ಸಿಡ್ನಿ ಕನ್ನಡ ಸಂಘ- ರಜತ ಮಹೋತ್ಸವ ವೈಭವ’ |
ಪ್ರಕಟಿಸಿದ ದಿನಾಂಕ : 2008-08-11
ಸಾವಿರಾರು ದೀಪಗಳಿಂದ ಝಗಮಗಿಸುತ್ತಿರುವ ಮೈಸೂರು ಅರಮನೆಯ ಅಂಗಳದಲ್ಲಿ ಬಣ್ಣ ಬಣ್ಣದ ಉಡಿಗೆ ತೊಟ್ಟ ಮಕ್ಕಳಿಂದ ಸುಂದರವಾದ ಹಾಡು, ನೃತ್ಯ, ಕೋಲಾಟ ನಡೆಯುತ್ತಿದೆ. ಪ್ರೇಕ್ಷಕರು ಸಂಪೂಣ ತನ್ಮಯರಾಗಿ ನೋಡುತ್ತಾ ಕುಳಿತಿದ್ದಾರೆ. ಇದ್ದಕಿದ್ದಂತೆ ಸಭಾಂಗಣದಲ್ಲಿ ದೀಪಗಳು ಹತ್ತಿದವು. ಆಗಲೇ ಜನರಿಗೆ ಅರಿವಾಗಿದ್ದು, ತಾವು ಮೈಸೂರು ಅರಮನೆಯ ಅಂಗಳದಲ್ಲಲ್ಲ, ಮೈಸೂರಿನಿಂದ ದೂರ, ಬಹುದೂರದ ಸಿಡ್ನಿ ನಗರದ ಬೌಮನ್ ಸಭಾಂಗಣದಲ್ಲಿ ಕುಳಿತಿದ್ದೇವೆ ಎನ್ನುವುದು!

ಶನಿವಾರ, ಜು.೨೬ರಂದು ಸಿಡ್ನಿ ಕನ್ನಡ ಸಂಘ ವಿಜೃಂಭಣೆಯಿಂದ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿತು. ಈ ಸಂದ ರ್ಭಕ್ಕೆಂದೇ ಸಿಡ್ನಿಯ ಪ್ರತಿಭಾವಂತ ಕಲಾವಿದ ದಕ್ಷಿಣಾಮೂರ್ತಿ ಆಂಜನಪ್ಪನವರು ಕಲಾತ್ಮಕವಾಗಿ ರಚಿಸಿದ ದೀಪಾಲಂಕೃತ ಮೈಸೂರು ಅರಮನೆಯ ಅತಿ ಸುಂದರ ಹಿನ್ನೆಲೆ, ಕಾರ್‍ಯಕ್ರಮಕ್ಕೆ ಅತ್ಯಂತ ವೈಭವವಾಗಿ ಮೆರುಗು ನೀಡಿತ್ತು. ಸಮಾರಂಭವೆಲ್ಲ ಮೈಸೂರು ಅರಮನೆಯಲ್ಲೇ ನಡೆದಂತೆ ಭಾಸವಾಗುತ್ತಿತ್ತು!

ಬೆಳ್ಳಿ ಹಬ್ಬಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ದೇವತಾ ಬಿಲ್ಡರ್‍ಸ್‌ನ ಶ್ರೀ ಆರಾಧ್ಯರ ಸಮ್ಮುಖದಲ್ಲಿ ರಜತ ಮಹೋತ್ಸವದ ಅಧ್ಯಕ್ಷರಾದ ಡಾ. ಸಿದ್ದಲಿಂಗೇಶ್ವರ ಓರೆಕೊಂಡಿ ಹಾಗೂ ಕನ್ನಡ ಸಂಘದ ಅಧ್ಯಕ್ಷೆ ಡಾ. ನಾಗಮ್ಮ ಪ್ರಕಾಶ್ ಅವರು ಬೆಳ್ಳಿ ಹಬ್ಬದ ಜ್ಯೋತಿಯನ್ನು ಬೆಳಗಿಸಿದರು.

