕ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಶುಕ್ರವಾರ ೧೯ನೇ ಸೆಪ್ಟೆಂಬರ್ ಸಂಜೆ ಇಪ್ತಾರ್ ವೇಳೆಯಿಂದ ಪ್ರಾರಂಭವಾಯಿತು.
ಸರಳ ಉಪಾಹಾರದೊಂದಿಗೆ 19ನೇ ಉಪವಾಸವನ್ನು ಸಂಪೂರ್ಣಗೊಳಿಸಿದ ಬಳಿಕ ಮಗ್ರಿಬ್ ಪ್ರಾರ್ಥನೆಯನ್ನು ನಿರ್ವಹಿಸಲಾಯಿತು. ಆ ಬಳಿಕ ಪ್ರಾರಂಭವಾದ ಸಭೆಯನ್ನು ಕೆ.ಎಮ್.ಸಿ.ಎ. ಅಧ್ಯಕ್ಷರಾದ ಜನಾಬ್ ಸೈಯದ್ ಅಬ್ದುಲ್ ಹಾಯ್ ಅವರು ಸ್ವಾಗತಿಸಿದರು. ರಮಧಾನ್ ತಿಂಗಳ ಮಹತ್ವ ಹಾಗೂ ಉಪವಾಸಗಳ ಪ್ರಾಮುಖ್ಯತೆಯನ್ನು ಅವರು ಸಭೆಯಲ್ಲಿ ಮಂಡಿಸಿದರು. ಉಪವಾಸವನ್ನು ಆಚರಿಸುವ ಮೂಲಕ ಮುಸ್ಲಿಂ ಭಾಂಧವರಲ್ಲಿ ಪರಸ್ಪರ ಪ್ರೇಮ, ಭ್ರಾತೃತ್ವ ಬೆಳೆಯಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು. ಇತ್ತೀಚೆಗೆ ಊರಿನಲ್ಲಿ ಹಾಗೂ ದೆಹಲಿಯಲ್ಲಿ ನಡೆದ ಹಿಂಸಾಚಾರಗಳನ್ನು ಉಲ್ಲೇಖಿಸಿದ ಅವರು ಹಿಂಸೆಯನ್ನು ಖಂಡಿಸಿ ತಪ್ಪಿತಸ್ಥರಿಗೆ ಆದಷ್ಟು ಬೇಗನೇ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಈ ಹಿಂಸಾಚಾರದಿಂದ ಮುಗ್ಧ ಜನರಿಗೆ ಹೆಚ್ಚಿನ ತೊಂದರೆಯಾಗಿದ್ದು ಶಾಂತಿ ಕಾಪಾಡಲು ಸಮಾಜದ ಎಲ್ಲಾ ವರ್ಗಗಳು ಸಹಕರಿಸಬೇಕೆಂದು ಕರೆಯಿತ್ತರು.
ಇಫ್ತಾರ್ ಕೂಟದಲ್ಲಿ ಸುಮಾರು ನೂರಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು. ಮಹಿಳೆಯರಿಗೆ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಅವರಲ್ಲಿ ತುಳುಕೂಟದ ಅಧ್ಯಕ್ಷರಾದ ರವಿಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ಚಂದ್ರ ಶೆಟ್ಟಿ, ಕತರ್ ಕರ್ನಾಟಕ ಸಂಘದ ಅಧ್ಯಕ್ಷರಾದ ಅರವಿಂದ ಪಾಟಿಲ್, ನ್ಯಾಶನಲ್ ಎಕ್ಸ್ ಚೇಂಜ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಕೆ. ಮಂಜುನಾಥಪ್ಪ, ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಅಧ್ಯಕ್ಷ ಜನಾಬ್ ಅಬ್ದುಲ್ಲಾ ಮೋನೋ, ಇಂಡೋ-ಕತರ್ ಉರ್ದು ಮರ್ಕಜ್ ಅಧ್ಯಕ್ಷರಾದ ಜನಾಬ್ ಸುಲೇಮಾನ್ ದೆಹಲವಿ, ಸಾಟ್ಕೋ ಇಂಟರ್ನ್ಯಾಶನಲ್ ಸಂಸ್ಥೆಯ ಪ್ರಧಾನ ನಿರ್ದೇಶಕರಾದ ಸೈಯದ್ ಸುಹೇಲ್ ಬುಖಾರಿ ಪ್ರಮುಖರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಸೈಯದ್ ಅಬ್ದುಲ್ ಹಾಯ್ ಅವರು ಸ್ವಾಗತಿಸಿ ಅಂತಿಮವಾಗಿ ವಂದನಾರ್ಪಣೆಯನ್ನೂ ಸಲ್ಲಿಸಿದರು. ಈ ಕಾರ್ಯಕ್ರಮ ಜನಾಬ್ ಎಮ್. ಇಕ್ಬಾಲ್ ಮನ್ನಾ ಅವರಿಂದ ವ್ಯವಸ್ಥಿತವಾಗಿ ನಿಯೋಜಿಸಲ್ಪಟ್ಟಿತ್ತು.
ಚಿತ್ರ, ವರದಿ: ಇಕ್ಬಾಲ್ ಮನ್ನಾ, ದೋಹಾ, ಕತರ್.
ವರದಿಯ ವಿವರಗಳು |
 |
ಕೃಪೆ : ಚಿತ್ರ, ವರದಿ: ಇಕ್ಬಾಲ್ ಮನ್ನಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-20
|
|
|