ಅಲ್ಲಿ ಮಹಾಸ್ಫೋಟ, ಇಲ್ಲಿ ಮಹಾಪ್ರಯೋಗ |
ಪ್ರಕಟಿಸಿದ ದಿನಾಂಕ : 2008-09-13
ಮೈಸೂರು: ನ್ಯೂಟ್ರಿನೋ ಮೂಲ ಕಣ ಛೇದನ ಸಾಹಸ
ನ್ಯೂಟ್ರಿನೋ ಕಣಗಳು ಗಂಟೆಗೆ 3 ಲಕ್ಷ ಕಿ.ಮೀ. ರಭಸದಲ್ಲಿ ಪ್ರವಹಿಸುತ್ತದೆ. ಯಾವ ಬಂಧನಕ್ಕೂ ಸಿಲುಕದ ಈ ಮೂಲ ಕಣಗಳನ್ನು ಹಿಡಿದಿಟ್ಟುಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ. ವಾತಾವರಣ ಆಧರಿಸಿ ನಡೆಯುವ ಈ ಪ್ರಯೋಗ ದಟ್ಟಾರಣ್ಯ ಪ್ರದೇಶದಲ್ಲಿ ಬೆಳಕು ಕಿಂಚಿತ್ತೂ ಇರದ ಭೂಗರ್ಭದಲ್ಲಿ ಮಾತ್ರ ಸಾಧ್ಯ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ಮೈಸೂರು, ಸೆ. ೧೨: ಬ್ರಹ್ಮಾಂಡ ಸೃಷ್ಟಿಯ ರಹಸ್ಯ ಭೇದಿಸಲು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಜಗತ್ತಿನ 2 ಸಾವಿರ ವಿಜ್ಞಾನಿಗಳು ‘ಮಹಾಸ್ಫೋಟ’ ಕಾರ್‍ಯದಲ್ಲಿ ತನ್ಮಯರಾಗಿದ್ದರೆ ಇತ್ತ ಭಾರತ ತನ್ನ 50 ಮಂದಿ ವಿಜ್ಞಾನಿಗಳ ನೇತೃತ್ವದಲ್ಲಿ ‘ನ್ಯೂಟ್ರಿನೋ’ ಮೂಲ ಕಣಗಳನ್ನು ಛೇದಿಸುವ ಅಂಥದ್ದೇ ‘ಮಹಾಪ್ರಯೋಗ’ ಆರಂಭಿಸಿದೆ.
ಸುಮಾರು 60 ರಾಷ್ಟ್ರಗಳು ಕೈಜೋಡಿಸಲಿವೆ ಎಂದು ಹೇಳಲಾಗುತ್ತಿರುವ ಈ ‘ನ್ಯೂಟ್ರಿನೋ ರಹಸ್ಯ ಬಯಲು’ ಯೋಜನೆ ಸದ್ಯಕ್ಕೆ ಜಗತ್ತಿನ 3 ಕಡೆ ಮಾತ್ರ ಆರಂಭಗೊಂಡಿವೆ.
ಭಾರತ ಈ ಯೋಜನೆಗೆ ಕರ್ನಾಟಕ- ತಮಿಳುನಾಡು ಗಡಿ ಪ್ರದೇಶಕ್ಕೆ ಹೊಂದಿ ಕೊಂಡಿರುವ ‘ಮಸಿನಗುಡಿ’ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಿದೆ.