ಭಾರತದ ಹೈಕಮೀಷನರ್ ಶ್ರೀಮತಿ ಸುಜಾತಸಿಂಗ್ ಅವರು ಈ ಶುಭ ಸಂದರ್‍ಭದಲ್ಲಿ ರಜತ ಮಹೋತ್ಸವದ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಸಿಡ್ನಿ ಕನ್ನಡಿಗರ ಉತ್ತಮ್ ಸಾಹಿತ್ಯಾಭಿರುಚಿಯನ್ನು ಬಿಂಬಿಸುವ ಈ ಸ್ಮರಣ ಸಂಚಿಕೆಯನ್ನು ಶ್ರೀ ಓಂಕಾರಸ್ವಾಮಿ ಗೊಪ್ಪೇನಳ್ಳಿ ಹಾಗೂ ಶ್ರೀಮತಿ ಗೀತಾ ಗೋಪಿನಾಥ್ ಅವರು ಬಹಳ ಆಸಕ್ತಿ ವಹಿಸಿ ಹೊರತಂದಿದ್ದಾರೆ. ತಮ್ಮ ಹಿತ-ಮಿತವಾದ ಭಾಷಣದಲ್ಲಿ ಶ್ರೀಮತಿ ಸುಜಾತ ಸಿಂಗ್ ಅವರು ತಂತ್ರಜ್ಞಾನ, ವಾಣಿಜ್ಯ, ಸಾಹಿತ್ಯ, ಕಲೆ, ಕ್ರೀಡೆ ಮುಂತಾದ ಹಲವಾರು ದಿಶೆಗಳಲ್ಲಿ ಕರ್ನಾಟಕದ ಯೋಗದಾನವನ್ನು ಬಣ್ಣಿಸುತ್ತಾ ಕನ್ನಡಿಗರನ್ನು ಅಭಿನಂದಿಸಿದರು.

ಆಸ್ಟ್ರೇಲಿಯಾದ ಅಭಿವೃದ್ಧಿಯಲ್ಲಿ ಭಾರತೀಯರ ಹಾಗೂ ಕನ್ನಡಿಗರ ಸಹಯೋಗವನ್ನು ಉಲ್ಲೇಖಿಸಿದರು. ಆಸ್ಟ್ರೇಲಿಯಾದ ಹಾಗೂ ವಿದೇಶದ ಕನ್ನಡ ಸಂಘಗಳಿಂದ ಮತ್ತು ಸಿಡ್ನಿಯ ಅನೇಕ ಗಣ್ಯ ವ್ಯಕ್ತಿಗಳಿಂದ ಕನ್ನಡ ಸಂಘಕ್ಕೆ ಬೆಳ್ಳಿ ಹಬ್ಬದ ಅಭಿನಂದನಾ ಸಂದೇಶಗಳು ಬಂದಿದ್ದವು..

ರಜತ ಮಹೋತ್ಸವದ ಅಧ್ಯಕ್ಷರಾದ ಡಾ. ಸಿದ್ದಲಿಂಗೇಶ್ವರ ಓರೆಕೊಂಡಿಯವರು ೨೫ ವರ್ಷಗಳಿಂದ ಕನ್ನಡ ಸಂಘದ ಸದಸ್ಯರಾಗಿದ್ದಾರೆ. ೧೯೮೩ರಲ್ಲಿ ಕೇವಲ ನಾಲ್ಕಾರು ಕುಟುಂಬಗಳ ಸದಸ್ಯತ್ವದೊಂದಿಗೆ ಪ್ರಾರಂಭವಾದ ಕನ್ನಡ ಸಂಘ, ಇಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆಯಾಗಿ ಬೆಳೆದು ಬಂದ ದಾರಿಯತ್ತ ನೋಟ ಹರಿಸಿದರು. ಇಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆಯಾಗಿ ಬೆಳೆದು ಬಂದ ದಾರಿಯತ್ತ ನೋಟ ಹರಿಸಿದರು.

