ದುಬೈ: ಶಾಲಾ ಬಸ್ಸುಗಳ ಸುರಕ್ಷತೆಗಾಗಿ ಹೊಸ ನಿಯಮಾವಳಿ |
ಪ್ರಕಟಿಸಿದ ದಿನಾಂಕ : 2008-08-28
ಶಾಲಾಬಸ್ಸುಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಕ್ರಮಗಳು : ಆರ್.ಟಿ.ಎ. ಪ್ರಕಟಣೆ
ದುಬೈ, ಆಗಸ್ಟ್ 28: ನಗರದಲ್ಲಿ ಓಡಾಡುತ್ತಿರುವ ಎಲ್ಲಾ ಬಸ್ಸುಗಳು ಹೊಸ ರೂಪ ಪಡೆಯಲಿವೆ. ಆರ್.ಟಿ.ಎ. (ರೋಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಆಥಾರಿಟಿ)ಪ್ರಕಟಿಸಿರುವ ಸುರಕ್ಷಾ ನಿಯಮಾವಳಿಗಳ ಪ್ರಕಾರ ಸೂಚಿಸಿದ ಬದಲಾವಣೆಗಳನ್ನು ಮಾಡಿಕೊಳ್ಳುವುದು ಈಗ ಎಲ್ಲಾ ಶಾಲಾಬಸ್ಸುಗಳಿಗೆ ಅನಿವಾರ್ಯವಾಗಿದೆ ಎಂದು ಆರ್.ಟಿ.ಏ. ಇಲಾಖೆಯ ಸಾರ್ವಜನಿಕ ಸಾರಿಗೆ ವಿಭಾಗದ ನಿರ್ದೇಶಕರಾದ ಈಸಾ ಅಬ್ದುಲ್ ರಹ್ಮಾನ್ ಅಲ್ ದೋಸ್ಸಾರಿಯವರು ತಿಳಿಸಿದ್ದಾರೆ.
ಹೊಸ ನಿಯಮಾವಳಿಗಳ ಪ್ರಕಾರ ಎಲ್ಲಾ ಬಸ್ಸುಗಳು ಏಕಪ್ರಕಾರದ ಹೊರವಿನ್ಯಾಸ ಪಡೆಯಲಿದ್ದು ಆರು ತಿಂಗಳ ಅವಧಿಯಲ್ಲಿ ಈ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಆರ್.ಟಿ.ಎ. ಸೂಚಿಸಿರುವ ಬದಲಾವಣೆಗಳು ಈ ಕೆಳಗಿನಂತಿವೆ:
* ಶಾಲಾ ಬಸ್ಸುಗಳ ಸೇವೆಯನ್ನು ಒದಗಿಸುವ ಎಲ್ಲ ವಾಹನಗಳೂ ಏಕಪ್ರಕಾರವಾಗಿ ಹಳದಿ ಬಣ್ಣದಲ್ಲಿರಬೇಕು * ಎಲ್ಲ ಕಿಟಕಿಗಳು ಶೇಖಡ 50 ರಷ್ಟು ಮಬ್ಬಾಗಿರಬೇಕು ಅಥವಾ ತಡೆಗಳಿಂದ ಕೂಡಿರಬೇಕು * ಬಸ್ಸಿನೊಳಕ್ಕೆ ಮಡಚಬಹುದಾದ ಆಸನಗಳಿರಬಾರದು * ಬಸ್ಸಿನ ಸೀಟಿನ ಪಕ್ಕದಲ್ಲಿ ಅಥವಾ ಹಿಂಭಾಗದಲ್ಲಿ ಆಶ್ ಟ್ರೇ ಮೊದಲಾದ ಧೃಢ ವಸ್ತುಗಳಿರಬಾರದು * ಪ್ರತಿ ಬಸ್ಸಿನಲ್ಲಿ ಎಲೆಕ್ಟ್ರಾನಿಕ್ ಫ್ಲಾಶರ್ ಇರುವುದು ಅವಶ್ಯ. ಇದರಿಂದ ಬಸ್ ನಿಲ್ಲಿಸುವಾಗ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಇತರ ಚಾಲಕರ ಗಮನ ಸೆಳೆಯಲು ಸಾಧ್ಯವಾಗುತ್ತದೆ. * ಶಾಲಾ ಬಸ್ಸುಗಳ ಗರಿಷ್ಟ ವೇಗ ಘಂಟೆಗೆ ಎಂಭತ್ತು ಕಿ.