| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಗಳೂರು: ತುಳು ಭಾಷೆಯ ಜೀವಂತಿಕೆಯ ವಿಮರ್ಶೆ ಇಂದಿನ ಅಗತ್ಯ: ವಿನಯ್ ಹೆಗ್ಡೆ |
ಪ್ರಕಟಿಸಿದ ದಿನಾಂಕ : 2009-11-01
ಮಂಗಳೂರು, ಅ.೩೧: ತುಳುನಾಡಿನಿಂದ ಹೊರ ರಾಜ್ಯ, ದೇಶಗಳಿಗೆ ಹೋಗಿ ತುಳುವಿನ ಮಹತ್ವವನ್ನು ತುಳುವರು ಪಸರಿಸಿರುವಂತೆಯೇ ತುಳುನಾಡಿನಲ್ಲಿ ತುಳು ಭಾಷೆ ಎಷ್ಟರ ಮಟ್ಟಿಗೆ ಜೀವಂತವಾಗಿದೆ ಎಂಬ ಬಗ್ಗೆ ಇಂದು ತುಳುವರು ಆಳವಾಗಿ ವಿಮರ್ಶಿಸಬೇಕಾದ ಅಗತ್ಯವಿದೆ ಎಂದು ನಿಟ್ಟೆ ಡೀಮ್ಸ್ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ ಹೆಗ್ಡೆ ಹೇಳಿದ್ದಾರೆ.
ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಇಂದು ವಿಶ್ವ ತುಳು ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸಲಾದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂಶೋಧಕರ ಪ್ರಕಾರ ಮುಂದಿನ ೫೦ ವರ್ಷಗಳಲ್ಲಿ ತುಳುನಾಡು ಇತಿಶ್ರೀಯಾಗಲಿದೆ. ಸಮುದ್ರ ಮೇಲೆ ಬಂದು ಮಂಗಳೂರು, ಉಡುಪಿ ಸಮುದ್ರದ ತಳಕ್ಕೆ ಸೇರಲಿದೆ. ಈ ನಿಟ್ಟಿನಲ್ಲಿ ಯುವಕರು ಈ ಮಣ್ಣಿನ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳೊಂದಿಗೆ ತುಳುನಾಡನ್ನು ರಕ್ಷಿಸುವ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ. ಬದಲಾವಣೆ, ಅಭಿವೃದ್ಧಿಯೊಂದಿಗೆ ಬದುಕಿನ ಆಧಾರವಾಗಿದ್ದ ಕೃಷಿ ಭೂಮಿ ಇಂದು ಬಂಜರಾಗುತ್ತಿದೆ. ನಮ್ಮ ಭೂಮಿ ಯಾವತ್ತಿನವರೆಗೆ ಕೃಷಿಗೆ ಯೋಗ್ಯವಾಗಿ ಉಳಿಯುತ್ತದೋ ಅಲ್ಲಿಯವರೆಗೆ ನಾವು ಸುಖದಿಂದ ಬಾಳಲು ಸಾಧ್ಯವಾಗುತ್ತದೆ ಎಂದು ವಿನಯ್ ಹೆಗ್ಡೆ ವಿಶ್ಲೇಷಿಸಿದರು. ತುಳುನಾಡಿಗೆ ವಲಸೆ ಬಂದವರು ತುಳುನಾಡಿನ ಅಭಿವೃದ್ಧಿಯ ಸುಖವನ್ನು ಅನುಭವಿಸುವ ಜೊತೆಗೆ ಆ ಭಾಷೆ, ನೆಲದ ಅಭಿವೃದ್ಧಿಗೂ ಕಾರಣರಾಗಬೇಕು. ಎಲ್ಲರೂ ತುಳು ಭಾಷೆಯನ್ನು ಕಲಿಯುವ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಹೇಳಿದ ವಿನಯ್ ಹೆಗ್ಡೆ, ತುಳುವರು ತಮ್ಮ ಧರ್ಮ, ಆಚರಣೆ, ನಂಬಿಕೆಗಳ ಜೊತೆಗೆ ಇನ್ನೊಬ್ಬರ ಧಾರ್ಮಿಕ ಭಾವನೆ, ನಂಬಿಕೆಗಳನ್ನು ಗೌರವಿಸಿ, ಆದರಿಸುವುದರೊಂದಿಗೆ ತುಳುನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು. ಗೋಷ್ಠಿಗಳ ವರದಿ ರಾಜ್ಯ, ಕೇಂದ್ರ ಸರಕಾರಕ್ಕೆ ಸಲ್ಲಿಕೆ