೨೦೦೪ರಿಂದ ಏಶಿಯಾ ಫೆಸಿಫಿಕ್ ಕನ್ನಡ ಒಕ್ಕೂಟವೆಂಬ ವೇದಿಕೆಯಡಿಯಲ್ಲಿ ಈ ವಲಯದಲ್ಲಿರುವ ಮುಖ್ಯ ನಗರಗಳ ಕನ್ನಡಿಗರ ಮಧ್ಯೆ ಮೈತ್ರಿ ಬೆಸೆಯಲು ಹಾಗೂ ಕರ್‍ನಾಟಕದಿಂದ ಹಲವಾರು ಹೆಸರಾಂತ ಕಲಾವಿದರನ್ನು ಕರೆಸಿ ಈ ಎಲ್ಲಾ ನಗರಗಳಲ್ಲಿ ಅವರ ಕಲೆಯನೇನು ಆನಂದಿಸಿ ಆದರಿಸುವಂತೆ ಮಾಡಲು ಸಿಡ್ನಿ ಕನ್ನಡ ಸಂಘ ವಹಿಸಿದ ಪ್ರಮುಖ ಪಾತ್ರದ ಬಗ್ಗೆ ವಿವರಿಸಿದರು.
ಸಿಡ್ನಿಯ ಒಕ್ಕೂಟದ ಅಧ್ಯಕ್ಷರಾಗಿರುವ, ಕನ್ನಡದವರೇ ಆದ ಶ್ರೀರಾಜ್ ನಟರಾಜನ್ ಅವರು ಭಾರತೀಯ ಒಕ್ಕೂಟದ ಅಭಿವೃದ್ಧಿಯಲ್ಲಿ ಕನ್ನಡಿಗರ ಯೋಗದಾನ, ಕನ್ನಡಿಗರು ನೀಡಿರುವ ಮುಂದಾಳತ್ವವನ್ನು ಶ್ಲಾಘಿಸಿದರು. ಕನ್ನಡ ಸಂಘದ ಅಧ್ಯಕ್ಷೆ ಡಾ. ನಾಗಮ್ಮ ಪ್ರಕಾಶ್ ಅವರು ಸಿಡ್ನಿಯ ಕನ್ನಡ ಶಾಲೆಗಳು, ಇಲ್ಲಿನ ಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕಗಳ ವಿತರಣೆ, ಯುವ ವೇದಿಕೆಯ ಸ್ಥಾಪನೆ, ಇತ್ಯಾದಿ ಸಂಘದ ಚಟುವಟಿಕೆಗಳನ್ನು ವಿವರಿಸಿ ಸಂಸ್ಥೆಯ ಬೆಳವಣಿಗೆಗೆ ನೆರವಾದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್‍ಪಿಸಿದರು. ಕರ್‍ನಾಟಕದ ಮುಖ್ಯಮಂತ್ರಿಗಳಾದ ಯಡ್ಯೂರಪ್ಪನವರ ಅಭಿನಂದನಾ ಸಂದೇಶವನ್ನು ಈ ಸಂದರ್ಭದಲ್ಲಿ ಅವರು ಸಭೆಗೆ ಓದಿ ತಿಳಿಸಿದರು.

ಇದಾದ ನಂತರ ಸಭಿಕರು ಕಾತುರದಿಂದ ಕಾಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು. ಮೊದಲಿಗೆ ಸಿಡ್ನಿಯ ಕಲಾವಿದರಿಂದ ವೃಂದಗಾನ ಹಾಗೂ ಮಕ್ಕಳಿಂದ ನೃತ್ಯ ನಡೆಯಿತು. ಸಿಡ್ನಿಯ ಯುವ ವೇದಿಕೆಯ ಸದಸ್ಯೆಯರು ಅತ್ಯಂತ ಭಾವ ಪೂಣವಾಗಿ ದಶಾವತಾರ ನೃತ್ಯ ರೂಪಕವನ್ನು ಭರತ ನಾಟ್ಯದಲ್ಲಿ ನಿರೂಪಿಸಿದರು. ಪುಟ್ಟ ಪುಟ್ಟ ಬಾಲಕರನ್ನು ದಶಾವತಾರದ ಪಾತ್ರಗಳಂತೆ ಅಲಂಕರಿಸಿ ಅವರನ್ನು ನೃತ್ಯದಲ್ಲಿ ಬಳಸಿದ್ದು ಒಂದು ನೂತನ ಪ್ರಯೋಗವಾಗಿತ್ತು.