ಮೀಗಳು. ಇದಕ್ಕಾಗಿ ವೇಗ ನಿಯಂತ್ರಕಗಳನ್ನು ಅಳವಡಿಸುವುದು ಕಡ್ಡಾಯ * 2008 ರ ಬಳಿಕ ನಿರ್ಮಾಣಗೊಂಡ ಬಸ್ಸುಗಳಲ್ಲಿ ಕನಿಷ್ಟ 71ಸೆಂ.ಮೀ. ಎತ್ತರದ ಒರಗು, ಅಗ್ನಿ ನಿರೋಧಕ ಮತ್ತು ಶಾಕ್ ಅಬ್ಸಾರ್ಬರ್ ಉಳ್ಳ ಆಸನಗಳು, ತುರ್ತು ನಿರ್ಗಮನ ಬಾಗಿಲು, ಎಲೆಕ್ಟ್ರಾನಿಕ್ ಹೊರ ಕನ್ನಡಿಗಳು, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಅಗ್ನಿ ಶಮನ ವ್ಯವಸ್ಥೆ ಹಾಗೂ ಎಲೆಕ್ಟ್ರಾನಿಕ್ ನಿಯಂತ್ರಿತ ಬಾಗಿಲುಗಳನ್ನು ಹೊಂದಿರಬೇಕು.
ಈ ಕುರಿತಾಗಿ ಹೊತ್ತಿಗೆಯೊಂದನ್ನು ಪ್ರಕಟಿಸಲಾಗಿದ್ದು ಶಾಲಾ ಬಸ್ ಸೇವೆ ಒದಗಿಸುವ ಎಲ್ಲಾ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗಿದೆ. ಶಾಲಾ ಆಡಳಿತ ಮಂಡಲಿ, ಶಾಲಾ ಬಸ್ ನಿರ್ವಾಹಕರು, ಚಾಲಕರು ಹಾಗೂ ಪಾಲಕರಿಗೆ ಈ ಹೊತ್ತಿಗೆ ಲಭ್ಯವಿದೆ. ಶಾಲಾ ಬಸ್ಸುಗಳು ಪಾಲಿಸಬೇಕಾದ ಕಾನೂನುಗಳು ಮತ್ತು ಉಲ್ಲಂಘನೆಗಳ ದಂಡವನ್ನೂ ವಿವರವಾಗಿ ಈ ಹೊತ್ತಿಗೆಯಲ್ಲಿ ನೀಡಲಾಗಿದೆ.
ಅಷ್ಟೇ ಅಲ್ಲದೇ ಅಲ್ ಅವೀರ್ ನಲ್ಲಿರುವ ಆರ್.ಟಿ.ಎ. ಕಟ್ಟಡದಲ್ಲಿ ಎಲ್ಲಾ ಶಾಲಾ ಬಸ್ ಚಾಲಕರಿಗೆ ಎರೆಡು ದಿನಗಳ ಸುರಕ್ಷಾ ಪಾಠಗಳ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದ್ದು ಕಡೆಯಲ್ಲಿ ಲಿಖಿತ ಪರೀಕ್ಷೆಯನ್ನೂ ಚಾಲಕರು ತೇರ್ಗಡೆಯಾಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಚಾಲಕರಿಗೆ ಮಾತ್ರ ಶಾಲಾ ಬಸ್ಸುಗಳನ್ನು ಓಡಿಸುವ ಪರವಾನಿಗೆ ನೀಡಲಾಗುತ್ತದೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-28
|
|
|