‘ಇಂಡಿಯಾ ಬೇಸ್ಡ್ ನ್ಯೂಟ್ರಿನೊ ಅಬ್ಸರ್ವೇಟರಿ’ ಎಂಬ ವಿಜ್ಞಾನಿಗಳನ್ನು ಒಳಗೊಂಡ ಭಾರತ ಸರಕಾರ ಪ್ರಾಯೋಜಿತ ಸಂಸ್ಥೆ ಈ ಮಹತ್ಕಾರ್ಯಕ್ಕೆ ಕೈಹಾಕಿದೆ. ಐಎನ್‌ಓ ಕೈಗೊಳ್ಳುತ್ತಿರುವ ಯೋಜನೆಗೆ ಮಸಿನಗುಡಿ ಪ್ರದೇಶ ಆಯ್ಕೆಯಾಗಿದ್ದರೆ, ಇದನ್ನು ನಿಯಂತ್ರಿಸುವ ಪ್ರಯೋಗಾಲಯ ಮೈಸೂರಿನಲ್ಲಿ ಸ್ಥಾಪನೆಯಾಗುತ್ತಿದೆ. ಇದಕ್ಕಾಗಿ ಮೈಸೂರು ವಿವಿ ಮತ್ತು ರೇರ್ ಮೆಟೀರಿಯಲ್ ಪ್ಲಾಂಟ್ (ಆರ್ ಎಂಪಿ) ಬಳಿ ಇರುವ ಆಲೋಕ ಅಕ್ಕಪಕ್ಕದ ಭೂಮಿಕೊಡಲು ರಾಜ್ಯ ಸರಕಾರ ಒಪ್ಪಿದೆ.
ಮೈಸೂರಿನಿಂದ ಊಟಿಗೆ ತೆರಳುವ ಮಾರ್ಗದಲ್ಲಿ ಗುಂಡ್ಲುಪೇಟೆಯಿಂದ 20 ಕಿ.ಮೀ. ದೂರದಲ್ಲಿರುವ ಮೂಡುಮಲೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಈ ಪ್ರದೇಶ ಒಳಪಟ್ಟಿದೆ. ಇಲ್ಲಿಗೆ ಸಮೀಪದ ಸಿಂಗಾರಗುಡ್ಡ ಎಂಬಲ್ಲಿ ಇರುವ ‘ಪೈಕಾರಹಳ್ಳ’ ಸ್ಥಳದಲ್ಲಿ ಈಗಾಗಲೇ ತಮಿಳುನಾಡು ಸರಕಾರ ಭಾರೀ ಎತ್ತರದಿಂದ ಧುಮುಕುವ ನೀರನ್ನು ಬಳಸಿ ಜಲವಿದ್ಯುತ್ ಘಟಕವನ್ನು ಪ್ರಾರಂಭಿಸಿದೆ. ಇದಕ್ಕಾಗಿ ಈ ಜಾಗದಲ್ಲಿ ಚಿಕ್ಕ ಪ್ರಮಾಣದ ಸುರಂಗವೊಂದನ್ನು ಕೊರೆಯಲಾಗಿದೆ.
ಈಗ ಐಎನ್‌ಓ ಕೈಗೊಳ್ಳುತ್ತಿರುವ ‘ನ್ಯೂಟ್ರಿನೊ’ ಯೋಜನೆಗೆ ಇದೇ ಪ್ರದೇಶ ಆಯ್ಕೆಯಾಗಿದ್ದು, ಈ ಜಾಗದಲ್ಲಿ 2.4 ಕಿ.ಮೀ. ವ್ಯಾಸದ ಬೃಹತ್ ಸುರಂಗವನ್ನು ಕೊರೆಯಲು ಸಿದ್ಧತೆಗಳು ನಡೆದಿವೆ. ಇಲ್ಲಿ ಭೂಮಿ ಕೊರೆದಾಗ ‘ಚೆಕ್ಲೊಯಾಟ್’ ಎಂಬ ಅಪ್ಪಟ ಕಲ್ಲುಬಂಡೆಗಳು ಪತ್ತೆಯಾಗಿದ್ದು, ‘ನೂಟ್ರಿನೊ’ ಬಂಧನಕ್ಕೆ ಸರಿಯಾದ ಸ್ಥಳ ಎಂಬ ಅಭಿಪ್ರಾಯವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
