ಕಾಸರಗೋಡು ಚಿನ್ನಾ ಅವರೊಂದಿಗೆ ಗಲ್ಫ್ ಕನ್ನಡಿಗ ವಿಶೇಷ ಸಂದರ್ಶನ |
ಪ್ರಕಟಿಸಿದ ದಿನಾಂಕ : 2007-12-21
ಕಾಸರಗೋಡು ಚಿನ್ನಾ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು: ಸಂದರ್ಶನಾಕಾರರು: ಅರ್ಶದ್ ಹುಸೇನ್ ಎಂ.ಹೆಚ್.
ಇಂದು ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿರುವ ಶಾರ್ಜಾ ಕನ್ನಡ ಸಂಘದ ಐದನೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಶ್ರೀ ಕಾಸರಗೋಡು ಚಿನ್ನಾ (ಶ್ರೀನಿವಾಸ ರಾವ್ ಎಸ್) ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು
ಗಲ್ಫ್ ಕನ್ನಡಿಗ: ನಮಸ್ಕಾರ. ಯು.ಎ.ಇ.ಗೆ ತಮಗೆ ಸ್ವಾಗತ. ರಂಗಭೂಮಿಯಲ್ಲಿ ಅಪಾರ ಅನುಭವವನ್ನು ಹೊಂದಿರುವ ತಾವು ತಮ್ಮ ಪಯಣವನ್ನು ಎಲ್ಲಿಂದ ಶುರುಮಾಡಿದಿರಿ
ಕಾ.ಚಿನ್ನಾ: ನಾನು ೧೯೭೧ರಲ್ಲಿ ತಾಳಿ ಕಟ್ಟೋಕ್ ತಯ್ಯಾರ್ ಎಂಬ ನಾಟಕದ ಮೂಲಕ ರಂಗಭೂಮಿಗೆ ಪ್ರವೇಶಿಸಿದವನು. ಕಾಸರಗೋಡಿನಂತಹ ಗಡಿಪ್ರದೇಶದಲ್ಲಿ ನನ್ನ ಬಾಲ್ಯ ಕಳೆದುದರಿಂದ ಐದು ದ್ರಾವಿಡ ಭಾಷೆಗಳಲ್ಲಿ ರಂಗಭೂಮಿಯ ಸೇವೆ ಸಲ್ಲಿಸುವ ಅವಕಾಶ ನನ್ನದಾಯಿತು. ಶಾಲಾದಿನಗಳಲ್ಲಿ ನಾಟಕ ಪ್ರಾರಂಬಿಸಿ ತದನಂತರ ಮಿತ್ರಕಲಾವೃಂದ ಎಂಬ ಹವ್ಯಾಸಿ ನಾಟಕ ಮಂಡಲಿ ನಡೆಸಿ ನಾಟಕ ಆಡುತ್ತಿದ್ದೆವೆ. ನಂತರದ ದಿನಗಳಲ್ಲಿ ನನ್ನ ಗುರುಗಳಾದ ಪ್ರೊ. ವೇಣುಗೋಪಾಲ್ ಕಾಸರಗೋಡು ಅವರ ಜೊತೆಗೂಡಿ ಯವನಿಕಾ ಎಂಬ ಮಂಡಲಿಯನ್ನು ಸ್ಥಾಪಿಸಿ ನಾಟಕಗಳನ್ನು ಆಡುತ್ತಿದ್ದೆವು. ಬಳಿಕ ಅಪೂರ್ವ ಕಲಾವಿದರು, ಈಗ ರಂಗಚಿನ್ನಾರಿ ಎನ್ನುವಂತಹ ಮಂಡಲಿಗಳನ್ನು ರಚಿಸಿ ನಾಟಕಗಳನ್ನು ಆಡುತ್ತಿದ್ದೇವೆ.
