ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಲು ಕರೆ ಷಿಕಾಗೊದಲ್ಲಿ ಐದನೇ ವಿಶ್ವಕನ್ನಡ ಸಮ್ಮೇಳನ ಉದ್ಘಾಟನೆ |
ಪ್ರಕಟಿಸಿದ ದಿನಾಂಕ : 2008-08-30
ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲು ಮುಂದಾಗುವಂತೆ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಕರೆ ನೀಡಿದರು. ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ (ಅಕ್ಕ) ಇಲ್ಲಿ ಆಯೋಜಿಸಿರುವ 5 ನೇ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಷಿಕಾಗೊ: ‘ಅಮೆರಿಕಾದಲ್ಲಿ ಗಳಿಸಿದ ಸಂಪತ್ತನ್ನು ಮಾತ್ರ ತನ್ನಿ ಎಂದು ನಾನು ಹೇಳುತ್ತಿಲ್ಲ. ಇಲ್ಲಿ ನೀವು ಪಡೆದ ಅನುಭವದ ಸಾರವನ್ನೂ ಕರ್ನಾಟಕಕ್ಕೆ ಧಾರೆ ಎರೆಯಿರಿ. ನಾವು- ನೀವು ಸೇರಿ ಸಮೃದ್ಧ ಕರ್ನಾಟಕ ಕಟ್ಟೋಣ. ಉಜ್ವಲ ಭವಿಷ್ಯಕ್ಕೆ ಹೊಸ ಭಾಷ್ಯ ಬರೆಯೋಣ’ ಎಂದು ಅವರು ಕರೆ ನೀಡಿದರು.
‘ಇದು ನನ್ನ ಅಕ್ಕರೆಯ ಕರೆ. ನನ್ನ ಈ ಪ್ರಾಂಜಲ ಕರೆಯನ್ನು ಉಪಸ್ಥಿರಲ್ಲಿದ ಇತರ ಅನಿವಾಸಿ ಕನ್ನಡಿಗರಿಗೂ ತಿಳಿಸಬೇಕು. ಇದು ನನ್ನ ವಿನಂತಿ’ ಎಂದೂ ಅವರು ನುಡಿದರು.
‘ನೀವು ಓದಿದ ನಿಮ್ಮೂರಿನ ಶಾಲೆಗೆ ಸೂಕ್ತ ಕಟ್ಟಡ ಇಲ್ಲವೆ - ನಾಲ್ಕು ಕೊಠಡಿ ಕಟ್ಟಿಸಿಕೊಡಿ, ಬೇಕಾದರೆ ಅದಕ್ಕೆ ನಿಮ್ಮ ಹಿರಿಯರ ಹೆಸರಿಡಿ, ಶಾಲೆಗೊಂದು ಪ್ರಯೋಗಶಾಲೆ ರೂಪಿಸಿಕೊಟ್ಟರೆ ಇನ್ನಷ್ಟು ಮಕ್ಕಳು ನಿಮ್ಮಂತೆ ವಿಜ್ಞಾನಿಗಳಾಗಿ ರೂಪುಗೊಳ್ಳಬಹುದು.
‘ನಿಮ್ಮ ಹಳ್ಳಿಗೆ ನಿಮ್ಮಿಂದ ಕುಡಿಯುವ ನೀರಿನ ಯೋಜನೆ ಬಂದರೆ ಇಡೀ ಹಳ್ಳಿಯ ಹೆಣ್ಣುಮಕ್ಕಳು ನಿಮ್ಮನ್ನು ಹರಸುತ್ತಾರೆ. ನಿಮ್ಮ ಊರಿಗೆ ಒಂದು ಸುಸಜ್ಜಿತ ಆಸ್ಪತ್ರೆ ಬಂದರೆ ಎಲ್ಲ ತಲೆಮಾರುಗಳು ಆರೋಗ್ಯ ಪಡೆಯುತ್ತವೆ.
‘ನಿಮ್ಮ ಹಳ್ಳಿಗೆ ವಿದ್ಯುತ್ ದೀಪಗಳ ವ್ಯವಸ್ಥೆ ಬಂದರೆ ಎಲರ ಬಾಳು ಬೆಳಗುತ್ತದೆ. ನಿಮ್ಮ್ಲಲಿ ಅನೇಕರು ರೈತ ಕುಟುಂಬದಿಂದ ಬಂದವರು, ಕೃಷಿ ತರಬೇತಿ ಕೇಂದ್ರಗಳ ಸ್ಥಾಪನೆಗೆ ನೆರವಾದರೆ ನಿಮ್ಮ ಹಳ್ಳಿಯ ತರುಣ ರೈತರಲ್ಲಿ ಪ್ರಗತಿಯ ಕನಸು ಬಿತ್ತಿದಂತಾಗುತ್ತದೆ’ ಎಂದರು.