ನ್ಯೂಟ್ರಿನೋ ಎಂದರೇನು? ನ್ಯೂಟ್ರಿನೊ ಎಂಬುದು ವಾತಾವರಣದಲ್ಲಿ ಲಭ್ಯವಾಗುವ ಮೂಲಭೂತ ಕಣ. ಇದು ಸದಾ ಕಾಲ ಆಕಾಶದಿಂದ ಧರೆಗೆ ಸುರಿಯುತ್ತಲೇ ಇರುತ್ತದೆ ಎಂಬುದು ವಿಜ್ಞಾನಿಗಳ ವಾದ. ಆದರೆ ಈ ನ್ಯೂಟ್ರಿನೊ ಕಣಗಳು ಬರಿಗಣ್ಣಿಗೆ ಅಥವಾ ಸೂಕ್ಷ್ಮದರ್ಶಕ ಯಂತ್ರಗಳಿಗೂ ಗೋಚರವಾಗ ದಷ್ಟು ಸೂಕ್ಷ್ಮ ವಸ್ತು. ಆದರೆ ಇದರ ಶಕ್ತಿ ಅಪಾರ. ಇವು ಬೆಳಕಿನ ವೇಗದಲ್ಲಿ ಗಂಟೆಗೆ 3ಲಕ್ಷ ಕಿ.ಮೀ. ರಭಸದಲ್ಲಿ ಪ್ರವಹಿಸುತ್ತವೆ.
ಸಾಮಾನ್ಯವಾಗಿ ಯಾವ ಬಂಧನಕ್ಕೂ ಸಿಲುಕದ ಈ ಮೂಲಭೂತ ಕಣಗಳನ್ನು ಹಿಡಿದಿಟ್ಟುಕೊಳ್ಳಲು ಜಗತ್ತಿನಲ್ಲಿ ಇದುವರೆಗೆ ನಡೆದ ಯಾವ ಪ್ರಯೋಗಗ ಳಿಂದಲೂ ಸಾಧ್ಯವಾಗಿಲ್ಲ.
ವಾತಾವರಣ ಆಧರಿಸಿ ನಡೆಯುವ ಈ ಪ್ರಯೋಗ ದಟ್ಟಾರಣ್ಯ ಪ್ರದೇಶದಲ್ಲಿ ಬೆಳಕು ಸಂಪೂರ್ಣ ನಿಷಿದ್ಧಗೊಳ್ಳುವ ಭೂಗರ್ಭ ಪ್ರದೇಶದಲ್ಲಿ ಮಾತ್ರ ಸಾಧ್ಯ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಈ ಪ್ರಯೋಗಕ್ಕೆ ಪಶ್ಚಿಮಬಂಗಾಳದ ‘ರಮ್ಮನ್’ ಹಾಗೂ ತಮಿಳು ನಾಡು ಗಡಿಯಲ್ಲಿರುವ ‘ಮಸಿನಗುಡಿ’ ಪ್ರದೇಶಗಳನ್ನು ಗುರುತಿಸಲಾಗಿತ್ತು. ನ್ಯೂಟ್ರಿನೊ ಕಣಗಳನ್ನು ಒಳಗೆ ಸೆಳೆದುಕೊಳ್ಳುವ ಸಲುವಾಗಿ ಸುರಂಗ ಕೊರೆದ ನಂತರ ಅದರ ವಿನ್ಯಾಸಕ್ಕೆ ತಕ್ಕಂತೆ ಕಬ್ಬಿಣದ ಕೊಳಾಯಿ ಅಳವಡಿಸುವುದು ಯೋಜನೆಯ ಪ್ರಮುಖ ಭಾಗ. ಇದಕ್ಕಾಗಿ ಭಾರೀ ಪ್ರಮಾಣದ ಅದಿರು ಸಾಗಣೆ ಮಾಡಲು ಸ್ಥಳ ಯೋಗ್ಯವಾಗಿರಲೂಬೇಕು. ಆದರೆ ಪಶ್ಚಿಮ ಬಂಗಾಳದ ‘ರಮ್ಮನ್’ ಎಂಬ ಜಾಗ ದಟ್ಟಾರಣ್ಯದಿಂದ ಕೂಡಿದ್ದರೂ ಎತ್ತರದ ಪ್ರದೇಶವಾಗಿದ್ದು, ಅದಿರು ಸಾಗಣೆ ಕಷ್ಟ ಎಂಬ ಕಾರಣಕ್ಕೆ ಮಸಿನಗುಡಿ ಪ್ರದೇಶವೇ ಆಯ್ಕೆಯಾಗಿದೆ.