ಗಲ್ಫ್ ಕನ್ನಡಿಗ: ಒಂದು ವೇಳೆ ಕಲಾವಿದರಾಗದೇ ಇದ್ದ ಪಕ್ಷದಲ್ಲಿ ಏನಾಗುತ್ತಿದ್ದಿರಿ
ಕಾ.ಚಿನ್ನಾ: ನಮ್ಮ ಹಿರಿಯರಲ್ಲಿ ಯಾರೂ ರಂಗಭೂಮಿಯ ಹಿನ್ನೆಲೆಯಿಂದ ಬಂದವರಲ್ಲ. ಕಾಸರಗೋಡಿನ ಪ್ರತಿಷ್ಠಿತ ಸ್ಟೀಲ್ ಅಂಗಡಿ ನಮ್ಮದು. ರಂಗಭೂಮಿಯಲ್ಲಿ ಸಾಕಷ್ಟು ಅನುಭವವಿದ್ದರೂ ಇಂದಿಗೂ ನನ್ನ ಮೂಲ ಕಸುಬು ವ್ಯಾಪಾರ. ನಾನು ಆದರ್ಶ ಇನ್ಸಿಟಿಟ್ಯೂಟಿಗೆ ಸೇರುವ ಮುನ್ನ ಹಲವು ಕನ್ನಡ ಚಳುವಳಿಯಲ್ಲಿ ಭಾಗವಹಿಸಿದ್ದೆ. ೧೯೫೬ರಲ್ಲಿ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿದಾಗ ಅದರ ವಿರುದ್ಧ ಹೋರಾಡಿದವರ ಜೊತೆಗೂಡಿ ಅಂದಿನಿಂದಲೂ ಕನ್ನಡಕ್ಕೆ ನನ್ನ ಸೇವೆ ಸಲ್ಲಿಸುತ್ತಿದ್ದೇನೆ. ಭಹುಶಃ ಕನ್ನಡದ ಮೇಲಿರುವ ಈ ಅಭಿಮಾನವೇ ನನ್ನನ್ನು ರಂಗಭೂಮಿಗೆ ಎಳೆದಿರಬಹುದು. ಕಾಸರಗೋಡು ಭೌಗೋಳಿಕವಾಗಿ ಕೇರಳಕ್ಕೆ ಸೇರಿದ್ದರೂ ಸಾಂಸ್ಕೃತಿಕವಾಗಿ ಕರ್ನಾಟಕಕ್ಕೇ ಸೇರಿದೆ ಎಂದು ಬಲವಾಗಿ ನಂಬಿರುವವನು ನಾನು. ಎಸ್ಸೆಲ್ಸಿವರೆಗೂ ನಾನು ಓದಿದ್ದು ಕನ್ನಡದಲ್ಲಿಯೇ. ಬಳಿಕ ಬಿ.ಎ. ಮಾಡಿದ್ದೂ ಕನ್ನಡದಲ್ಲಿಯೇ. ರಂಗಭೂಮಿ ಈಗಲೂ ನನ್ನ ಹವ್ಯಾಸ.
ಗಲ್ಫ್ ಕನ್ನಡಿಗ: ಇಂದಿನ ದಿನಗಳಲ್ಲಿ ನಮ್ಮ ಯುವಜನಾಂಗ ಚಿತ್ರರಂಗವನ್ನೇ ತಮ್ಮ ವೃತ್ತಿಯನ್ನಾಗಿ ಆಯ್ದುಕೊಳ್ಳುವುದಾದರೆ ತಮ್ಮ ಸಲಹೆಗಳೇನು.
ಕಾ.ಚಿನ್ನಾ: ಇದೊಂದು ಉತ್ತಮ ಪ್ರಶ್ನೆ. ನಾವು ಕಲಾರಂಗಕ್ಕೆ ಕಾಲಿಟ್ಟಾಗ ಕಾಸರಗೋಡಿನಲ್ಲಿ ಯಾವುದೇ ರೀತಿಯ ಪ್ರೋತ್ಸಾಹವಾಗಲೀ ಅನುಕೂಲತೆಗಳಾಗಲೀ ಇರಲಿಲ್ಲ. ಕಾಸರಗೋಡಿನಿಂದ ಬೆಂಗಳೂರಿಗೆ ಹೋಗಿ ತರಬೇತಿ ಪಡೆಯಬೇಕಿತ್ತು. ಇಂದಿನ ದಿನಗಳಲ್ಲಿ ಹಲವಾರು ತರಬೇತಿ ಸಂಸ್ಥೆಗಳು ತರಬೇತಿ ನೀಡುತ್ತಿವೆ. ಅಂದು ಪ್ರೊ.ವೇಣುಗೋಪಾಲರವರು ಆಹುತಿ ಎಂಬ ನಾಟಕದ ಮುಖ್ಯ ಪಾತ್ರವನ್ನು ನಾನೇ ನಿಭಾಯಿಸಬೇಕೆಂದು ಕೇಳಿಕೊಂಡಿದ್ದರು. ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಈ ನಾಟಕವು ಕಾಸರಗೋಡಿನಲ್ಲಿ ನಡೆದ ಕಥೆಯ ಮೇಲೆ ಆಧಾರಿತವಾದ್ದರಿಂದ ನಾನೇ ಈ ಪಾತ್ರಕ್ಕೆ ಲಾಯಕ್ಕೆಂದು ಪ್ರೊ.