ಸಮಿತಿ
ಹಿಂದೆ ಬಿದ್ದಿಲ್ಲ: ‘ಕರ್ನಾಟಕ ರಾಜ್ಯ ಕೈಗಾರಿಕೆ ಬೆಳವಣಿಗೆಯಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಆದರೆ ಅಭಿವೃದ್ಧಿಯ ವೇಗ ಹೆಚ್ಚಿಸಲು ಆಗಬೇಕಾದ್ದು ಇನ್ನೂ ಬಹಳ ಉಳಿದಿದೆ. ಆಧುನಿಕ ಕಾಲದ ಉದ್ಯಮಗಳು ಸಾಹಸಿಗಳನ್ನು ಕೈಬೀಸಿ ಕರೆಯುತ್ತಿವೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ್ಲಲಿ ಬೆಂಗಳೂರು ಅತ್ಯಂತ ಪ್ರಸಿದ್ಧವಾಗಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರವೂ ಬೆಂಗಳೂರನ್ನೇ ಮೆಚ್ಚಿದೆ.
‘ಸಾಂಸ್ಕೃತಿಕ ರಂಗದಲ್ಲಿ ನೀವು ಮಾಡಬೇಕಾದ ಕೆಲಸವೂ ಬಹಳ ಇದೆ. ಮಕ್ಕಳಲ್ಲಿ ಆಸಕ್ತಿ ಬೆಳೆಸಲು, ಯುವಜನರನ್ನು ಪ್ರೋತ್ಸಾಹಿಸಲು ಕಲೆ-ಸಂಗೀತ ತರಬೇತಿ ಕೇಂದ್ರಗಳ ಸ್ಥಾಪನೆ ಅಗತ್ಯ ಇದೆ.
‘ಇದಕ್ಕೆ ನಿಮ್ಮೆಲ್ಲರ ಬೆಂಬಲ, ಧನಸಹಾಯ ಬೇಕು ಎಂಬುದನ್ನು ಹೇಳಬೇಕಿಲ್ಲ. ಇಷ್ಟೇ ಅಲ, ಅಮೆರಿಕದಲ್ಲಿ ನೀವು ನಡೆಸುತ್ತಿರುವ ಕನ್ನಡಪರ ಚಟುವಟಿಕೆಗಳಿಗೆ ಸಮರ್ಥ ನಾಯಕತ್ವ ಒದಗಿಸಲು, ಚಿಕಾಗೋ ವಿಶ್ವವಿದ್ಯಾಲಯದ್ಲಲಿ ಕನ್ನಡ ಆಧ್ಯಯನ ಪೀಠವನ್ನು ಸ್ಥಾಪಿಸಲು ನಮ್ಮ ಸರ್ಕಾರ ಸಿದ್ಧವಿದೆ. ಅದಕ್ಕೆ ಬೇಕಾದ ಅನುಮತಿಯನ್ನು ವಿಶ್ವವಿದ್ಯಾಲಯದಿಂದ ಕೊಡಿಸಲು ನೀವ್ಲೆಲರೂ ಪ್ರಯತ್ನಿಸಬೇಕು’ ಎಂದು ಮನವಿ ಮಾಡಿದರು.
‘ವಿದೇಶದಲ್ಲಿರುವ ಬಹುತೇಕ ಮಂದಿ ರೈತ ಕುಟುಂಬದಿಂದ ಬಂದವರು. ಅನ್ನದಾತ ರೈತನ ನೋವು ನಲಿವನ್ನು ಹತ್ತಿರದಿಂದ ಬಲ್ಲವರು. ನೀವು ದೂರದ ದೇಶದಲ್ಲಿದ್ದರೂ ನಿಮ್ಮ ಬಂಧುಗಳೊಡನೆ ಸಂಪರ್ಕದಲ್ಲಿರುತ್ತೀರಿ. ಭಾರತದಲ್ಲಿ ಇಂದು ರೈತರು ಅನುಭವಿಸುತ್ತಿರುವ ಕಷ್ಟನಷ್ಟಗಳ ಪರಿಚಯ ನಿಮಗಿದೆ. ಹೀಗಾಗಿ ಅವರಿಗೆ ನೆರವಾಗುವಂತಹ ಕೆಲಸ ಮಾಡಿ’ ಎಂದು ವಿನಂತಿ ಮಾಡಿದರು.

ದಸರಾಕ್ಕೆ ಆಹ್ವಾನ: ಈ ಬಾರಿಯ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಎಲ್ಲ ಅನಿವಾಸಿ ಕನ್ನಡಿ ಗರಿಗೂ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಮುಕ್ತ ಆಹ್ವಾನ ನೀಡಿದರು.
ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಎರಡನೇ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತಿದ್ದು, ಅದರಲ್ಲಿಯೂ ಭಾಗವಹಿಸುವಂತೆ ಅವರು ಕೋರಿದರು.



ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-30
|
|
|