ಬಹರೇನ್: ಚಿಣ್ಣರು ಸೃಷ್ಟಿಸಿದ ಬಣ್ಣದ ಲೋಕ |
ಪ್ರಕಟಿಸಿದ ದಿನಾಂಕ : 2008-09-05
ಚಿತ್ರಕಲೆಯಲ್ಲಿ ಮಕ್ಕಳ ಪಾಂಡಿತ್ಯ ಪ್ರದರ್ಶನ : ಪ್ರತಿಭೆಗೆ ಸೂಕ್ತ ಪ್ರೋತ್ಸಾಹ
ಮನಾಮಾ, ಸೆಪ್ಟೆಂಬರ್ 5: ಸಭಾಂಗಣದಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಃಶಬ್ಧ ಆವರಿಸಿತ್ತು. ಸಾಲಾಗಿ ಜೋಡಿಸಿಟ್ಟ ಮೇಜುಗಳೆದುರು ವಿವಿಧ ವಯೋಮಿತಿಯ ಪುಟಾಣಿಗಳು, ಬಾಲಕ ಬಾಲಕಿಯರು ಸಿದ್ಧರಾಗಿದ್ದರು. ಅವರೆಲ್ಲರ ಗಮನ್ ಮೇಜಿನ ಮೇಲಿರುವ ಶ್ವೇತವರ್ಣದ ಹಾಳೆಗಳ ಮೇಲಿತ್ತು. ನೋಡುತ್ತಿದ್ದಂತೆ ಪುಟಾಣಿಗಳ ಕಲ್ಪನೆಗಳು ಗರಿಗೆದರಿ ಆ ಹಾಳೆಗಳ ಮೇಲೆ ಚಿತ್ತರದ ರೂಪದಲ್ಲಿ ಮೂಡಿಬಂದವು. ಅಲ್ಲಿ ಪ್ರ್‍ಅಕೃತಿ ಸೌಂದರ್ಯದ ಮನಮೋಹಕ ದೃಶ್ಯ, ಪ್ರಾಣಿಪಕ್ಷಿಗಳು, ಪ್ರಸಿದ್ಧ ವ್ಯಕ್ತಿಗಳು, ಹೀಗೇ ವಿವಿಧ ರೀತಿಯ ಆಕರ್ಶಕ ಚಿತ್ರಗಳು ಪುಟಾಣಿಗಳ ಕಲಾಕುಂಚದಿಂದ ಹೊರಬಂದು ಒಂದು ಚಿಕ್ಕ ಬಣ್ಣದ ಲೋಕವೇ ಸೃಷ್ಟಿಯಾಗಿತ್ತು.
ಮೇಲೆ ವರ್ಣಿಸಿದ್ದು ಇತ್ತೀಚೆಗೆ ಇಲ್ಲಿನ ಅನಿವಾಸಿ ಬಿಲ್ಲವರ ಸಂಘಟನೆಯಾದ ಗುರುಸೇವಾ ಸಮಿತಿಯು ತನ್ನ ಸದಸ್ಯರ ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಂದು ಸ್ಥಳೀಯ ವೃಂದಾವನ ರೆಸ್ಟೋರೆಂಟ್ ಸಭಾಂಗಣದಲ್ಲಿ ಕಂಡುಬಂದ ಅಪೂರ್ವ ದೃಶ್ಯ.