ಸುಂದರ ಯುವತಿಯರ ಇನ್ನೊಂದು ತಂಡ ರಾಷ್ಟ್ರಕವಿ ಕುವೆಂಪುರವರ ‘ ಜೈ ಭಾರತ ಜನನಿಯ ತನುಜಾತೆ’ ಹಾಡಿಗೆ ಸಂಯೋಜಿಸಿದ ನೃತ್ಯವೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ಈ ಸಮಾರಂಭಕ್ಕೆಂದೇ ಕರ್‍ನಾಟಕದಿಂದ ಆಗಮಿಸಿದ ಶ್ರೀಮತಿ ಪಲ್ಲವಿ ಅರುಣ್ ಹಾಗೂ ಖ್ಯಾತ ಹಾಸ್ಯಗಾರ ಗಂಗಾವತಿ ಪ್ರಾಣೇಶ್ ಕಾರ್‍ಯಕ್ರಮವನ್ನು ಮತ್ತಷ್ಟು ರಂಗೇರಿಸಿದರು. ಗಂಗಾವತಿ ಬೀಚಿಯೆಂದು ಪ್ರಸಿದ್ಧರಾಗಿರುವ ಪ್ರಾಣೇಶ್ ವೇದಿಕೆಯ ನ್ನೇರಿದಾಗ, ಈಗಾಗಲೇ ಅವರ ಮಾತಿನ ರುಚಿಯನ್ನು ಟಿವಿಯಲ್ಲಿ, ಸಿಡ್ನಿ ಕನ್ನಡ ರೇಡಿಯೋದ ಸಂದರ್‍ಶನದಲ್ಲಿ ಕೇಳಿ ಆನಂದಿಸಿದ ಜನಕ್ಕೆ ಅವರ ಪರಿಚಯದ ಅಗತ್ಯವೇ ಇಲ್ಲದಷ್ಟು ಆತ್ಮೀಯರಾಗಿ ಬಿಟ್ಟಿದ್ದರು! ಸಿಡ್ನಿಗೆ ಬರುವಾಗ ವಿಮಾನಯಾನದ ತಮ್ಮ ಅನುಭವಗಳನ್ನು ರಸವತ್ತಾಗಿ ಬಣ್ಣಿಸುತ್ತಾ, ಪ್ರಾಣೇಶ್ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿದರು. ಅನುದಿನದ ಸಾಮಾನ್ಯ ಸಂದಭಗಳಲ್ಲೂ ಹಾಸ್ಯ ಹೇಗೆ ಅಡಗಿರುತ್ತದೆ ಎಂದು ವಿವರಿಸುತ್ತ ಅವರು ಹಲವಾರು ಉದಾಹರಣೆಗಳೊಂದಿಗೆ ನಿರೂಪಿಸಿದರು.

ಇಡೀ ರಾತ್ರಿ ನಡೆದ ಒಂದು ಸಂಗೀತ ಸ್ಪರ್ಧೆಗೆ ತಾವು ಅನಿವಾರ್ಯವಾಗಿ ತೀರ್ಪುರ್ಗಾರರಾಗಬೇಕಾದ ಅಸಹಾಯಕತೆಯನ್ನು ಪ್ರಾಣೇಶ್ ಸಭಿಕರಲ್ಲಿ ಹೇಳಿ ಕೊಳ್ಳುತ್ತಿದ್ದರೆ ಜನ ಸ್ವಲ್ವವೂ ಕನಿಕರವಿಲ್ಲದೆ ಬಿದ್ದು, ಬಿದ್ದು ನಗುತ್ತಿದ್ದರು!
ಮುದುಕಿಯೊಬ್ಬಳ ‘ಒಂದು ದಳದ ಕಮಲದಲ್ಲಿ‘ ಎಂದು ಶುರುವಾದ ಅಪಸ್ವರದ ಪ್ರಾರ್ಥನೆ ಮುಗಿಯುವ ಸೂಚನೆಯೇ ಸಿಗದೆ ತಾವು ಗಾಬರಿಗೊಂಡ ಸನ್ನಿವೇಶವನ್ನು ಪ್ರಾಣೇಶ್ ವಿವರಿಸಿದಂತಾಗಲೂ ಇಡೀ ಸಭಾಂಗಣ ನಗೆಗಡಲಲ್ಲಿ ತೇಲಿ ಹೋಯಿತು.

