ಮಕ್ಕಾ: ಕುರಾನ್ ಬೋಧನೆಯನ್ನು ಪರಿಪಾಲಿಸಿ : ಮಕ್ಕಾ ಮಸೀದಿಯ ಪ್ರಥಮ ಶುಕ್ರವಾರದ ಪ್ರವಚನ |
ಪ್ರಕಟಿಸಿದ ದಿನಾಂಕ : 2008-09-07
ಹತ್ತು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ ಜುಮಾ ನಮಾಜು : ಪರಿಪಾಲಿಸದ ಪಠನೆ ವ್ಯರ್ಥ : ಅಲ್ ಶೊರಾಯಿಮ್
ಮಕ್ಕಾ, ಸೆಪ್ಟೆಂಬರ್ 7: ಮೊನ್ನೆ ಶುಕ್ರವಾರದ ಪ್ರಾರ್ಥನೆ ಈ ವರ್ಷದ ರಮಧಾನ್ ತಿಂಗಳ ಪ್ರಥಮ ಶುಕ್ರವಾರವಾಗಿದ್ದು ಹತ್ತು ಲಕ್ಷಕ್ಕೂ ಹೆಚ್ಚು ಜನರು ಮಕ್ಕಾದ ಮಸ್ಜಿದ್ ಎ ಹರಂ ನಲ್ಲಿ ಜುಮಾ ನಮಾಜು ಸಲ್ಲಿಸಿದರು. ನಮಾಜಿಗೆ ಮುನ್ನ ಈ ಮಸೀದಿಯ ಇಮಾಂ ಆಗಿರುವ ಶೇಖ್ ಸೌದ್ ಅಲ್ ಶೋರಾಯಿಂ ಅವರು ತಮ್ಮ ಪ್ರವಚನದಲ್ಲಿ ಪವಿತ್ರ ಕುರಾನ್ ಅನ್ನು ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಒತ್ತು ನೀಡಿದರು. ವ್ಯಕ್ತಿಯ ಆತ್ಮ ವಿಕಸನ, ಕತ್ತಲೆಯಲ್ಲಿ ಬದುಕುತ್ತಿರುವ ವ್ಯಕ್ತಿಗೆ ಬೆಳಕು ತೋರುವ ಹಾಗೂ ಸದ್ಬಾಳ್ವೆ ನಡೆಸಲು ಕುರಾನಿನಲ್ಲಿ ಹೇಳಿರುವುದನ್ನು ಅರ್ಥೈಸಿಕೊಂಡು ಆ ಪ್ರಕಾರ ನಡೆಯುವುದು ಮುಖ್ಯವಾಗಿದೆ ಎಂದು ಅವರು ತಮ್ಮ ಪ್ರವಚನದಲ್ಲಿ ಅರುಹಿದರು.
ಕುರಾನ್ ಅನ್ನು ಅರ್ಥೈಸಿಕೊಳ್ಳದೇ ಕೇವಲ ಪಠಣದಿಂದ ಹೆಚ್ಚಿನ ಪ್ರಯೋಜನವಾಗದು, ಗ್ರಂಥದಲ್ಲಿ ವಿವರಿಸಿದಂತೆ ಅಲ್ಲಾಹುವಿನ ವಾಣಿಯನ್ನು ಧಿಕ್ಕರಿಸಿದ ಆದ್, ಥಮುದ್ ಮತ್ತು ಫಾರೋಹಗಳು ನಿರ್ನಾಮ ಹೊಂದಿರುವುದನ್ನು ಉದಾಹರಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಉಳಿದೆಲ್ಲಾ ತಿಂಗಳುಗಳಿಗಿಂತ ರಮಧಾನ್ ತಿಂಗಳು ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದು ಈ ತಿಂಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ದಾನ, ಧರ್ಮ, ಪ್ರಾರ್ಥನೆ, ಉಪವಾಸಗಳನ್ನು ಕೈಗೊಳ್ಳಬೇಕು ಎಂದು ಅವರು ಕರೆನೀಡಿದರು.
ರಮಧಾನ್ ತಿಂಗಳ ಪ್ರಯುಕ್ತ ಮಕ್ಕಾದ ಪ್ರಮುಖ ಮಸೀದಿಯಲ್ಲಿ ವಿಶ್ವದ ವಿವಿಧ ಭಾಷೆಗಳಲ್ಲಿ ಅನುವಾದಗೊಂಡಿರುವ ಮಿಲಿಯಾಂತರ ಕುರಾನ್ ಪ್ರತಿಗಳನ್ನು ಉಚಿತವಾಗಿ ಹಂಚಲಾಯಿತು. ಇದರಲ್ಲಿ ಉರ್ದು, ಫ್ರೆಂಚ್, ಇಂಡೋನೇಶಿಯನ್, ತುರ್ಕಿ, ಚೈನೀಸ್, ಮಲಯಾಳಂ, ಸ್ಪಾನಿಷ್, ಅಲ್ಬೇನಿಯನ್, ಹಊಸಾ ಅಲ್ಲದೇ ನೇತ್ರಹೀನರಿಗಾಗಿ ಬ್ರೈಲ್ ಲಿಪಿಯ ಕುರಾನ್ ಗ್ರಂಥಗಳನ್ನೂ ವಿತರಿಸಲಾಯಿತು.
ಮದೀನಾ ಅಲ್ ಮುನವ್ವರಾ ಮಸೀದಿಯಲ್ಲಿಯೂ ಹೆಚ್ಚಿನ ಜನಸಂದಣೆಗಾಗಿ ಹೆಚ್ಚಿನ ಕಾಳಜಿ ವಹಿಸಲಾಗಿದ್ದು ಎಲ್ಲಾ ಸರ್ಕಾರಿ ಇಲಾಖೆಗಳು ಐದು ಲಕ್ಷ ಜನರನ್ನು ಬರಮಾಡಿಕೊಳ್ಳುವ ಸಿದ್ಧತೆಯಲ್ಲಿವೆ.
ವರದಿಯ ವಿವರಗಳು |
 |
ಕೃಪೆ : ಅರಬ್ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-07
|
|
|