ವೇಣುಗೋಪಾಲ್ ನಿರ್ಧರಿಸಿದ್ದರು. ಹಾಗಾಗಿ ಬೆಂಗಳೂರಿಗೆ ಹೋಗಿ ತರಬೇತಿ ಪಡೆಯಬೇಕಾಗಿ ಬಂತು. ಬೇಸರದ ವಿಷಯವೆಂದರೆ ಆ ನಾಟಕ ಸಿನೆಮಾ ಆಗಲಿಲ್ಲ. ಆಗೆಲ್ಲಾ ಬಹಳ ಕಷ್ಟ ಇತ್ತು. ಫಣಿಯಮ್ಮ ಚಿತ್ರದಲ್ಲಿ ನಟಿಸಿ ಚಿತ್ರ ಯಶಸ್ವಿಯಾದರೂ ವೇತನ ಸರಿಯಾಗಿ ಸಿಗುತ್ತಿರಲಿಲ್ಲ. ತಿಂಗಳಾನುಗಟ್ಟಲೆ ಕಾಯಿಸುತ್ತಿದ್ದರು. ಇಂದು ಪರಿಸ್ಥಿತಿ ಹಾಗಿಲ್ಲ. ಸಿನೇಮಾ ಮಾಡುವುದು ಸಾಮಾನ್ಯ ವಿಷಯವಾಗಿಬಿಟ್ಟಿದೆ. ಇಂದು ಅವಕಾಶ ಮನೆಬಾಗಿಲಿಗೆ ಬರುತ್ತಿದೆ. ಟೀವಿ ಮಾಧ್ಯಮ ಲಗ್ಗೆಯಿಟ್ಟು ಹಲವಾರು ಅವಕಾಶಗಳನ್ನು ಒದಗಿಸಿಕೊಟ್ಟಿದೆ. ವೇತನಗಳು ಸಮರ್ಪಕವಾಗಿ ನೀಡಲ್ಪಡುತ್ತಿವೆ. ಸಾಧಾರಣ ನಟರೂ ತಿಂಗಳಿಗೆ ೪೦,೦೦೦ ರೂ ಗಳಿಸಬಹುದಾಗಿದೆ. ಹೆಚ್ಚಿನ ತರಬೇತಿ ಬೇಕಿದ್ದರೆ ಅನತಿದೂರದಲ್ಲಿ ಲಭ್ಯವಿದೆ. ಹಾಗಾಗಿ ಯುವಜನಾಂಗ ಈ ವೃತ್ತಿಯನ್ನು ಅವಲಂಬಿಸುವುದಾದರೆ ನಾವು ಕಷ್ಟಪಟ್ಟಷ್ಟು ಕಷ್ಟ ಖಂಡಿತ ಪಡಬೇಕಾಗಿಲ್ಲ. ಆದರೆ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಶ್ರದ್ಧೆ ಮಾತ್ರ ಬಹಳ ಮುಖ್ಯ. ಇವಿಲ್ಲದಿದ್ದರೆ ಎಷ್ಟೇ ಸೌಲಭ್ಯಗಳಿದ್ದರೂ ಮುಂದೆ ಬರುವ ಅವಕಾಶ ಗಳು ಕಡಿಮೆ.
ಗಲ್ಫ್ ಕನ್ನಡಿಗ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂಬ ನಡೆಯುತ್ತಿರುವ ಚಳುವಳಿಯ ಬಗ್ಗೆ ತಮ್ಮ ಅಭಿಪ್ರಾಯ.
ಕಾ.ಚಿನ್ನಾ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲೇಬೇಕು, ನಮ್ಮ ಹಕ್ಕು ಅದು. ಕನ್ನಡದ ಚಳುವಳಿಗಳಲ್ಲಿ ನಮ್ಮ ನಾಯಕರಿಗೆ ಕನ್ನಡದ ನೆನಪು ಬರುವುದು ನವೆಂಬರ್ ೧ರಂದು ಮಾತ್ರ. ನವೆಂಬರ್ ೨ರಂದೂ ಇಲ್ಲ, ಅಕ್ಟೋಬರ್ ೩೧ರಂದೂ ಇಲ್ಲ. ಅದೇ ಮಲಯಾಳಂ ಆಗಲಿ ತಮಿಳು ಆಗಲಿ ಅವರಿಗೆ ಭಾಷೆಯೆಂದರೆ ಅದೊಂದು ಪ್ರತಿಷ್ಠೆಯ ವಿಷಯ. ಇಂದು ಹಲವಾರು ಕನ್ನಡ ಚಳುವಳಿಗಳು ನಡೆಯುತ್ತಿರುವುದು ನನಗೆ ಅತೀವ ಸಮಾಧಾನದ ವಿಷಯ. ಈ ಚಳುವಳಿಗಳು ಇನ್ನಷ್ಟು ಬೆಳೆಯಬೇಕು, ಪ್ರತಿ ಕನ್ನಡಿಗರೂ ಕನ್ನಡಕ್ಕೆ ಯಾವುದಾದರೂ ಅವಮಾನವಾದರೆ ಅಥವಾ ಸಿಗಬೇಕಾದ ಮನ್ನಣೆ ಸಿಗದೇ ಹೋದಾಗ ದನಿ ಎತ್ತಿ ತಿರುಗಿ ನಿಲ್ಲಬೇಕು. ಕಾಸರಗೋಡು ಕೇರಳಕ್ಕೆ ಸೇರಿದ್ದರೂ ನಾವು ಕನ್ನಡವನ್ನು ಮರೆತಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವುದು ಕನ್ನಡಿಗರಿಗೆ ಸ್ವಾಭಿಮಾನದ ಪ್ರಶ್ನೆ. ನಮ್ಮ ರಾಜಕಾರಣಿಗಳು ಇದಕ್ಕೆ ಇನ್ನಷ್ಟು ಒತ್ತಾಯ ತರಬೇಕು. ಗಡಿಪ್ರದೇಶಗಳಲ್ಲಿ ಕನ್ನಡಕ್ಕೆ ನಮ್ಮ ರಾಜಕಾರಣಿಗಳು ಏನು ಮಾಡಿದ್ದಾರೆ? ಇಲ್ಲ, ಯಾವುದೇ ಗಡಿಪ್ರದೇಶದಲ್ಲಿ ಕನ್ನಡಕ್ಕೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ.
