ನೀರಿನ ಹೆಸರಿನಲ್ಲಿ ಕಣ್ಣೀರು..... |
ಪ್ರಕಟಿಸಿದ ದಿನಾಂಕ : 2008-08-13
ಈ ನೀರು, ರಸ್ತೆ, ವಿದ್ಯುತ್ ಮೊದಲಾವುಗಳು ಜನಸಾಮಾನ್ಯರಿಗಾಗಿ ಇರುವುದಲ್ಲ ಎನ್ನುವುದು ಮಂಗಳೂರಿನಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ನೀರಿನ ಖಾಸಗೀಕರಣ ಮತ್ತು ದರ ಏರಿಕೆಯನ್ನು ವಿರೋದಿಸಿ ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ಪ್ರತಿಭಟಿಸಿದವರನ್ನು ಯದ್ವಾತದ್ವಾ ಥಳಿಸಿದುದೇ ಅಲ್ಲದೆ, ಈ ದಬ್ಬಾಳಿಕೆಯನ್ನು ಅಷ್ಟೇ ಆತ್ಮವಿಶ್ವಾಸದಿಂದ ಸಮರ್ಥಿಸಿಕೊಂಡಿದ್ದಾರೆ ಬಿಜೆಪಿ ನಾಯಕರು. ಜನರ ಮೇಲೆ ದೌರ್ಜನ್ಯ ಎಸಗಿದ ಅಕಾರಿಗಳ ವಿರುದ್ಧ ಯಾವ ಕ್ರಮವೂ ತೆಗೆದುಕೊಂಡಿಲ್ಲ.
ಪೊಲೀಸ್ ಅಕಾರಿಗಳಿಗೆ ಬಹುಮಾನ ಘೋಷಿಸಿಲ್ಲ’ ಎನ್ನುವುದೊಂದೇ ಸಮಾಧಾನಕರ ಸಂಗತಿ. ಮಂಗಳೂರು ಎಂದಲ್ಲ, ಇಡೀ ರಾಜ್ಯದ ರಸ್ತೆಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕು; ಈ ರಸ್ತೆಗಳು ಯಾರವು?, ಯಾರಿಗಾಗಿ ಇರುವಂಥವು? ಎಂಬ ಪ್ರಶ್ನೆ ಕಾಡದೇ ಇರುವುದಿಲ್ಲ. ಅದಿರು ಲಾರಿಗಳ ಹೆಣ ಭಾರವನ್ನು ಹೊರಲು ಸಾಧ್ಯವಾಗದೆ ಛಿದ್ರವಾಗಿ ಬಿದ್ದಿರುವ ರಸ್ತೆಗಳು, ಜನಸಾಮಾನ್ಯರ ಪಾಲಿಗೆ ಬಳಸಿ ಎಸೆದ ಎಂಜಲು ಊಟ ಮಾತ್ರ. ಮಂಗಳೂರಿನಂತಹ ನಗರದಲ್ಲಿ ರಸ್ತೆಗಳ ದುಸ್ಥಿತಿಯಿಂದ ಜನರು ಅನುಭವಿಸುವ ದೈನಂದಿನ ಸಂಕಟ, ವಿವರಣೆಗೆ ನಿಲುಕಂದಥದು. ಇದೀಗ ರಸ್ತೆಯ ಬೆನ್ನಿಗೇ ನೀರು ಕೂಡ ಮಂಗಳೂರಿನ ಜನರಿಗೆ ತುಟ್ಟಿಯಾಗತೊಡಗಿದೆ.
ನೇತ್ರಾವತಿ ನದೀ ಪಾತ್ರದಲ್ಲೇ ಮಂಗಳೂರು ಹರಡಿದ್ದರೂ, ನೀರಿಗಾಗಿ ಈ ನಗರದ ಜನಸಾಮಾನ್ಯರು ಲಾಠಿ ಏಟುಗಳನ್ನು ತಿನ್ನಬೇಕಾಗಿದೆ. ಇದು ಭವಿಷ್ಯದಲ್ಲಿ ಈ ನಾಡು ಏನೇನು ಅನುಭವಿಸಬೇಕಾಗಿದೆ ಎನ್ನುವುದಕ್ಕೆ ಒಂದು ಸ್ಯಾಂಪಲ್ ಆಗಿದೆ. ಇಲ್ಲಿ ಕುಡಿಯುವುದಕ್ಕೆ ಬಳಸುವ ನೀರಿಗಾಗಿ ಜನರು ಲಾಠಿ ಏಟನ್ನು ತಿನ್ನಬೇಕಾಗುತ್ತದೆ.
ಹಾಗೆಂದು ನೀರಿನ ಕೊರತೆಯಿದೆಯೆಂದು ಘೋಷಿಸುವುದಕ್ಕಾಗುವುದಿಲ್ಲ. ಯಾಕೆಂದರೆ, ಇಲ್ಲಿರುವ ಎಂಆರ್‌ಪಿಎಲ್, ಯುಬಿ, ಎಂಸಿಎಫ್ ಇದ್ಯಾವುದೂ ನೀರಿಗಾಗಿ ಒದ್ದಾಡಿದ ಉದಾಹರಣೆಗಳಿಲ್ಲ.