ಕೆಜಿಎಫ್‌ನಲ್ಲಿ ವಿಫಲ ‘ನ್ಯೂಟ್ರಿನೊ’ ಸೆರೆ ಹಿಡಿಯುವ ಇಂಥದ್ದೇ ಒಂದು ಪ್ರಯತ್ನ ಕೆಲ ವರ್ಷಗಳ ಹಿಂದೆ ಕೋಲಾರ ಜಿಲ್ಲೆ ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾಗಿ ಕೊರೆಯಲಾಗಿರುವ ಸುರಂಗ ಮಾರ್ಗದಲ್ಲಿ ನಡೆದಿತ್ತು ಎನ್ನಲಾಗಿದೆ. ಆದರೆ ಆಗ ‘ನ್ಯೂಟ್ರಿನೊ’ ಸೆರೆ ಹಿಡಿಯುವ ಪ್ರಯೋಗ ವಿಫಲವಾಗಿದೆ. ಆದರೆ ಈಗ ‘ನ್ಯೂಟ್ರಿನೊ’ ವಾಸ್ತವತೆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ದೇಶದ ನುರಿತ ವಿಜ್ಞಾನಿಗಳು ಈ ಯೋಜನೆಯ ನೇತೃತ್ವ ವಹಿಸಿಕೊಂಡಿದ್ದಾರೆ.
900 ಕೋಟಿ ರೂ. ಯೋಜನೆ:
ಭಾರತದಲ್ಲಿ ನಡೆಯುತ್ತಿರುವ ‘ನ್ಯೂಟ್ರಿನೊ’ ಯೋಜನೆಗೆ ಸಹಭಾಗಿತ್ವ ವಹಿಸಿಕೊಳ್ಳಲು 60 ದೇಶಗಳು ಮುಂದಾಗಿವೆ. ಆದರೆ ಭಾರತ ಸರಕಾರ ಈ ಬೃಹತ್ ಯೋಜನೆಗಾಗಿ ತಗುಲುವ 900 ಕೋಟಿ ರೂ.ಗಳನ್ನು ತಾನೇ ಭರಿಸಲು ಮುಂದಾಗಿದೆ.
ಕೇಂದ್ರ ಸರಕಾರ ಈಗಾಗಲೇ ರೂ. 600 ಕೋಟಿ ಹಣವನ್ನು ಮಂಜೂರು ಮಾಡಿದೆ. ಈ ‘ನ್ಯೂಟ್ರಿನೊ’ ಯೋಜನೆಯನ್ನು ಇನ್ನು 3 ವರ್ಷಗಳಲ್ಲಿ ಪೂರ್ಣ ಗೊಳಿಸಬೇಕೆಂಬ ಸ್ವಯಂ ಕಾಲಮಿತಿಯನ್ನು ನೇತೃತ್ವ ವಹಿಸಿರುವ ವಿಜ್ಞಾನಿಗಳೇ ವಿಧಿಸಿಕೊಂಡಿದ್ದಾರೆ.