"ಚಿತ್ರಕಲಾ ಸ್ಪರ್ಧೆಯಿರುವಾಗ ಮಾತ್ರ ಅದಕ್ಕಾಗಿ ಪೂರ್ವ ಸಿದ್ಧತೆ ನಡೆಸುವುದಲ್ಲ, ಚಿತ್ರಕಲೆಯಿರುವುದು ನಿರಂತರ ಅಭ್ಯಾಸದ ಅಗತ್ಯವಿರುವ ಒಂದು ಕಲಾ ಪ್ರಾಕಾರ. ನಾವು ದಿನನಿತ್ಯದ ಜೀವನದಲ್ಲಿ ಕಾಣುವ ಪ್ರಕೃತಿ ಸೌಂದರ್ಯ, ಅಪರೂಪದ ದೃಶ್ಯಗಳು ಇನ್ನಿತರ ವಸ್ತುಗಳನ್ನು ಮನಸ್ಸಿನಲ್ಲಿ ಸೆರೆಹಿಡಿದು ಸಮಯ ಸಿಕ್ಕಾಗಲೆಲ್ಲಾ ಅಭ್ಯಾಸ ಮಾಡುತ್ತ ಅದನ್ನು ಕ್ಯಾನ್ವಾಸಿನ ಮೇಲೆ ಪರಿಣಾಮಕಾರಿಯಾಗಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದರೆ ಮಾತ್ರ ಚಿತ್ರಕಲೆಯ ಸಂಪೂರ್ಣ ಅಭಿವ್ಯಕ್ತಿ ಸಾಧ್ಯ" ಎಂದು ಖ್ಯಾತ ಚಿತ್ರಕಲಾವಿದ ಹಾಗೂ ತೀರ್ಪುಗಾರರಲ್ಲೊಬ್ಬರಾದ ಶ್ರೀಯುತ ನಾಗರಾಜರಾವ್ ಮಂಗಳೂರ್ ಅವರು ಸ್ಪರ್ಧಿಗಳನ್ನುದ್ದೇಶಿಸಿ ಮಾತನಾಡುತ್ತಾ ತಮ್ಮ ಅಭಿಪ್ರಾಯ ತಿಳಿಸಿದರು. ಅಲ್ಲದೇ ಸ್ಪರ್ಧಿಗಳಿಗೆ ಅನೇಕ ಉಪಯುಕ್ತ ಸಲಹೆಗಳನ್ನು, ಸುಳಿವುಗಳನ್ನು ನೀಡಿದರು. ಸ್ಪರ್ಧೆಯ ಇನ್ನೋರ್ವ ತೀರ್ಪುಗಾರರಾಗಿ ಇಲ್ಲಿನ ಖ್ಯಾತ ಜಾಹೀರಾತು ಸಂಸ್ಥೆಯ ಆಡಳಿತ ನಿರ್ದೇಶಕ ಅಶೋಕ್ ಶೆಟ್ಟಿಯವರು ಸಹಕರಿಸಿದ್ದರು. ಶರೀಫ್ ಗ್ರೂಪಿನ ವಿಜಯ್ ಕುಮಾರ್ ಬ್ರಹ್ಮಾವರ್, ಶಂಕರ್ ಜತ್ತನ್ನ, ಸದಾಶಿವ ಮಣಿಪಾಲ್ ಮೊದಲಾದವರು ಸ್ಪರ್ಧೆಯ ಪ್ರಾಯೋಜಕರಾಗಿ ಸಹಕರಿಸಿದ್ದರು. ಅಧ್ಯಕ್ಷರಾದ ರಾಜಕುಮಾರ್, ಖಜಾಂಚಿ ವಿಜಯಕುಮಾರ್, ಉಪಖಜಾಂಚಿ ದಿನಕರ ಬಂಗೇರಾ, ಉಪಮನರಂಜನಾ ಕಾರ್ಯದರ್ಶಿ ಸುರೇಂದ್ರ ಭ್ರಹ್ಮಾವರ್, ಉಪಕಾರ್ಯದರ್ಶಿ ಗಿರೀಶ್ ಕಂಕನಾಡಿ ಮೊದಲಾದವರು ಈ ಸ್ಪರ್ಧೆಯಲ್ಲಿ ಉಪಸ್ಥಿತರಿದ್ದು ತಮ್ಮ ಸಹಕಾರ ನೀಡಿದರು.
ವಯೋಮಾನಕ್ಕನುಗುಣವಾಗಿ ಸ್ಪರ್ಧೆಯ ವಿಜೇತರ ವಿವರಗಳು ಈ ಕೆಳಗಿನಂತಿವೆ:
ವಯೋಮಿತಿ 5 ರಿಂದ 7 : ( ಕ್ರಮವಾಗಿ) ಆರ್ಯ ರಾಜಕುಮಾರ್, ಆದಿತ್ಯ ಹಾಗೂ ಅನುಷ್ಕಾ ವಯೋಮಿತಿ 7 ರಿಂದ 11 : ಅಶ್ಮಿತಾ, ಅಶ್ವಿತಾ, ಸಂಚಿತ್ ವಯೋಮಿತಿ 11ರಿಂದ 18: ಅಕ್ಷತಾ, ಸಂಪತ್ ಜತ್ತನ್ನ, ಶ್ವೇತಾ
ವರದಿಯ ವಿವರಗಳು |
 |
ಕೃಪೆ : ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-05
|
|
|