ನ್ಯೂಜೆರ್ಸಿಯಲ್ಲಿ ವೈಭವದ ಶ್ರೀ ಕೃಷ್ಣ ಲೀಲೋತ್ಸವ ಮತ್ತು ರಾಯರ ಆರಾಧನೆ |
ಪ್ರಕಟಿಸಿದ ದಿನಾಂಕ : 2008-09-03
( ಹೆಚ್ಚಿನ ಚಿತ್ರಗಳು ಫೋಟೋ ಆಲ್ಬಮ್ ನಲ್ಲಿವೆ.ಮೇಲಿನ ಲಿಂಕ್ ಕ್ಲಿಕ್ ಮಾಡಿ)
ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ಉಡುಪಿ ಶ್ರೀ ಪುತ್ತಿಗೆ ಮಠದ ಶಾಖೆ ಶ್ರೀಕೃಷ್ಣವೃಂದಾವನದಲ್ಲಿ ಇತ್ತೀಚೆಗೆ ಶ್ರೀ ಕೃಷ್ಣಲೀಲೋತ್ಸವ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಭಕ್ತರು ಅತ್ಯಂತ ಭಕ್ತಿ ಉತ್ಸಾಹದಿಂದ ಭಾಗವಹಿಸಿ ಪುನೀತರಾದರು.
ವೈಭವದ ಪೂಜೆ, ಭವ್ಯ ಅಲಂಕಾರ, ಅದ್ಭುತ ಸಂಗೀತ, ಸ್ವಾದಿಷ್ಟ ಪ್ರಾಸಾದ, ನೂರಾರು ಸಂಖ್ಯೆಯ ಸ್ವಯಂ ಸೇವಕರ ಸಂಭ್ರಮದ ಓಡಾಟ, ಅದ್ಭುತ ವ್ಯವಸ್ಥೆ ಇತ್ಯಾದಿಗಳಿಂದ ಮೈಮರೆತು ಅಸಂಖ್ಯ ಭಕ್ತರು ಅನುಭವಿಸಿದ ಆ ದಿವ್ಯ ಆನಂದ ಅದು ಅನಿರ್ವಚನೀಯ!

ಶ್ರೀ ಕೃಷ್ಣವೃಂದಾವನದ ಪ್ರಧಾನ ಅರ್ಚಕ ಶ್ರೀ ಯೋಗೀಂದ್ರ ಭಟ್ ಇವರ ನೇತೃತ್ವದಲ್ಲಿ ನಡೆದ ಮಹಾಪೂಜೆ ಯಲ್ಲಿ ಶ್ರೀವಾದಿರಾಜ ಭಟ್ ಮತ್ತು ಶ್ರೀ ವಿಶ್ವನಾಥ ಭಟ್ ಸಹಕರಿಸಿದರು. ನೆರೆದ ಸಾವಿರಾರು ಜನರಿಗೆ ಮಹಾಪ್ರಸಾದದ ವ್ಯವಸ್ಥೆ ಶ್ರೀ ರಂಗನಾಥ ಭಟ್ ಇವರ ನೇತೃತ್ವದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರಕಾರದ ಮಾಜಿ ಸಚಿವ ಶ್ರೀ ನಾಗರಾಜ ಶೆಟ್ಟಿ ಮತ್ತು ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯರು ಮಾತನಾಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವಿದ್ವಾಂಸರಾದ ಶ್ರೀ ಜಯಕೃಷ್ಣ ನೆಲಮಂಗಲ ಅವರು ಆಂಗ್ಲಭಾಷೆಗೆ ಅನುವಾದಿಸಿದ ಶ್ರೀ ಈಶಾವಸ್ಯ ಉಪನಿಶತ್ತಿನ ಮಧ್ವ ಭಾಷ್ಯ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.

ಉಡುಪಿಯಲ್ಲಿ ಪರ್ಯಾಯ ಪೂಜಾ ದೀಕ್ಷಿತರಾಗಿರುವ ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವೀಡಿಯೋ ಸಂದೇಶದ ಮೂಲಕ ನೆರೆದ ಭಕ್ತಜನರನ್ನು ಹರಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಶ್ರೀಮತಿ ವಸುಂಧರಾ ದೊರೆಸ್ವಾಮಿ ಅವರಿಂದ ಭರತನಾಟ್ಯ , ಶ್ರೀಮತಿ ಆಶಾ ಜನಾರ್ದನ್ ಮತ್ತು ಚಿ. ಜಯಂತ್ ಕೃಷ್ಣಮೂರ್ತಿ ಇವರಿಂದ ಭಕ್ತಿ ಸಂಗೀತ ನಡೆಯಿತು. ಕೃಷ್ಣವೇಷ ಸ್ಪರ್ಧೆಯಲ್ಲಿ ಹಲವಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

ವರದಿಯ ವಿವರಗಳು |
 |
ಕೃಪೆ : Yogeendra Bhat ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-03
|
|
|