ಗಲ್ಫ್ ಕನ್ನಡಿಗ: ಹೊರದೇಶಗಳಲ್ಲಿ ಇತರ ರಾಜ್ಯಗಳು ತಮ್ಮ ಭಾಷೆಗಳಿಗೆ ನೀಡುವ ಪ್ರಾಧಾನ್ಯತೆ ಹಾಗೂ ಮನ್ನಣೆ ಕನ್ನಡಿಗರು ನೀಡುತ್ತಿಲ್ಲ ಎಂಬ ಭಾವನೆಯಿದೆ. ಇದರ ಬಗ್ಗೆ ತಾವು ಏನು ಹೇಳುತ್ತೀರಿ
ಕಾ.ಚಿನ್ನಾ: ನಾನು ಹಲವಾರು ಹೊರದೇಶಗಳಿಗೆ ಭೇಟಿ ನೀಡಿದ್ದೇನೆ. ಸಂಘಟನೆಗೆ ಇನ್ನೊಂದು ಹೆಸರು ಕೇರಳ. ತಮ್ಮ ಜನರಿಗೆ ಅವರು ನೀಡುವ ಸಹಕಾರ ಜಗತ್ತಿನಲ್ಲಿಯೇ ಇನ್ನೊಂದು ಜನಾಂಗ ಇರಲಿಕ್ಕಿಲ್ಲ. ಉದಾಹರಣೆಗೆ ಒಂದು ಅಂಗಡಿಯಲ್ಲಿ ಒಂದು ಬಾಳೆಹಣ್ಣಿಗೆ ಎರೆಡು ರೂಪಾಯಿ ಇದ್ದು ಮೂರು ಬಾಳೆಹಣ್ಣಿಗೆ ಐದು ರೂಪಾಯಿ ಇದ್ದರೆ ಕನ್ನಡಿಗರು ಮೂವರು ಬಂದರೂ ಒಬ್ಬಬ್ಬರೇ ಎರೆಡು ರೂಪಾಯಿಗೊಂದರಂತೆ ಮೂರು ಬಾಳೆಹಣ್ಣು ಕೊಳ್ಳುತ್ತಾರೆ. ಅದೇ ಕೇರಳದವರಾದರೆ ಮೊದಲು ಇನ್ನಿಬ್ಬರನ್ನು ಹುಡುಕಿ ಐದು ರೂಪಾಯಿಗೆ ಮೂರು ಬಾಳೆಹಣ್ಣು ಖರೀದಿಸಿ ಹಂಚಿಕೊಳ್ಳುತ್ತಾರೆ. ಈ ಸಂಘಟನೆ ಅವರಲ್ಲಿ ಹಾಸುಹೊಕ್ಕಾಗಿದೆ. ಅವರಿಗಿರುವ ಭಾಷೆಯ ಮೇಲಿರುವ ಅಭಿಮಾನ ಇನ್ನೊಬ್ಬರಿಗಿಲ್ಲ. ಅದೇ ಕನ್ನಡದವರಿಗೆ ಅಭಿಮಾನ ಇಲ್ಲವೆಂದಲ್ಲ. ಆದರೆ ನಾವು ಸ್ವಲ್ಪ ಆಲಸಿಗಳಷ್ಟೇ. ಅದೇ ಈಗ ಶಾರ್ಜಾ ಕನ್ನಡ ಸಂಘ ಐದನೆಯ ವಾರ್ಷಿಕೋತ್ಸವ ಆಚರಿಸುತ್ತಿದೆಯೆಲ್ಲಾ, ಬರುವವರು ಬರುತ್ತಿದ್ದಾರಲ್ಲಾ. ಅಭಿಮಾನವೆನ್ನುವುದು ನಮ್ಮ ಒಳಗಿನಿಂದ ಬರಬೇಕೆ ಹೊರತು ಬಲವಂತವಾಗಿ ಅಲ್ಲ. ನಾನು ದೊಡ್ಡವನೇ, ನೀನು ದೊಡ್ಡವನೇ ಎಂಬ ಅಹಂ ಬದಿಗಿಟ್ಟು ನಾವು ಎನ್ನುವ ಮನೋಭಾವನೆಯಿಂದ ಕೆಲಸ ಮಾಡಿದರೆ ಖಂಡಿತಾ ಸಂಘಟನೆ ಗೆಲ್ಲುತ್ತದೆ. ಇನ್ನೊಂದು ವಿಷಯವೆಂದರೆ ಹಿರಿಯರು ಸಮಯ ಸರಿದಂತೆ ಕಿರಿಯರಿಗೆ ಮುಂಬರುವ ಅವಕಾಶ ಮಾಡಿಕೊಡಬೇಕು. ಅಧ್ಯಕ್ಷ ಎಂದರೆ ವರ್ಷಾನುಗಟ್ಟಲೇ ಅಧ್ಯಕ್ಷರಾಗಿರುವುದಲ್ಲ. ಮುಂದೆ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಬೇಕು.
