ದಾವೂದ್ ಸೋದರ ಅನೀಸ್ ಸೌದಿಯಲ್ಲಿ ಬಂಧನ? |
ಪ್ರಕಟಿಸಿದ ದಿನಾಂಕ : 2008-08-13
ಜೆಡ್ಡಾ: ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಸಹೋದರ ಹಾಗೂ 1993 ರ ಮುಂಬೈ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಅನೀಸ್ ಇಬ್ರಾಹಿಂನನ್ನು ಸೌದಿ ಅರೇಬಿಯಾದ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಇಂಟರ್‌ಪೋಲ್ ಪೊಲೀಸರು ಬಂಧಿಸಿದ್ದಾರೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ.
ಅನೀಸ್ ಇಬ್ರಾಹಿಂ ಬಂಧನ ಕುರಿತಂತೆ ಯಾವುದೇ ಖಚಿತ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಇತ್ತೀಚಿನ ವರದಿಗಳ ಪ್ರಕಾರ ಅನೀಸ್ ಇಬ್ರಾಹಿಂ ನಕಲಿ ಪಾಸ್‌ಪೋರ್ಟ್ ಜತೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಇಂಟರ್‌ಪೋಲ್ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದು, ಆತನ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅನೀಸ್ ಈಗಾಗಲೇ ಮೂರು ಬಾರಿ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದಾನೆ. ಕೊಲೆ, ಕೊಲೆ ಯತ್ನ, ಅಪಹರಣ, ಸುಲಿಗೆ ಸೇರಿದಂತೆ ಸುಮಾರು 70 ಪ್ರಕರಣಗಳು ವಿವಿಧ ರಾಜ್ಯಗಳಲ್ಲಿ ಅನೀಸ್ ಇಬ್ರಾಹಿಂ ವಿರುದ್ಧ ದಾಖಲಾಗಿವೆ.
1993 ರಲ್ಲಿ ಮುಂಬೈ ಸ್ಫೋಟದ ನಂತರ ಈತನನ್ನು 1996 ರಲ್ಲಿ ದುಬೈ ಪೊಲೀಸರು ಈತನನ್ನು ಬಂಧಿಸಿದ್ದರು. ಅನೀಸ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗದ ಕಾರಣ ಆತನನ್ನು ದೋಷಮುಕ್ತನೆಂದು ಬಿಡುಗಡೆ ಮಾಡಲಾಯಿತು.
ನಂತರ ಮತ್ತೆ 1998-99 ಅವಧಿಯಲ್ಲಿ ಮತ್ತೆ ಈತನನ್ನು ಬಹ್ರೇನ್‌ನಲ್ಲಿ ಬಂಧಿಸಿ ದುಬೈಗೆ ಗಡಿಪಾರು ಮಾಡಲಾಯಿತು. ಅಲ್ಲಿಯೂ ಶಿಕ್ಷೆಯಿಂದ ಪಾರಾಗಿ ಬಿಡುಗಡೆ ಹೊಂದಿದ್ದನು.
ಮತ್ತೆ 2002 ರಲ್ಲಿ ಭೂಗತ ದೊರೆಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ದುಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದನು. ಭಾರತದ ಸಿಬಿಐ ಪೊಲೀಸರು ಆತನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ದುಬೈ ಅಧಿಕಾರಿಗಳನ್ನು ಸಂಪರ್ಕಿಸುವಷ್ಟರಲ್ಲೇ ಆತ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದನು. ಜಾಮೀನಿನ ಮೇಲೆ ಹೊರಗೆ ಬಂದ ಅನೀಸ್ ಇಲ್ಲಿಯವರೆಗೆ ಭೂಗತನಾಗಿದ್ದನು.
ಇದೀಗ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದಾನೆ ಎನ್ನಲಾಗಿರುವ ಅನೀಸ್ ಇಬ್ರಾಹಿಂನನ್ನು ಭಾರತಕ್ಕೆ ಕರೆತರಲು ಇಲ್ಲಿನ ಪೊಲೀಸರು ಸೌದಿ ಅರೇಬಿಯಾ ಅಧಿಕಾರಿಗಳ ಸಂಪರ್ಕಕ್ಕೆ ಯತ್ನಿಸುತ್ತಿದ್ದಾರೆ.
ವ್ಯವಹಾರಿಕವಾಗಿ ಸೌದಿ ಅರೇಬಿಯಾ ದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿರುವುದರಿಂದ ಅನೀಸ್‌ನನ್ನು ಕರೆತರಲು ಯಾವುದೇ ತೊಡಕು ಉಂಟಾಗು ವುದಿಲ್ಲ ಎಂದು ಭಾರತದ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ವರದಿಯ ವಿವರಗಳು |
 |
ಕೃಪೆ : kannada prabha ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-13
|
|
|