ವಿಶ್ವ ತುಳು ಸಮ್ಮೇಳನದ ಆಶ್ರಯದಲ್ಲಿ ಮುಂದಿನ ಪೀಳಿಗೆಗಾಗಿ ಮುನ್ನೋಟ ಎಂಬ ದೃಷ್ಟಿಕೋನದೊಂದಿಗೆ ‘ವಾಣಿಜ್ಯ ವ್ಯವಹಾರ, ಆರ್ಥಿಕಾಭಿವೃದ್ಧಿ, ನೇತ್ರಾವತಿ ನದಿ ತಿರುವು’ ಎಂಬ ವಿಷಯದಲ್ಲಿ ಹಮ್ಮಿಕೊಂಡಿರುವ ವಿಚಾರಸಂಕಿರಣವು ನಿನ್ನೆಯ ಬಗ್ಗೆ ಅಭಿಮಾನ, ಇಂದಿನ ಬಗ್ಗೆ ಜಾಗೃತಿ ಹಾಗೆ ನಾಳೆಯ ಬಗ್ಗೆ ಕನಸಿನ (ಕೋಡೆ, ಇನಿ, ಎಲ್ಲೆ) ಪರಿಕಲ್ಪನೆಯೊಂದಿಗೆ ನಡೆಯುತ್ತಿದೆ. ಈ ವಿಚಾರಸಂಕಿರಣದ ಗೋಷ್ಠಿಗಳಲ್ಲಿ ಚರ್ಚಿಸಲ್ಪಟ್ಟ ವಿಷಯಗಳ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಸಲ್ಲಿಸಲಾಗುವುದು ಎಂದು ವಿಶ್ವ ತುಳು ಸಮ್ಮೇಳನದ ಅಧ್ಯಕ್ಷ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಡಾ. ಡಿ.ವಿರೇಂದ್ರ ಹೆಗ್ಗಡೆ ತಿಳಿಸಿದರು. ತುಳುವರು ಪ್ರಪಂಚದ ಯಾವ ಮೂಲೆಯಲ್ಲಾದರೂ ತಮ್ಮ ಸಾಧನೆಯ ಮಹತ್ವವನ್ನು ಪ್ರದರ್ಶಿಸಬಲ್ಲರು ಎಂಬುದನ್ನು ಹೊಟೇಲ್, ಬ್ಯಾಂಕಿಂಗ್ ಮೊದಲಾದ ಕ್ಷೇತ್ರಗಳ ಮೂಲಕ ಸಾಬೀತು ಪಡಿಸಿದ್ದಾರೆ. ಆದರೆ ಬಂದರು ಸೇರಿದಂತೆ ತುಳುನಾಡಿನ ಅಭಿವೃದ್ಧಿ ವಾಸ್ತವವಾಗಿ ಸಾಗಬೇಕಾದ ದಿಸೆಯಲ್ಲಿ ಬೆಳೆದಿಲ್ಲ ಎಂಬುದು ವಿಷಾದನೀಯ ಎಂದವರು ಅಸಮಾಧಾನ ವ್ಯಕ್ತಪಡಿಸಿದರು. ತುಳುನಾಡಿನಲ್ಲಿ ಇಂದು ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿದ್ದು, ವಾಣಿಜ್ಯ ಕ್ಷೇತ್ರಬೆಳೆಯಬೇಕಾದರೆ ವ್ಯವಹಾರ ಕಾರ್ಯಗಳಿಗೆ ಅಗತ್ಯವಾದ ಉತ್ತಮ ರಸ್ತೆ, ವಿದ್ಯುಚ್ಛಕ್ತಿ ಸೇರಿದಂತೆ ತುಳುನಾಡಿನಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದ ಅವರು, ಕೃಷಿ ಭೂಮಿಗೆ ಹಾನಿಯಾಗದ ರೀತಿಯಲ್ಲಿ ಅಭಿವೃದ್ಧಿಗೆ ಅವಕಾಶ ನೀಡಬೇಕಾಗಿದೆ ಎಂದರು. ಪಾಶ್ಚಾತ್ಯ ಹೊಡೆತದಿಂದ ತುಳುನಾಡಿನ ಸಂರಕ್ಷಣೆಯಾಗಲಿ
ತುಳು ಸಮುದಾಯಗಳು ವಿಶೇಷ ಆಚಾರ, ವಿಚಾರ, ವೈವಿಧ್ಯತೆಯನ್ನು ಹೊಂದಿದ್ದರೂ ಪಾಶ್ಚಾತ್ಯ ಹೊಡೆತಗಳಿಂದ ಎಲ್ಲಿ ಅವೆಲ್ಲವೂ ಮೆರೆಯಾಗಿ ಬಿಡುತ್ತವೋ ಎಂಬ ಭಯವೂ ತುಳು ಭಾಷೆ, ಸಂಸ್ಕೃತಿಯನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ತುಳು ಸಮ್ಮೇಳನದ ಮೂಲಕ ಉತ್ಸವ ರೂಪದಲ್ಲಿ ಅಲ್ಲಲ್ಲಿ ತುಳುವಿನ ಸಮಗ್ರ ಅವಲೋಕನ ನಡೆಯುತ್ತಿರುವುದು ಸಂತಸದ ವಿಚಾರ ಎಂದು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕರ್ನಾಟಕ ಅರಣ ಇಲಾಖೆಯ ಹೆಚ್ಚುವರಿ ಮುಖ್ಯ ಅರಣ್ಯ ರಕ್ಷಣಾಧಿಕಾರಿ ಡಾ.