ಜನಸಾಮಾನ್ಯರು ಯಾಕೆ ದೈನಂದಿನ ಬಳಕೆಯ ವಿದ್ಯುತ್‌ಗಾಗಿ ಒದ್ದಾಡಬೇಕಾಗಿದೆ, ಕುಡಿಯುವ ನೀರಿಗಾಗಿ ಭಾರೀ ಬೆಲೆಯನ್ನು ತೆರಬೇಕಾಗಿದೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.
ಜನಸಾಮಾನ್ಯರ ಮೂಲಭೂತ ಅವಶ್ಯಕತೆಗಳು ಮುಗಿದ ಬಳಿಕವೇ ನೀರನ್ನು ಇತರ ಉದ್ಯಮಗಳಿಗೆ ಬಳಸಲು ಅವಕಾಶ ನೀಡಬಹುದೆಂಬ ಜಲನೀತಿಯೇ ಇದ್ದರೂ, ಇಂದು ಉದ್ಯಮಗಳು ಬಳಸಿ ಉಳಿದ ನೀರನ್ನು ಆಡಳಿತವು ಜನಸಾಮಾನ್ಯರ ಬಳಕೆಗೆ ನೀಡುತ್ತಿದೆ. ಇದು ಬರೇ ಮಂಗಳೂರಿನಂತಹ ನಗರಗಳಿಗೆ ಸೀಮಿತವಾಗಿಲ್ಲ. ಇಡೀ ದೇಶದ ’ಕ-ಣ್ಣೀರಿನ ಕತೆ ಇದು.
ಒಂದು ಸಣ್ಣ ಉದಾಹರಣೆಯನ್ನು ನೀಡುವುದಾದರೆ, ಗಣಿಗಾರಿಕೆಗಾಗಿ ಈ ದೇಶದಲ್ಲಿ 77 ದಶಲಕ್ಷ ಲೀಟರ್ ನೀರನ್ನು ಬಳಸಲಾಗುತ್ತಿದೆ. ಇದೇ ಹೊತ್ತಿನಲ್ಲಿ ಕುಡಿಯುವ ನೀರಿಗೂ ತತ್ತ್ವಾರವಿರುವ ಲಕ್ಷಾಂತರ ಜನರು, ಕೊಳಕು ನೀರನ್ನು ಬಳಸುತ್ತಾ ಸಾವಿನಂಚಿನಲ್ಲಿ ನಿಂತಿದ್ದಾರೆ.
ಜನರು ಮೂಲಭೂತ ಅವಶ್ಯಕತೆಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆಗೆ ಇಳಿದಾಗ ಅದನ್ನು ಗೌರವಿಸುವುದು ಸರಕಾರದ ಕರ್ತವ್ಯವಾಗಿರುತ್ತದೆ. ಒಂದು ರಾಜಕೀಯ ಸಂಘಟನೆಯೇ ಆಗಿರಲಿ, ಅದು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಿದಾಗ ಅದನ್ನು ಹಿಂಸೆಯ ಮೂಲಕ ಮಣಿಸಲು ಹೊರಡುವುದು ಪ್ರಜಾಸತ್ತೆಗೆ ಮಾಡುವ ಅವಮಾನವಾಗುತ್ತದೆ.
ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರ ವಿರುದ್ಧ ಸರಕಾರ ಏನನ್ನು ಮಾಡಿತೋ, ಮಂಗಳೂರಿನಲ್ಲಿ ನೀರು ಕೇಳಿದ ಜನಸಾಮಾನ್ಯರ ಮೇಲೂ ಅದನ್ನೇ ಮಾಡಿತು. ಒಂದು ವೇಳೆ ಅಮಾನವೀಯ ಲಾಠಿ ಚಾರ್ಜ್‌ನಲ್ಲಿ ಪೊಲೀಸರ ವೈಫಲ್ಯವಿದೆ ಎಂದಾದರೆ, ಆ ವೈಫಲ್ಯವನ್ನು ಒಪ್ಪಿಕೊಂಡು ಅಕಾರಿಗಳನ್ನು ಅಮಾನತುಗೊಳಿಸುವುದು ಸರಕಾರದ ಕರ್ತವ್ಯವಾಗಿತ್ತು. ಆದರೆ ಈವರೆಗೆ ಯಾವನೇ ಅಕಾರಿಯನ್ನು ಅಮಾನತುಗೊಳಿಸಿಲ್ಲ. ಬದಲಿಗೆ ಪೊಲೀಸರ ಕೃತ್ಯವನ್ನು ಸ್ಥಳೀಯ ಜನಪ್ರತಿನಿಗಳು ಸಮರ್ಥಿಸಿಕೊಂಡಿದ್ದಾರೆ.