ಜನರಿಗೆ ಒಂದೆಡೆ ಪ್ರಾಣೇಶರ ಹಾಸ್ಯ ಚಟಾಕಿಗಳನ್ನು ಇನ್ನಷ್ಟು ಸವಿಯುವ ಆಸೆಯಾದರೆ, ಇನ್ನೊಂದೆಡೆ ಪಲ್ಲವಿಯವರ ಗಾನಸುಧೆಯನ್ನು ಯಾವಾಗ ಸವಿದೇವೋ ಎಂಬ ತವಕ. ಒಲ್ಲದ ಮನಸ್ಸಿನಿಂದಲೇ ಪ್ರಾಣೇಶರನ್ನು ಬೀಳ್ಕೊಟ್ಟ ನಂತರ ಪಲ್ಲವಿಯವರನ್ನು ವೇದಿಕೆಗೆ ಆಹ್ವಾನಿಸಿದರು ನಿರೂಪಕರು.

‘ಅರ್‍ಜ್ಂ ನಿರ್‍ವಿಕಲ್ಪಂ‘ ಎಂಬ ಗಣೇಶ ಸ್ತುತಿಯೊಡನೆ ತಮ್ಮ ಕಾರ್ಯಕ್ರಮವನ್ನು ಭವ್ಯವಾಗಿ ಪ್ರಾರಂಭಿಸಿದರು ಪಲ್ಲವಿ. ಅಲ್ಲಿಂದ ಮೊದಲಾಯ್ತು ಸಿಡ್ನಿ ಕನ್ನಡಿಗರಿಗೆ ಪಲ್ಲವಿಯವರ ಸಿರಿಗಾನದ ರಸದೌತಣ. ಕುವೆಂಪುರವರ ‘ಇಳಿದು ಬಾ ತಾಯಿ‘ ಕವನವನ್ನು ಮನದುಂಬಿ, ಭಾವತುಂಬಿ ಹಾಡಿದಾಗ ಸಭಿಕರ ‘ವನ್ಸ್ ಮೋರ್‘ ಕೋರಿಕೆ ಸಹಜವೇ ಆಗಿತ್ತು. ಪಲ್ಲವಿ ಚಿಕ್ಕ ವಯಸ್ಸಿನವರಾದರೂ ಅವರ ಮಾತಿನಲ್ಲಿ, ಕವನಗಳ ಆಯ್ಕೆಯಲ್ಲಿ, ಪ್ರತಿ ಕವನನ್ನು ಅವರು ಪರಿಚಯಿಸುತ್ತಿದ್ದ ರೀತಿಯಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತಿತ್ತು. ಕನ್ನಡದ ಪ್ರಖ್ಯಾತ ಕವಿಗಳಾದ ಬೇಂದ್ರೆ, ಅಡಿಗ, ನರಸಿಂಹಸ್ವಾಮಿ, ಪು.ತಿ.ನ. ಲಕ್ಷೀನಾರಾಯಣ ಭಟ್ಟರ ಕವನಗಳನ್ನು ತಮ್ಮ ಇನಿದನಿಯಲ್ಲಿ ನಿರಾಯಾಸ ವಾಗಿ ಹಾಡಿದರು ಪಲ್ಲವಿ. ನಗು ನಗುತ್ತಾ ಪ್ರೇಕ್ಷಕರೊಂದಿಗೆ ಮಾತನಾಡುತ್ತಾ ಒಂದು ಸ್ನೇಹಮಯಿ ವಾತಾವರಣವನ್ನು ಸೃಷ್ಟಿಸಿದರು.
ಕರ್ನಾಟಕದಲ್ಲಿ ಮನೆ ಮಾತಾಗಿರುವ ಹಿರಿಯ ಕಲಾವಿದ ಎ.ಎಸ್. ಮೂರ್ತಿಯವರ ಮೊಮ್ಮಗಳಾದ ಪಲ್ಲವಿ ತನ್ನ ಪ್ರೀತಿಯ ತಾತನ ನಾಟಕದ ಹಾಡಿನೊಂದಿಗೆ ತಮ್ಮ ಕಾರ್‍ಯಕ್ರಮವನ್ನು ಮುಗಿಸಿದರು. ಹಾಡಿಗೆ ಬೇಕಾದ ಪಕ್ಕವಾದ್ಯಗಳೆಲ್ಲ ಲ್ಯಾಪ್ ಟಾಪ್ನಲ್ಲಿ ಅಡಗಿತ್ತು. ನಿಜವಾದ ವಾದ್ಯ ವೃಂದದ ಕೊರತೆ ಬಹುಶಃ ಪಲ್ಲವಿಯವರನ್ನು ಕಾಡಿರಬಹುದು. ಆದರೆ ಅವರ ಹಾಡಿನ ಮೋಡಿಗೆ ಮಾರು ಹೋದ ಸಿಡ್ನಿ ಕನ್ನಡಿಗರಿಗೆ ಅದೇನು ವಿಶೇಷ ಕೊರತೆಯಾಗಿ ಕಂಡಿರಲಾರದು. ಜುಲೈ ತಿಂಗಳ ಕೊರೆಯುವ ಚಳಿಯಲ್ಲಿ ಮಧ್ಯರಾತ್ರಿಯವರೆಗೂ ಜನ ಅಲ್ಲಾಡದೆ ಕುಳಿತಿದ್ದೇ ಇದಕ್ಕೆ ಸಾಕ್ಷಿ.

