ಬಹರೇನ್: ಸಂಭ್ರಮ-2008ರ ಯಶಸ್ಸಿನಲ್ಲಿ ಭಾಗವಹಿಸಿದ ತಂಡಕ್ಕೆ ಅಭಿನಂದನಾ ಸಮಾರಂಭ |
ಪ್ರಕಟಿಸಿದ ದಿನಾಂಕ : 2008-07-27
ಕಾರ್ಯಕರ್ತರ ನಿಃಸ್ವಾರ್ಥ ಸೇವೆ ಯಶಸ್ಸಿಗೆ ಪ್ರಮುಖ ಕಾರಣ : ಅಧ್ಯಕ್ಷರ ಶ್ಲಾಘನೆ
ಮನಾಮಾ, ಜುಲೈ 27: ಇತ್ತೀಚೆಗೆ ಜರುಗಿದ ಸಂಭ್ರಮ-2008 ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದ್ದು ಇದೇ ಸಂದರ್ಭದಲ್ಲಿ ಜುಲೈ ತಿಂಗಳಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಮಕ್ಕಳ ಹುಟ್ಟುಹಬ್ಬವನ್ನೂ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದರೂ ಅದಕ್ಕೆ ಪರ್ಯಾಯವಾಗಿ ಬಹರೇನ್ ಕನ್ನಡ ಸಂಘದ ಕಾರ್ಯಕರ್ತರ ಬಿಡುವಿಲ್ಲದ ಚಟುವಟಿಕೆ ಹಾಗೂ ನಿಃಸ್ವಾರ್ಥ ಸೇವೆಯೂ ಯಶಸ್ಸಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಬಹರೇನ್ ಕನ್ನಡ ಸಂಘದ ಅಧ್ಯಕ್ಷರಾದ ಆಸ್ಟಿನ್ ಸಂತೋಶ್ ರವರು ಹರ್ಷಭರಿತ ಧ್ವನಿಯಲ್ಲಿ ನುಡಿದರು. ಇದೇ ರೀತಿಯಲ್ಲಿ ಮುಂಬರುವ ಕಾರ್ಯಕ್ರಮಗಳಲ್ಲೂ ಸಹಾ ಸದಸ್ಯರು ಹಾಗೂ ಕಾರ್ಯಕರ್ತರು ತಮ್ಮ ಸಹಕಾರ ನೀಡಬೇಕೆಂದು ಅವರು ಮನವಿಮಾಡಿಕೊಂಡರು.
ಕನ್ನಡ ಸಂಘದ ಹಿರಿಯ ಸದಸ್ಯ ಹಾಗೂ ಅಲ್ ಫಹದ್ ಮ್ಯಾನ್ ಪವರ್ ಸರ್ವಿಸ್ ಸಂಸ್ಥೆಯ ಶ್ರೀ ಸುಧಾಕರ ಶೆಟ್ಟಿಯವರು ಮಾತನಾಡುತ್ತಾ ತಾನೊಬ್ಬ ಹಿರಿಯ ಸದಸ್ಯನಾಗಿದ್ದರೂ ಈ ಪರಿಯ ಉತ್ಸಾಹ ಹಿಂದೆಂದೂ ಕಂಡಿಲ್ಲವೆಂದೂ, ಆರ್ಥಿಕ ಅಡಚಣೆಯಿದ್ದ ಕಾಲದಲ್ಲೂ ಸಹಾ ಸದಸ್ಯರು ಪರಸ್ಪರ ಸಹಕಾರದಿಂದ ಈ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಅವರು ನುಡಿದರು. ಈ ಬಗೆಯ ಸಹಕಾರ ಹಾಗೂ ಪ್ರೇರಣೆ ಮುಂದಿನ ಕಾರ್ಯಕ್ರಮಗಳಲ್ಲೂ ಕಂಡುಬರಲಿ ಎಂದು ಅವರು ಹಾರೈಸಿದರು.
ಇದೇ ಸಂದರ್ಭದಲ್ಲಿ ಜುಲೈ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸುತ್ತಿರುವ ಎಲ್ಲಾ ಮಕ್ಕಳಗೆ ಸಾಮೂಹಿಕವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಯಿತು. ಎಲ್ಲಾ ಮಕ್ಕಳ ಪರವಾಗಿ ಒಂದೇ ದೊಡ್ಡ ಕೇಕ್ ತಯಾರಿಸಿಕೊಂಡು ತಂದಿದ್ದು ಎಲ್ಲರೂ ಹಂಚಿ ಸಂಭ್ರಮಪಟ್ಟರು.
ಆ ಬಳಿಕ ಕೆಲವು ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಕನ್ನಡ, ಹಿಂದಿ ಚಿತ್ರಗೀತೆಗಳು ಸದಸ್ಯರನ್ನು ರಂಜಿಸಿದವು. ಸಂಘದ ವತಿಯಿಂದ ಆಯೋಜಿಸಲಾಗಿದ್ದ ಬಫೆ ಊಟ ಎಲ್ಲರ ಪ್ರಶಂಸೆಗೆ ಕಾರಣವಾಯಿತು.
ಅಂತಿಮವಾಗಿ ಮನರಂಜನಾ ಕಾರ್ಯದರ್ಶಿ ದೂಮಣ್ಣ ರೈಯವರು ವಂದನಾರ್ಪಣೆ ಸಲ್ಲಿಸಿದರು. 
ಸಂಘದ ಧ್ಯೇಯವಾಕ್ಯವಾದ "ಸಂಘ ಜೀವನ ಸುಖದ ಜೀವನ" ಈ ಕಾರ್ಯಕ್ರಮದ ಮೂಲಕ ಇನ್ನಷ್ಟು ಮಹತ್ವ ಪಡೆಯಿತು.
ವರದಿಯ ವಿವರಗಳು |
 |
ಕೃಪೆ : ಬಹರೇನ್ ಕನ್ನಡ ಸಂಘ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-27
|
|
|