ಒಂದನ್ನು ಸರಕಾರ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರಜಾಸತ್ತಾತ್ಮಕವಾಗಿ, ಅಹಿಂಸೆಯ ಮೂಲಕ ನಡೆಸಿದ ಪ್ರತಿಭಟನೆಗೆ ಸರಕಾರ ಕಿವುಡಾದಾಗ ಅದು ಅಸಾಂವಿಧಾನಿಕ ಪ್ರತಿಭಟನೆಗೆ ದಾರಿಯನ್ನು ತೆರೆದುಕೊಡುತ್ತದೆ. ಪ್ರಜಾಸತ್ತಾತ್ಮಕ ಪ್ರತಿಭಟನೆ ಸೋತಷ್ಟೂ, ಅದು ಹಿಂಸಾತ್ಮಕ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತದೆ. ನರ್ಮದಾ ಬಚಾವೋ’ ಆಂದೋಲನವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಹಲವು ದಶಕಗಳಿಂದ ಸರಕಾರದ ಜನವಿರೋ ಯೋಜನೆಯ ವಿರುದ್ಧ ಮೇಧಾ ಪಾಟ್ಕರ್ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ. ಆದರೆ ಸರಕಾರವಾಗಲಿ, ನ್ಯಾಯಾಲಯ ವಾಗಲಿ ಅವರ ಹೋರಾಟವನ್ನು ಗಂಭೀರವಾಗಿ ತೆಗೆದುಕೊಂಡು ನ್ಯಾಯವನ್ನು ಕೊಡಲು ಈವರೆಗೆ ಮುಂದಾಗಿಲ್ಲ.
ಇದೇ ಸಂದರ್ಭದಲ್ಲಿ ಕೊಲ್ಕತಾ ಸೇರಿದಂತೆ ಈಶಾನ್ಯ ಭಾಗದಲ್ಲಿ ನಕ್ಸಲೀಯ ಚಳವಳಿಗೆ ಹೆದರಿದ ಸರಕಾರ ತಕ್ಷಣವೇ ವಿವಿಧ ಪ್ಯಾಕೇಜುಗಳನ್ನು ಘೋಷಿಸಿದೆ. ನಂದಿಗ್ರಾಮದಿಂದ ಹಿಂದೆ ಸುರಿಯುವ ಕುರಿತಂತೆ ಸರಕಾರ ತಾಳಿಕೊಂಡು ಬಂದ ದಿವ್ಯ ನಿರ್ಲಕ್ಷ್ಯವೇ ಈ ದೇಶದಲ್ಲಿ ನಕ್ಸಲ್ ಚಳವಳಿಯನ್ನು ಬೆಳೆಸಿತು.
ಮಂಗಳೂರಿನಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ನೀರಿನ ದರದ ವಿರುದ್ಧ ಪ್ರತಿಭಟನೆ ನಡೆಸಿದ ಜನಸಾಮಾನ್ಯರ ವಿರುದ್ಧ ಲಾಠಿಯನ್ನು ಪ್ರಯೋಗಿಸಿದ ಸರಕಾರ, ಬೆಳ್ತಂಗಡಿ, ಚಿಕಮಗಳೂರಿನಂತಹ ಪ್ರದೇಶಗಳಲ್ಲಿ ಪ್ಯಾಕೇಜ್’ಗಳನ್ನು ಘೋಷಿಸುತ್ತದೆ. ಈ ಮೂಲಕ ಸರಕಾರವೇ ನಕ್ಸಲರ ಹಿಂಸಾತ್ಮಕ ಚಳವಳಿಯನ್ನು ಗೌರವಿಸಿದಂತಾಗುವುದಿಲ್ಲವೇ?
ಆದುದರಿಂದ ಮಂಗಳೂರಿನಲ್ಲಿ ಪ್ರತಿಭಟನಾ ನಿರತ ಕಾರ್ಯಕರ್ತರ ಮೇಲೆ ಅಮಾನ ವೀಯವಾಗಿ ದಾಳಿ ನಡೆಸಿದ ಪೊಲೀಸರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಬೇಕು.
ಅಷ್ಟೇ ಅಲ್ಲ, ಘಟನೆಗಾಗಿ ಮನಪಾ ಮೇಯರ್ ಜನರ ಕ್ಷಮೆ ಯಾಚಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ನೀರಿನ ಸಮಸ್ಯೆಯ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕು.
ಮಳೆಗಾಲದಲ್ಲಿ, ನೇತ್ರಾವತಿ ನದಿ ತುಂಬಿ ಹರಿಯುವ ಹೊತ್ತಿನಲ್ಲಿ ನೀರಿಗಾಗಿ ಆಗ್ರಹಿಸಿ ಜನತೆ ಲಾಠಿ ಏಟು ತಿನ್ನುವುದು ಮಂಗಳೂರು ಮಹಾನಗರ ಪಾಲಿಕೆಗೆ ಮಾತ್ರವಲ್ಲ, ಕರ್ನಾಟಕಕ್ಕೇ ಶೋಭೆಯಲ್ಲ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-13
|
|
|