ಗಲ್ಫ್ ಕನ್ನಡಿಗ: ಕನ್ನಡವನ್ನೇ ನೆಚ್ಚಿಕೊಂಡರೆ ಹಣ ಮಾಡಲಿಕ್ಕಾಗುವುದಿಲ್ಲ ಎಂಬ ಭಾವನೆ ಇಂದಿನ ಯುವಜನಾಂಗದಲ್ಲಿದೆ. ತಮ್ಮ ಅಭಿಪ್ರಾಯ
ಕಾ.ಚಿನ್ನಾ: ಇದು ತಪ್ಪು ಅಭಿಪ್ರಾಯ. ಕಟ್ಟಿಗೆಗೆ ಕ್ರಯ ಕಡಿಮೆ ಎಂದು ಯಾರೂ ಆತ್ಮಹತ್ಯೆ ಮಾಡುವುದಿಲ್ಲ. ಕಾಸರಗೋಡಿನಲ್ಲಿರುವ ವೈದ್ಯರಲ್ಲಿ ಹೆಚ್ಚಿನವರು ಕನ್ನಡದವರು. ಕನ್ನಡ ನಮ್ಮ ತಾಯಿ. ಈಗ ಅರ್ಥವಾಯಿತೇ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಏಕಾಗಿ ಬೇಕೆಂದು. ಕನ್ನಡ ನಮ್ಮ ಮಾತೃಭಾಷೆ. ಇದಕ್ಕೆ ತಾಯಿಯ ಸ್ಥಾನ. ಹಣ ಎಷ್ಟೇ ಮಾಡಲಿ ತಾಯಿ ತಾಯಿಯೇ. ಬೇರೆ ಭಾಷೆಯಿಂದ ಹೆಚ್ಚು ಹಣ ಮಾಡಲಿಕ್ಕೆ ಸಾಧ್ಯವಿದೆ ಎಂದು ತಾಯಿಯನ್ನು ಮರೆತುಬಿಡುವುದು ಯಾವ ಮಗನಿಗೂ ಸಲ್ಲತಕ್ಕ ವಿಷಯವಲ್ಲ. ಹಲವರು ಕನ್ನಡದಲ್ಲಿ ಮುಂದೆ ಬಂದಿಲ್ಲವೇ, ಕನ್ನಡ ಚಿತ್ರನಟ ದೇವರಾಜ್ ಇರುವ ಉದ್ಯೋಗಕ್ಕೆ ರಾಜಿನಾಮೆ ನೀಡಿ ಇಂದು ಕೋಟ್ಯಾಧಿಪತಿಯಾಗಿಲ್ಲವೇ, ಅವರೇನು ಬೇರೆ ಭಾಷೆಯನ್ನು ನೆಚ್ಚಿಕೊಂಡಿದ್ದರೇ? ಕನ್ನಡ ನೆಚ್ಚಿಕೊಂಡರೆ ಹಣ ಮಾಡಲಿಕ್ಕಾಗುವುದಿಲ್ಲ ಎನ್ನುವುದು ಭ್ರಮೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀನು ಕನ್ನಡವಾಗಿರು ಎಂಬ ಕವಿವಾಣಿ ನೆನಪಿಲ್ಲವೇ? ನಾವು ಕಾಸರಗೋಡಿನೀಂದ ಯಕ್ಷಗಾನದ ರಥವೊಂದನ್ನು ಬೆಂಗಳೂರಿಗೆ ಕೊಂಡೊಯ್ದಾಗ ಕೇರಳದ ಪತ್ರಕರ್ತರೊಬ್ಬರು ಕಾಸರಗೋಡು ಕೇರಳದ್ದಲ್ಲವೇ, ಇದನ್ನು ತಿರುವನಂತಪುರಕ್ಕೆ ತೆಗೆದುಕೊಂಡು ಹೋಗುವುದನ್ನು ಬಿಟ್ಟು ಬೆಂಗಳೂರಿಗೇಕೆ ಕೊಂಡೊಯ್ಯುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ನಾನು ಮಗುವಿಗೆ ಹಸಿವಾದಾಗ ಮೊದಲು ಹೋಗುವುದು ತಾಯಿಯ ಬಳಿಗೇ ಹೊರತು ಮಲತಾಯಿಯ ಬಳಿ ಅಲ್ಲ ಎಂದು ಉತ್ತರಿಸಿದೆ. ಸುಮ್ಮನಾಗಿಟ್ಟರು ಆ ಪತ್ರಕರ್ತರು. ಯಾವುದೇ ಭಾಷೆ ಎಷ್ಟೇ ಲಾಭ ಮಾಡಿಕೊಡಲಿ ನಮ್ಮ ತಾಯಿಯನ್ನು ಮರೆತು ಅದನ್ನು ನಮ್ಮ ಮಲತಾಯಿಯನ್ನಾಗಿ ತೆಗೆದುಕೊಳ್ಳುವುದು ಕನ್ನಡಿಗರಿಗೆ ಅವಮಾನ.