ಕೆ. ಸುಂದರ್ ನಾಯ್ಕ್ ಅಭಿಪ್ರಾಯಿಸಿದರು. ಜಾಗತೀಕರಣದ ಹುನ್ನಾರ, ಕೈಗಾರಿಕಾ ಕ್ರಾಂತಿಯು ತುಳುನಾಡಿನ ಮೂಲಕಸುಬಗಳನ್ನು ಪಲ್ಲಟಗೊಳಿಸುತ್ತಿರುವ ಈ ಕಾಲಘಟ್ಟದಲ್ಲಿ ತುಳು ಪರಂಪರೆಯನ್ನು ರಕ್ಷಿಸುವ ಜೊತೆಗೆ ಅದನ್ನು ಪುನಶ್ಚೇತನಗೊಳಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಈ ಸಂದರ್ಭ, ವಿಶ್ವ ತುಳು ಸಮ್ಮೇಳನದ ಮಂಗಳೂರು ಸಮಿತಿ ಸಂಚಾಲಕ ಡಾ.ಕೆ. ದೇವರಾಜ್ ಅವರ ‘ಆರ್ಗನೈಶೇಷನಲ್ ಬಿಹೇವಿಯರ್’ ಕೃತಿ ಮತ್ತು ಅಸೀಮಾ ಪತ್ರಿಕೆಯ ಗೋ ವಿಶೇಷಾಂಕವನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಅಲ್‌ಹಾಜ್ ಯೆನೆಪೋಯ ಅಬ್ದುಲ್ಲಾ ಕುಂಞಿ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಪಾಲ್ತಾಡಿ ರಾಮಕೃಷ್ಣ ಆಚಾರ್, ಸಮ್ಮೇಳನದ ಮಂಗಳೂರು ಸಮಿತಿ ಸಂಚಾಲಕ ಡಾ.ಕೆ. ದೇವರಾಜ್ ಉಪಸ್ಥಿತರಿದ್ದರು.
ಕರಾವಳಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್‌ನ ಡಾ.ಎನ್.ಕೆ. ತಿಂಗಳಾಯ ಸ್ವಾಗತಿಸಿದರು. ಶರಣ್ಯ ಮತ್ತು ಅನನ್ಯ ಪ್ರಾರ್ಥಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನದ ಮಂಗಳೂರು ಸಮಿತಿ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ವಂದಿಸಿದರು.
ತುಳುವರ ಹೆಮ್ಮೆಯ ನಡಿಗೆ (ತುಳುವೆರೆ ಪೆರ್ಮೆದ ನಡಪು) ವಿಶ್ವ ತುಳು ಸಮ್ಮೇಳನದ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾದ ವಿಚಾರ ಸಂಕಿರಣ ಕಾರ್ಯಕ್ರಮದ ಜೊತೆಯಲ್ಲೇ ಇಂದು ಕರಾವಳಿ ಉತ್ಸವ ಮೈದಾನದಿಂದ ಟಿವಿ ರಮಣ ಪೈ ಸಭಾಂಗಣದವರೆಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ತುಳುವರ ಹೆಮ್ಮೆಯ ನಡಿಗೆ (ತುಳುವೆರೆ ಪೆರ್ಮೆದ ನಡಪು) ನಡೆಯಿತು. ತುಳುನಾಡಿನ ಪ್ರಸಿದ್ಧ ಹುಲಿವೇಷಧಾರಿಗಳು, ಕರಾವಳಿಯ ಗಂಡುಕಲೆಯೆಂದೇ ಖ್ಯಾತಿ ಪಡೆದಿರುವ ಯಕ್ಷಗಾನದ ವೇಷಧಾರಿಗಳು ಕೂಡಾ ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-11-01 00:00:00
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
|