ಕುವೈಟ್: ಕೊನೆಯ ದಿನದ ಹಿಂಸೆಯ ಬಳಿಕ ಕೊನೆಗೊಂಡ ಮೂರು ದಿನದ ಮುಷ್ಕರ |
ಪ್ರಕಟಿಸಿದ ದಿನಾಂಕ : 2008-07-29
ವೇತನ ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ಮರುಪರಿಶೀಲನೆಯ ಆಶ್ವಾಸನೆ : ಪರಿಸ್ಥಿತಿ ಶಾಂತ
ಕುವೈಟ್, ಜುಲೈ 29: ತಮಗೆ ನೀಡಲಾಗುತ್ತಿರುವ ವೇತನ ಹಾಗೂ ಸೌಲಭ್ಯಗಳು ಕಡಿಮೆಯಾಗಿವೆ, ಇವನ್ನು ಮರುಪರಿಶೀಲಿಸಬೇಕೆಂಬ ಬೇಡಿಕೆಯನ್ನಿಟ್ಟು ಸುಮಾರು ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಏಶಿಯಾ ಮೂಲದ ಕಾರ್ಮಿಕ ಸಂಘಟನೆ ಮೂರನೆಯ ದಿನದ ಕೊನೆಗೆ ಮುಷ್ಕರವನ್ನು ಅಂತ್ಯಗೊಳಿಸಿದೆ. ಹೆಚ್ಚಾಗಿ ಬಾಂಗ್ಲಾದೇಶದ ಕಾರ್ಮಿಕರ ಸಂಘಟನೆ ಮುಷ್ಕರಕ್ಕಿಳಿದಿದ್ದು ಮೂರನೆಯ ದಿನ ಹಿಂಸಾತ್ಮಕ ರೂಪ ತಾಳಿತ್ತು. ಪ್ರಕ್ಷುಬ್ದಗೊಂಡ ಗುಂಪು ಹಲವು ಕಾರುಗಳನ್ನು ಪಲ್ಟಿ ಹೊಡೆಸಿ, ಕಛೇರಿಗಳ ಮೇಜುಕುರ್ಚಿಗಳಿಗೆ ಹಾನಿಯುಂಟುಮಾಡಿದೆ.
ಆ ಬಳಿಕ ಅಧಿಕಾರವೃಂದ ಕಾರ್ಮಿಕರ ನಾಯಕರೊಂದಿಗೆ ಸಮಾಲೋಚನೆ ನಡೆಸಿ ವೇತನ ಹಾಗೂ ಉಳಿದ ಸೌಲಭ್ಯಗಳನ್ನು ಮರುಪರಿಶೀಲಿಸಲಾಗುವುದು ಎಂಬ ಆಶ್ವಸನೆ ನೀಡಿದ ಬಳಿಕ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ. ಸುಮಾರು ಮುನ್ನೂರು ಮುಷ್ಕರನಿರತ ಕಾರ್ಮಿಕರನ್ನು ಅವರ ಬಾಕಿಯಿದ್ದ ವೇತನ ನೀಡಿ ದೇಶದಿಂದ ಹಿಂದೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಸುಮಾರು ಐನೂರಕ್ಕೂ ಹೆಚ್ಚು ಕಾರ್ಮಿಕರು ರಸ್ತೆಗಿಳಿದು ಧಾಂಧಲೆ ನಡೆಸಿದ್ದರ ಪರಿಣಾಮವಾಗಿ ಪೋಲೀಸರು ಅಶ್ರುವಾಯು ಹಾಗೂ ಬ್ಯಾಟನ್ ಗಳ ಸಹಾಯ ಪಡೆಯಬೇಕಾಯಿತು. ನಗರದ ಜಲೀಬ್ ಅಲ್ ಶುಯೂಖ್ ಹಾಗೂ ಮಹ್ಬೂಲಾ ಬಡಾವಣೆಗಳಲ್ಲಿ ನಡೆದ ಮುಷ್ಕರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.
ಪ್ರಸ್ತುತ ತಮ್ಮ ವೇತನ ಕೇವಲ 20 ಕುವೈತಿ ದಿನಾರ್ (ಸುಮಾರು ಮೂರು ಸಾವಿರ ಭಾರತೀಯ ರೂಪಾಯಿ) ಮಾತ್ರವಿದ್ದು ಮನೆ ಹಾಗೂ ತಮ್ಮ ಖರ್ಚುಗಳನ್ನು ಹೊಂದಿಸಲು ಸರ್ವಥಾ ಸಾಧ್ಯವಿಲ್ಲದಾಗಿದೆ, ಇದನ್ನು ಕನಿಷ್ಠ 40 ದಿನಾರುಗಳಿಗೇರಿಸಬೇಕೆಂದು ಹಲವಾರು ದಿನಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ದೊರಕದಿರುವುದರಿಂದ ಮುಷ್ಕರ ನಡೆಸುವ ಅಂತಿಮ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮುಷ್ಕರ ನಿರತ ಬಾಂಗ್ಲಾದೇಶಿ ನಾಗರಿಕರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕುವೈಟ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-29
|
|
|