ಗಲ್ಫ್ ಕನ್ನಡಿಗ: ಕನ್ನಡ ಚಿತ್ರರಂಗ ಹಾಗೂ ದೂರದರ್ಶನವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಳ್ಳಬಯಸುವ ಯುವಜನಾಂಗಕ್ಕೆ ತಮ್ಮ ಸಲಹೆ:
ಕಾ.ಚಿನ್ನಾ: ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಕಲಿಯುವುದು, ಕನ್ನಡ ಇತಿಹಾಸ, ಕನ್ನಡ ನಟರ ಬಗ್ಗೆ ತಿಳಿದುಕೊಳ್ಳುವುದು, ನಟನೆಯನ್ನು ಕಲಿಯುವುದು ಮುಖ್ಯ. ಒಂದು ತರಬೇತಿ ನೀಡುವ ಸಂಸ್ಥೆಯಿಂದ ಸೂಕ್ತ ತರಬೇತಿ ಪಡೆದರೆ ಒಳ್ಳೆಯದು. ಸ್ವಾಭಾವಿಕ ಕಲಾವಿದನಾಗಿ ಬೆಂಗಳೂರಿಗೆ ಹೋದ ಮೇಲೆಯೇ ಅನೇಕ ರಂಗನಟನಟಿಯರ ನಟನೆ ನೋಡಿದ ಬಳಿಕ ನಾನೆಷ್ಟು ಕಡಿಮೆ ಕಲಿತಿದ್ದೇನೆಂದು ಅರಿವಾಗಿದ್ದು. ತರಬೇತಿ ಸಂಸ್ಥೆಯಲ್ಲಿ ನಿಮ್ಮ ದೌರ್ಬಲ್ಯಗಳನ್ನು ಗುರುತಿ ಅದಕ್ಕೆ ತಕ್ಕನಾದ ತರಬೇತಿಯನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ನಿಮಗೆ ನಿಮ್ಮ ವೃತ್ತಿಯ ಮೇಲಿರುವ ಪ್ರೀತಿ, ಶ್ರದ್ಧೆ, ಭಕ್ತಿಗಳು ವೃತ್ತಿಜೀವನದಲ್ಲಿ ಮೇಲಕ್ಕೆ ಕೊಂಡೊಯ್ಯುತ್ತವೆ. ಇಲ್ಲಿ ಹಂತಹಂತವಾಗಿ ಮೇಲೇರಬೇಕೇ ವಿನಃ ಒಮ್ಮೆಲೇ ಮೇಲೇರುವ ಸಾಹಸ ಬೇಡ. ಕಲೆ ಎಂದಿಗೂ ನಿಮ್ಮನ್ನು ರಸ್ತೆಯಲ್ಲಿ ನಿಲ್ಲಿಸುವುದಿಲ್ಲ. ಶ್ರದ್ಧೆ, ವಿನಯ, ತಾಳ್ಮೆ ನಿಮ್ಮನ್ನು ಖಂಡಿತಾ ಮೇಲೆ ತರುತ್ತದೆ.
ಗಲ್ಫ್ ಕನ್ನಡಿಗ: ಯು.ಎ.ಇ.ಯಲ್ಲಿ ಕನ್ನಡಪರ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳ ಬಗ್ಗೆ ನಿಮ್ಮ ಅನಿಸಿಕೆ:
ಕಾ.ಚಿನ್ನಾ: ಹಲವು ವರ್ಷಗಳಿಂದ ಹೊರನಾಡಿನಲ್ಲಿ ಕನ್ನಡ ಸಂಸ್ಥೆಗಳು ಮಾಡುತ್ತಿರುವ ಕಾರ್ಯಗಳು ಖಂಡಿತಾ ಶ್ಲಾಘನೀಯ. ಭಾರತದಲ್ಲಿಯೂ ಕರ್ನಾಟಕದ ಹೊರಗಿನ ನಗರಗಳಲ್ಲಿ, ಚೆನ್ನೈ, ಮುಂಬೈ, ದೆಹಲಿ ಇತ್ಯಾದಿ ಕಡೆಗಳಲ್ಲಿ ಹಲವು ಕನ್ನಡ ಕಾರ್ಯಕ್ರಮಗಳಾಗುತ್ತಿವೆ. ಅಂತೆಯೇ ವಿದೇಶಗಳಲ್ಲಿಯೂ, ಇತ್ತೀಚೆಗೆ ಕುವೈಟಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, ಈಗ ಶಾರ್ಜಾ ಕರ್ನಾಟಕ ಸಂಘದ ಕಾರ್ಯಕ್ರಮ ಮೊದಲಾದವು ಖಂಡಿತಾ ಕನ್ನಡಕ್ಕೆ ಸಂದ ಗರಿಮೆಗಳು. ನಾವೆಲ್ಲಿದ್ದರೂ ಕನ್ನಡಕ್ಕೆ ಏನಾದರೂ ಮಾಡಬಲ್ಲೆವು