ಬಹರೇನ್: ಭಯಾನಕ ಚಿತ್ರಗಳ ಮೂಲಕ ಧೂಮಪಾನದಿಂದ ವಿಮುಖಗೊಳಿಸುವ ಹೊಸ ಕ್ರಮ |
ಪ್ರಕಟಿಸಿದ ದಿನಾಂಕ : 2008-08-11
ತಂಬಾಕು ಉತ್ಪನ್ನಗಳ ಮೇಲೆ ಮುದ್ರಿತವಾಗಲಿರುವ ಭಯಾನಕ ಚಿತ್ರಗಳು : ಜಿಸಿಸಿ ಧೂಮಪಾನ ವಿರುದ್ಧ ಅಭಿಯಾನ
ಮನಾಮಾ, ಆಗಸ್ಟ್ 11: ತಂಬಾಕು ಉತ್ಪನ್ನಗಳ ಭಯಾನಕ ಪರಿಣಾಮಗಳನ್ನು ಪ್ರತ್ಯಕ್ಷಗೊಳಿಸುವ ಚಿತ್ರಗಳನ್ನು ಆಯಾ ಉತ್ಪನ್ನಗಳ ಪೊಟ್ಟಣಗಳ ಮೇಲೆ ಮುದ್ರಿಸಿ ಸಾರ್ವಜನಿಕರಿಗೆ ಈ ಉತ್ಪನ್ನಗಳ ಬಗ್ಗೆ ಎಚ್ಚರಿಸಲು ಹೊಸ ಅಭಿಯಾನವೊಂದು ಪ್ರಾರಂಭವಾಗಿದೆ. ಕ್ಯಾನ್ಸರ್ ಪೀಡಿತ ಶ್ವಾಸಕೋಶ, ಸತ್ತ ಮಗು, ಕೊಳೆಯುತ್ತಿರುವ ಹಲ್ಲು ಮೊದಲಾದ ಚಿತ್ರಗಳನ್ನು -ಧೂಮಪಾನ ಕೊಲ್ಲುತ್ತದೆ- ಎಂಬ ಹಣೆಪಟ್ಟಿಯೊಂದಿಗೆ ತಂಬಾಕು ಉತ್ಪನ್ನಗಳ ಮೇಲೆ ಮುದ್ರಿಸಲಾಗುವುದು.
ಬಹರೇನ್ ಆದ್ಯಂತ ಹಮ್ಮಿಕೊಳ್ಳಲಾಗಿರುವ ಜಿಸಿಸಿ ಆಂಟಿ ಸ್ಮೋಕಿಂಗ್ ಕಾಂಪೇಯ್ನ್ ಅಭಿಯಾನ ಎರೆಡು ವರ್ಷಗಳ ಕಾಲ ನಡೆಯಲಿದ್ದು ಇದನ್ನು ಬಹರೇನ್ ಆರೋಗ್ಯ ಸಚಿವಾಲಯ ಪ್ರಾಯೋಜಿಸುತ್ತಿದೆ ಎಂದು ಅಭಿಯಾನದ ನಿರ್ದೇಶಕರಾದ ಡಾ. ಖಾದಿಮ್ ಅಲ್ ಹಲ್ವಾಚಿಯವರು ತಿಳಿಸಿದ್ದಾರೆ.
ಇಂದಿನ ಯುವಜನಾಂಗ ಧೂಮಪಾನವನ್ನು ಸ್ವಾಗತಿಸುತ್ತಿರುವುದು ಶ್ವಾಸಕೋಶದ ಕ್ಯಾನ್ಸರ್, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ, ಇದನ್ನು ಹತ್ತಿಕ್ಕಲು ಚಿತ್ರಗಳ ಬಳಕೆಯೇ ಅತಿಸಮರ್ಪಕವೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಚಿತ್ರಗಳು ತಂಬಾಕು ಉತ್ಪನ್ನಗಳ ಶೇಖಡಾ ಮೂವತ್ತರಿಂದ ಐವತ್ತು ಭಾಗ ಆಕ್ರಮಿಸಿಕೊಳ್ಳಲಿವೆ. ಈ ಅಭಿಯಾನದ ಮೂಲಕ ಸಾರ್ವಜನಿಕರಿಗೆ ಧೂಮಪಾನದ ದುಷ್ಪರಿಣಾಮಗಳನ್ನು ಮನದಟ್ಟು ಮಾಡುವ ಪ್ರಮುಖ ಉದ್ದೇಶವನ್ನು ಅಭಿಯಾನ ಹೊಂದಿದೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಡೇಲಿ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-08-11
|
|
|