‘ವಿಶ್ವ ತುಳು ಸಮ್ಮೇಳನ’ಕ್ಕೆ ಮುಖ್ಯಮಂತ್ರಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ |
ಪ್ರಕಟಿಸಿದ ದಿನಾಂಕ : 2009-10-30
ಬೆಳ್ತಂಗಡಿ, ಅ.೨೯: ಉಜಿರೆಯಲ್ಲಿ ಡಿಸೆಂಬರ್ 10 ರಿಂದ 13 ರ ವರೆಗೆ ನಡೆಯಲಿರುವ ‘ವಿಶ್ವ ತುಳು ಸಮ್ಮೇಳನ’ದ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಲಿ ದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಉಜಿರೆಯ ವಿಶ್ವ ತುಳು ಸಮ್ಮೇಳನ ಕಾರ್ಯಾಲಯದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ವಿಚಾರ ತಿಳಿಸಿದರು.
ಸಮ್ಮೇಳನಕ್ಕಿಂತ ಮುಂಚಿತವಾಗಿ ಉಜಿರೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳನ್ನು ದುರಸ್ತಿ ಮಾಡಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು ಒಟ್ಟಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಬಗ್ಗೆ ಕೇಳಿಕೊಳ್ಳಲಾಗಿದೆ ಎಂದು ಹೆಗ್ಗಡೆ ಹೇಳಿದರು.
ತುಳು ಸಮ್ಮೇಳನದ ಅಂಗವಾಗಿ ಡಿ.೬ರಂದು ಮಂಗಳೂರಿನಲ್ಲಿ ಮೊಗರ ಯುವ ವೇದಿಕೆ ಇದರ ಸಹಕಾರದೊಂದಿಗೆ ‘ಕಡಲ ಕ್ರೀಡೆ’ಗಳನ್ನು ಆಯೋಜಿಸಲಾಗಿದೆ. ಚಿತ್ರಾಪುರ ಬೀಚ್‌ನಲ್ಲಿ ಕ್ರೀಡೆಗಳು ನಡೆಯಲಿವೆ. ದೋಣಿ ಸ್ಪರ್ಧೆ, ಸಮುದ್ರದಲ್ಲಿ ಈಜುವ ಸ್ಪರ್ಧೆ, ಮರಳಿನಲ್ಲಿ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ವಿವರ ನೀಡಿದರು. ನ.೨೨ರಂದು ಉಜಿರೆಯಲ್ಲಿ ತುಳುನಾಡಿನ ಕುಸ್ತಿ ಪಂದ್ಯಾಟವನ್ನು ಏರ್ಪಡಿಸಲಾಗಿದೆ.
ಅದೇ ರೀತಿ ನ.11 ರಿಂದ ಡಿ.6 ರ ವರೆಗೆ ಜಿಲ್ಲೆಯ ವಿವಿಧ ಚಲನಚಿತ್ರ ಮಂದಿರಗಳಲ್ಲಿ ತುಳು ಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ. ಬೆಳ್ತಂಗಡಿ, ಉಡುಪಿ, ಪುತ್ತೂರು, ಮೂಡಬಿದ್ರೆ, ಉಜಿರೆಯ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದರು.
ತುಳು ಗ್ರಾಮದ ನಿರ್ಮಾಣ ಕಾಯ ಭರ ದಿಂದ ಸಾಗುತ್ತಿದೆ. ಎಸ್‌ಡಿಎಂ ಕಾಲೇಜಿನಲ್ಲಿ ವಸ್ತು ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾ ಗುತ್ತಿದೆ. ಆಹಾರ ಮೇಳದ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ತುಳು ಸಂಪ್ರದಾಯಗಳ ರೀತಿಯಲ್ಲಿಯೇ ಆಹಾರಗಳನ್ನು ತಯಾರಿಸಿ ಬರುವ ಅತಿಥಿಗಳಿಗೆ ವಿತರಿಸಲಾಗುವುದು ಎಂದು ವಿರೇಂದ್ರ ಹೆಗ್ಗಡೆಯವರು ತಿಳಿಸಿದರು.
ತುಳು ಸಮ್ಮೇಳನಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಮ್ಮೇಳನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಜನರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಸಮ್ಮೇಳನದ ಯಶಸ್ಸಿಗಾಗಿ 23 ಉಪ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ತಯಾರಿಗಳು ಭರದಿಂದ ಸಾಗುತ್ತಿದೆ ಎಂದರು.
ತುಳು ಜಾನಪದ ಆಟಗಳ ಸ್ಪರ್ಧೆಗಳು ವಲಯ ಮಟ್ಟದಲ್ಲಿ ಪೂರ್ಣಗೊಂಡಿದ್ದು, ತಾಲೂಕು ಮಟ್ಟದ ಸ್ಪರ್ಧೆಗಳ ಬಳಿಕ ಜಿಲ್ಲಾ ಮಟ್ಟದ ಸ್ಪರ್ಧೆಗಳು ನ.28 ರಂದು ಪುತ್ತೂರಿನಲ್ಲಿ ನಡೆಯಲಿದೆ. ಸಮ್ಮೇಳನದ ಸ್ಮರಣ ಸಂಚಿಕೆಯ ರಚನೆ ಕಾರ್ಯ ಮುಂದುವರಿದಿದ್ದು, ಸಮ್ಮೇಳನ ದಲ್ಲಿ ೫೧ ಪುಸ್ತಕಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ವಿರೇಂದ್ರ ಹೆಗ್ಗಡೆ ಹೇಳಿದರು.
ಸಮ್ಮೇಳನದ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕಮಗಳನ್ನು ಆಯೋಜಿಸ ಲಾಗುತ್ತಿದ್ದು, ತುಳು ಸಮ್ಮೇಳನ ಸದಾ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಗಿ ಮೂಡಿಬರಲಿದೆ ಎಂದು ಅವರು ತಿಳಿಸಿದರು.
ಮಂಗಳೂರಿನಲ್ಲಿ ಅ.31 ರಂದು ನಡೆಯುವ ತುಳು ವ್ಯವಹಾರ, ಆರ್ಥಿಕ ಪ್ರಗತಿಯ ಮತ್ತು ನೇತ್ರಾವತಿ ನದಿ ತಿರುವು ಯೋಜನೆಯ ಕುರಿತ ಗೋಷ್ಠಿಗಳಲ್ಲಿ ಚರ್ಚೆ ನಡೆಯಲಿದೆ. ತುಳುನಾಡಿನ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿರೇಂದ್ರ ಹೆಗ್ಗಡೆ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ, ವಿಶ್ವ ತುಳು ಸಮ್ಮೇಳನ ಸಮಿತಿ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-10-30 00:00:00
|
|
|