ಎಂಬುದಕ್ಕೆ ಈ ರೀತಿಯ ಸಂಘಟನೆಗಳೇ ಸಾಕ್ಷಿ. ಆದರೆ ಇಲ್ಲಿಯ ಸಂಘಟನೆಗಳು ಕರ್ನಾಟಕದಿಂದ ಕಲಾವಿದರನ್ನು ಕರೆಸಿ ಕಾರ್ಯಕ್ರಮಗಳನ್ನು ನಡೆಸುವಂತೆಯೇ ಕರ್ನಾಟಕದಲ್ಲಿಯೂ ಅನಿವಾಸಿ ಕನ್ನಡಿಗ ಕಲಾವಿದರಿಂದ ಕಾರ್ಯಕ್ರಮ ನಡೆಸುವಂತಾಗಬೇಕು. ಆಗ ಈ ಕಾರ್ಯಗಳಿಗೊಂದು ಮಹತ್ವ ಸಿಕ್ಕಂತಾಗುತ್ತದೆ. ಹಿಂದೆಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಯುವಜನಾಂಗದಲ್ಲಿ ತಮ್ಮ ಭಾಷೆಯ ಬಗ್ಗೆ ಒಲವು ಮೂಡಿಬರುತ್ತಿದೆ. ಇದು ಖಂಡಿತಾ ಒಳ್ಳೆಯ ಬೆಳವಣಿಗೆ. ಇಲ್ಲಿನ ಒಂದು ಆತಂಕಕಾರಿ ಬೆಳವಣಿಗೆಯೆಂದರೆ ಕನ್ನಡ ಸಂಘ ಸಂಸ್ಥೆಗಳು ಜಾತ್ಯಾಧಾರಿತವಾಗಿರುವುದು. ಯಾವುದೇ ಸಂಘವಾಗಲಿ ಕನ್ನಡ ಪರವಾಗಿರಬೇಕೇ ಹೊರತು ಆ ಪಂಗಡ, ಈ ಜಾತಿ, ಈ ಉಪಜಾತಿ ಎಂಬ ಬೇಧ ನಡೆಸಬಾರದು. ಸಂಘಟನೆಗಳು ಕನ್ನಡವನ್ನು ಮೂಲವಾಗಿಸಿ ಒಗ್ಗಟ್ಟಾಗಿ ಏಕಪರ ಕಾರ್ಯ ನಡೆಸಿದರೆ ಇನ್ನಷ್ಟು ಹೆಚ್ಚಿನ ಸಾಧನೆ ಸಾಧಿಸಬಹುದಾಗಿದೆ. ಜಾತಿ ಸಂಘಗಳೇ ಹೆಚ್ಚಾದರೆ ಒಂದಲ್ಲ ಒಂದು ದಿನ ಕನ್ನಡ ಅಂದರೆ ಎನ್ನಡ ಅನ್ನುವಂತಹ ಸ್ಥಿತಿ ಬರಬಹುದು. ಅದಾಗುವ ಮುನ್ನವೇ ಕನ್ನಡಿಗರೆಲ್ಲಾ ಎಚ್ಚೆತ್ತುಕೊಳ್ಳಬೇಕು. ಕನ್ನಡಿಗರು ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು.
ಗಲ್ಫ್ ಕನ್ನಡಿಗ: ಈಗ ಸಧ್ಯಕ್ಕೆ ನಿಮ್ಮಲ್ಲಿರುವ ಯೋಜನೆಗಳು ಹಾಗೂ ಮುಂಬರಲಿರುವ ಯೋಜನೆಗಳ ಬಗ್ಗೆ ವಿವರಿಸಿ
ಕಾ.ಚಿನ್ನಾ: ಇತ್ತೀಚೆಗೆ ಮಂಗಳೂರಿನಲ್ಲಿ ಒಬ್ಬರೇ ನಿರ್ದೇಶಕರಿಂದ ಮೂರು ಭಾಷೆಗಳ - ತುಳು, ಕೊಂಕಣಿ ಮತ್ತು ಕನ್ನಡ ಭಾಷೆಗಳಲ್ಲಿ ನಿರ್ದೇಶಿಸಿರುವ ಒಂದು ನಾಟಕವನ್ನು ಪ್ರಾಯಶಃ ದೇಶದಲ್ಲಿಯೇ ಮೊದಲ ಬಾರಿಗೆ ಪ್ರಯೋಗಿಸಲಿದ್ದೇವೆ. ಬಂಗಾಳಿ ಮೂಲ ನಾಟಕವಾದ ಗಾಂಠಿ ಎನ್ನುವ ನಾಟಕದ ಕೊಂಕಣಿ ಅವತರಣಿಕೆಯನ್ನು ಯು.ಎ.ಇ.ಯಲ್ಲಿ ಫೆಬ್ರುವರಿಯಲ್ಲಿ ಪ್ರದರ್ಶಿಸಲಿದ್ದೇವೆ. ಇಲ್ಲಿನ ಸ್ಥಳೀಯ ಕೊಂಕಣಿ ಕಲಾವಿದರಿಗೇ ನಟಿಸುವ ಅವಕಾಶ ಕಲ್ಪಿಸಲಾಗಿದೆ. ಬರುವ ವರ್ಷ ನವೆಂಬರಿನಲ್ಲಿ ಆಯ್ಲೆರೇ ಆಯ್ಲೇ ಎಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸುವ ಯೋಚನೆಯೂ ಇದೆ.
