ಬಹರೇನ್: ಮಂಗಳೂರಿನಲ್ಲಿ ಶೀಘ್ರವೇ ಪಾಸ್ ಪೋರ್ಟ್ ಕಛೇರಿ : ಸಚಿವರ ಭರವಸೆ |
ಪ್ರಕಟಿಸಿದ ದಿನಾಂಕ : 2008-09-18
ಕರ್ನಾಟಕದಲ್ಲೊಂದೇ ಪಾಸ್ ಪೋರ್ಟ್ ಕಛೇರಿ ಇರುಬ ಬಗ್ಗೆ ಅಚ್ಚರಿ: ಪ್ರಾಮಾಣಿಕ ಪ್ರಯತ್ನದ ಭರವಸೆ
ಮನಾಮಾ, ಸೆಪ್ಟೆಂಬರ್ 18: ಮಂಗಳೂರಿನಲ್ಲಿ ಪಾಸ್ ಪೋರ್ಟ್ ಕಛೇರಿಯೊಂದನ್ನು ತೆರೆಯಲು ಸಂಬಂಧಪಟ್ಟ ಸಚಿವರನ್ನು ಹಾಗೂ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಅವರೊಂದಿಗೆ ಸಮಾಲೋಚನೆ ನಡೆಸಿ ಆದಷ್ಟು ಬೇಗನೇ ಅಸ್ತಿತ್ವಕ್ಕೆ ಬರುವಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡುವೆನೆಂದು ಅನಿವಾಸಿ ಭಾರತೀಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ವಯಲಾರ್ ರವಿಯವರು ತಮ್ಮ ಬಹರೇನ್ ಭೇಟಿಯಲ್ಲಿ ತಿಳಿಸಿದ್ದಾರೆ. ಸ್ಥಳೀಯ ಪಂಚತಾರಾ ಹೋಟೆಲಿನಲ್ಲ್ ನಡೆದ ಸಭೆಯೊಂದರಲ್ಲಿ ಬಹರೇನ್ ಕನ್ನಡ ಕೂಟದ ಸದಸ್ಯರೊಂದಿಗೆ ಮಾತನಾಡುತ್ತಾ ಕರ್ನಾಟಕದಲ್ಲಿ ಒಂದೇ ಪಾಸ್ ಪೋರ್ಟ್ ಕಛೇರಿ ಇರುವ ಬಗ್ಗೆ ತಮ್ಮ ಅಚ್ಚರಿ ವ್ಯಕ್ತಪಡಿಸಿದರು.

ಬಹರೇನ್, ಕುವೈಟ್, ಯು.ಎಇ., ಸೌದಿ ಅರೇಬಿಯಾ, ಕತರ್ ಮುಂತಾದ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಿಗಳಾಗಿರುವ ಕನ್ನಡಿಗರಲ್ಲಿ ಮಂಗಳೂರು-ಉಡುಪಿಯವರೇ ಹೆಚ್ಚಾಗಿದ್ದು ಮಂಗಳೂರಿನಲ್ಲಿ ಪೂರ್ಣಪ್ರಮಾಣದ ಪಾಸ್ ಪೋರ್ಟ್ ಕಛೇರಿ ಇಲ್ಲದಿರುವುದು ಅನಾನುಕೂಲತೆಯುಂಟುಮಾಡಿದೆ ಎಂದು ರಾಜ್ಯಪ್ರಶಸ್ತಿ ವಿಜೇತ ಬಹರೇನ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಆಸ್ಟಿನ್ ಸಂತೋಷ್ ಕುಮಾರ್ ಅವರು ಮಾನ್ಯ ಸಚಿವರಿಗೆ ತಿಳಿಸಿದರು. ಕರ್ನಾಟಕದಲ್ಲಿ ಎರಡನೇ ಪಾಸ್ ಪೋರ್ಟ್ ಕಛೇರಿ ಬರುವುದಾದರೆ ಅದರ ಪ್ರಥಮ ಪ್ರಾಶಸ್ತ್ಯ ಮಂಗಳೂರಿಗೆ ಸಿಗಬೇಕಾಗಿದೆ ಎಂದು ಅಂಕಿ ಅಂಶಗಳ ಸಹಿತ ಮನದಟ್ಟು ಮಾಡಿಸಿದರು. ಆ ಬಳಿಕ ಕನ್ನಡ ಸಂಘ ಹಾಗೂ ಸಮಸ್ತ ಕನ್ನಡಿಗರ ಪರವಾಗಿ ಲಿಖಿತ ಮನವಿಯೊಂದನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿಯವರು ಕೂಡಾ ಮಾನ್ಯ ಸಚಿವರೊಂದಿಗೆ ಚರ್ಚಿಸಿ ಮಂಗಳೂರಿನಲ್ಲಿ ಪಾಸ್ ಪೋರ್ಟ್ ಕಛೇರಿಯೊಂದರ ತೀವ್ರ ಅವಶ್ಯಕತೆಯಿದೆ, ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಅತ್ಯಗತ್ಯ ಎಂದು ತಿಳಿಸಿದರು.
ಮನವಿಯನ್ನು ಸ್ವೀಕರಿಸಿದ ಮಾನ್ಯ ಸಚಿವರು ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ನಡೆಸುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಸನ್ಮಾನ್ಯ ಭಾರತೀಯ ರಾಯಭಾರಿಗಳಾದ ಶ್ರೀ ಬಾಲಕೃಷ್ಣ ಶೆಟ್ಟಿ, ಕನ್ನಡ ಸಂಘದ ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳು ಹಾಗೂ ಇನ್ನಿತರ ಅನಿವಾಸಿ ಭಾರತೀಯ ಗಣ್ಯರು ಉಪಸ್ಥಿತರಿದ್ದರು.
ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-18
|
|
|