ಸಂಘದ ಉಪಾಧ್ಯಕ್ಷೆ ಶ್ರೀಮತಿ ಗೀತಾ ಗೋಪಿನಾಥ್ ವಂದನಾರ್ಪಣೆ ನಂತರ ಕನ್ನಡದ ಕವಿ ನಿಸಾರ್ ಅಹಮದ್ ಅವರ ‘ನಿತ್ಯೋತ್ಸವ‘ ಗೀತೆಯನ್ನು ಸಂಘದ ಸದಸ್ಯರು ಪಲ್ಲವಿ, ಪ್ರಾಣೇಶ್ ಹಾಗೂ ಸಿಡ್ನಿಯ ಕಲಾವಿದೆ ಶ್ರೀಮತಿ ಪುಷ್ಪಾ ಜಗದೀಶ್ ಮತ್ತು ಇತರ ಗಾಯಕರೊಂದಿಗೆ ವೃಂದಗಾನ ಹಾಡಿ, ಕನ್ನಡ ತಾಯಿಗೆ ನಿತ್ಯೋತ್ಸವ ಸಲ್ಲಿಸುವು ದರೊಂದಿಗೆ ರಜತ ವೈಭವದ ಬೆಳ್ಳಿ ತೆರೆ ನಿಧಾನವಾಗಿ ಕೆಳಗಿಳಿಯಿತು.
ಏಶಿಯಾ ಪೆಸಿಫಿಕ್ ಕನ್ನಡ ಒಕ್ಕೂಟದ ವೇದಿಕೆಯಡಿ ಈ ಕಲಾವಿದರು ಅಡಿಲೇಡ್, ಮೆಲ್ಬೋರ್‍ನ್ ಮತ್ತು ಸಿಂಗಪುರ ನಗರಗಳಲ್ಲಿ ಕಾರ್‍ಯಕ್ರಮ ನೀಡಲಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-11
|
|
|