ಗಲ್ಫ್ ಕನ್ನಡಿಗ: ಗಲ್ಫ್ ಕನ್ನಡಿಗ ಕನ್ನಡ ಅಂತರ್ಜಾಲ ಪತ್ರಿಕೆಯ ಬಗ್ಗೆ ತಮ್ಮ ಅನಿಸಿಕೆ.
ಕಾ.ಚಿನ್ನಾ: ತುಂಬಾ ಒಳ್ಳೆಯ ಕೆಲಸ ಮಾಡಿಕೊಂಡು ಬರುತ್ತಿದ್ದೀರಿ. ವಿದೇಶದ ಸುದ್ದಿಗಳನ್ನು ಕನ್ನಡದಲ್ಲಿ ಹೊರತರುತ್ತಿರುವ ತಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ಇನ್ನಷ್ಟು ಯಶಸ್ಸು ಸಿಗಲಿ. ಸುದ್ದಿಗಳು ಪ್ರಸ್ತುತವಾಗಿರಬೇಕು, ಪ್ರಾಮಾಣಿಕವಾಗಿರಬೇಕು, ಯಾವುದೇ ಪಂಗಡವಾಗಲಿ, ಪಕ್ಷವಾಗಲಿ ಅವುಗಳ ಆಧೀನದಲ್ಲಿರಬಾರದು. ಜನರಿಗೆ ನೀವು ನೀಡುವ ಸುದ್ದಿಗಳ ಮೇಲೆ ಭರವಸೆ ಬಂದರೆ ಎಂದೆಂದೂ ನಿಮ್ಮ ತಾಣವನ್ನು ನೋಡುತ್ತಿರುತ್ತಾರೆ. ಅದೇ ಸುದ್ದಿಗಳು ತಪ್ಪಾಗಿದ್ದರೆ, ಅಥವಾ ಪಕ್ಷಾಧಾರಿತವಾಗಿದ್ದರೆ ಜನರು ಬೇರೆ ತಾಣಗಳಿಗೆ ಹೋಗುವ ಸಂಭವವಿರುತ್ತದೆ. ಹಾಗಾಗಿ ಕಂಸಿಸ್ಟಿನ್ಸ್ ಅನ್ನುತ್ತೇವೆಲ್ಲಾ ಹಾಗೆ ಸುಸಂಗತವಾಗಿರಬೇಕು.
ತಮ್ಮ ಪ್ರಯತ್ನಗಳಿಗೆ ಶುಭವಾಗಲಿ, ಗಲ್ಫ್ ಕನ್ನಡಿಗ ತಾಣವನ್ನು ಎಲ್ಲಾ ಕನ್ನಡಿಗರು ಪ್ರತಿದಿನ ಸಂದರ್ಶಿಸುವಂತಾಗಲಿ.
ಶ್ರೀ ಕಾಸರಗೋಡು ಚಿನ್ನಾ ಅವರ ವಿಳಾಸ:
Giridhar metal house
Palika bhavan
Bank Road,
Kasargod - 671121
Tel: 04994 - 222210 (o)
230202 (r)
mobile: 9447323500
ವರದಿಯ ವಿವರಗಳು |
 |
ಕೃಪೆ : ಅರ್ಶದ್ ಹುಸೇನ್ ಎಂ ಹ ವರದಿಗಾರರು : ಅರ್ಶದ್ ಹುಸೈನ್
ಪ್ರಕಟಿಸಿದ ದಿನಾಂಕ : 2007-12-21
|
|
| Nischal, Koppa(Mumbai) | 2007-12-24 | | Good interview. Thanks for your mail arshad bhai |
| Shilpa, dubai | 2007-12-22 | | Hi,
first i will tell u congragulations.This is really a mind blowing conversation. I want this article to be read by each and every Kannadiga. This is a mirror which shows the lack of oneness among us.But i think we Kannadigas are not expressive but from our heart we are always one.Thanks for Mr. Kasaragodu Chinna who had explained the importance of expressiveness and organisational powers. Jai Karnataka Maate..
I promise i will be one of the active member to proceede with this goal.
Finally thanks to Mr. Arshad Hussain for givivg us these kind of NUDIMUTTU. |
|