ಪ್ರಯೋಗ ಏತಕ್ಕಾಗಿ:
ವೈಜ್ಞಾನಿಕ ಪ್ರಗತಿ ಸಾಧಿಸುವಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತ ಮುಂಚೂಣಿಗೆ ಬರುತ್ತಿದ್ದು, ವಿಶ್ವದಲ್ಲಿ ಇದುವರೆಗೆ ಯಾವ ದೇಶವೂ ‘ನ್ಯೂಟ್ರಿನೊ’ ವಿಷಯದಲ್ಲಿ ಅಷ್ಟಾಗಿ ಆಸಕ್ತಿ ತಳೆದಿರಲಿಲ್ಲ. ಈಗ ಭಾರತ ವಿಶೇಷ ಆಸಕ್ತಿ ತೋರಿದೆ. ಒಂದೊಮ್ಮೆ ‘ನ್ಯೂಟ್ರಿನೊ’ ಪ್ರಯೋಗ ಯಶಸ್ವಿಯಾದರೆ ಮೂಲಭೂತ ಕಣಗಳನ್ನು ‘ಇಂಧನ’ವಾಗಿ ಪರಿವರ್ತಿಸಬೇಕೆಂಬ ಉದ್ದೇಶವನ್ನು ಭಾರತ ಸರಕಾರ ಹೊಂದಿದೆ. ನಿರೀಕ್ಷೆಯಂತೆ ಯೋಜನೆ ಸಫಲವಾದರೆ ಮುಂದಿನ 20 ವರ್ಷಗಳಲ್ಲಿ ಭಾರತ ‘ಇಂಧನ’ ಕೊರತೆಯಿಂದ ಸಂಪೂರ್ಣ ಮುಕ್ತ ಗೊಳ್ಳಲಿದೆ.
ಉದ್ಯಾನಕ್ಕೆ ಆಪತ್ತು:
ನ್ಯೂಟ್ರಿನೊ ಯೋಜನೆ ಅನುಷ್ಠಾನಗೊಂಡರೆ ಕರ್ನಾಟಕ-ತಮಿಳುನಾಡು ಗಡಿಯನ್ನು ಹೊಂದಿಕೊಂಡಿರುವ ‘ಮಧುಮಲೈ’ ಮತ್ತು ‘ಬಂಡೀಪುರ’ ರಾಷ್ಟ್ರೀಯ ಉದ್ಯಾನದ ವನ್ಯಸಂಪತ್ತು ಹಾಗೂ ಜೀವವೈವಿಧ್ಯತೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಯೋಜನೆಗೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ದಟ್ಟವಾದ ಕಾಡಿನೊಳಗೆ ಈ ಪ್ರಯೋಗ ನಡೆಯುವುದರಿಂದ ಪ್ರಾಣಿಸಂಕುಲ ನಾಶಗೊಳ್ಳಬಹುದು ಎಂಬ ಆತಂಕ ಎದುರಾಗಿದೆ.
ಪರಿಸರ ಅನುಮತಿ:
ದೇಶದ ರಾಷ್ಟ್ರೀಯ ಉದ್ಯಾನಗಳಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳಲು ಅನುಮತಿ ನಿರಾಕರಿಸುವ ಕೇಂದ್ರ ಪರಿಸರ ಇಲಾಖೆ ‘ನ್ಯೂಟ್ರಿನೊ’ ಯೋಜನೆಗೆ ಮಾತ್ರ ಹಸಿರುನಿಶಾನೆ ತೋರಿದೆ. ‘ನ್ಯೂಟ್ರಿನೊ’ ಭಾರತದ ಪಾಲಿಗೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದೆ.
ಯೋಜನೆ ಕಾಡಿನ ಭೂಗರ್ಭದಲ್ಲಿ ಗೋಪ್ಯವಾಗಿ ನಡೆಯುವುದರಿಂದ ವನ್ಯಮೃಗಗಳ ನೆಮ್ಮದಿಗೆ ಭಂಗ ಉಂಟಾಗದು ಎಂಬ ಅಭಿಪ್ರಾಯವನ್ನು ಪರಿಸರ ಇಲಾಖೆ ತಾಳಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-13
|
|
|