ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಭಾರತೀಯ ರಾಯಭಾರಿ ನಿವಾಸಕ್ಕೆ ಭೇಟಿ |
ಪ್ರಕಟಿಸಿದ ದಿನಾಂಕ : 2008-07-26
ರಾಯಭಾರಿ ಬಾಲಕೃಷ್ಣ ಶೆಟ್ಟಿಯವರೊಂದಿಗೆ ವಿಶೇಷ ಮಾತುಕತೆ
ಮನಾಮಾ, ಜುಲೈ 26: ಬಹರೇನ್ ಕನ್ನಡ ಸಂಘ ಆಯೋಜಿಸಿದ್ದ -ಸಂಭ್ರಮ 2008- ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಶೇಷವಾಗಿ ಆಗಮಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ, ಪದ್ಮಭೂಷಣ ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರು ತಮ್ಮ ಧರ್ಮಪತ್ನಿ ಹೇಮಾವತಿ ಹೆಗ್ಗಡೆಯವರೊಂದಿಗೆ ಇಲ್ಲಿನ ಭಾರತೀಯ ರಾಯಭಾರಿ ಕಛೇರಿಗೆ ಭೇಟಿ ನೀಡಿದರು.
ಬಹರೇನಿನಲ್ಲಿ ಭಾರತೀಯ ರಾಯಭಾರಿಯಾಗಿರುವ ಶ್ರೀ ಬಾಲಕೃಷ್ಣ ಶೆಟ್ಟಿಯವರೊಂದಿಗೆ ಆತ್ಮೀಯ ಸಂವಾದ ನಡೆಸಿದರು. ಧರ್ಮಾಧಿಕಾರಿ ದಂಪತಿಗಳನ್ನು ಬಾಲಕೃಷ್ಣ ಶೆಟ್ಟಿ ಮತ್ತು ಅವರ ಧರ್ಮಪತ್ನಿ ವಸುಂಧರಾ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ರಾಯಭಾರಿಗಳ ನಿವಾಸದಲ್ಲಿ ವಿಶೇಷ ಅತಿಥಿಗಳಿಗೆಂದೇ ಮೀಸಲಾಗಿರಿಸಿರುವ ಪುಸ್ತಕದಲ್ಲಿ ಹಸ್ತಾಕ್ಷರ ಮಾಡಿದ ಬಳಿಕ ಹೆಗ್ಗಡೆಯವರು ರಾಯಭಾರಿಯವರೊಂದಿಗೆ ಸುಮಾರು ಒಂದೂವರೆ ತಾಸುಗಳವರೆಗೆ ಸಂವಾದ ನಡೆಸಿದರು. ವಿಚಾರವಿನಿಮಯದಲ್ಲಿ ಪ್ರಸ್ತುತ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಗ್ರಾಮೀಣ ಸ್ಥಿತಿಗತಿಗಳ ಅವಲೋಕನ ನಡೆಯಿತು. ಹೆಗ್ಗಡೆಯವರು ಧರ್ಮಸ್ಥಳವು ಶೈಕ್ಷಣಿಕ, ವೈದ್ಯಕೀಯ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಯೋಜನೆಗಳು, ಈಗಾಗಲೇ ಕಾರ್ಯಗತ ಗೊಂಡಿರುವ ಯೋಜನೆಗಳು ಹಾಗೂ ನಡೆಸುತ್ತಿರುವ ವಿವಿಧ ಸಂಸ್ಥೆಗಳ ಬಗ್ಗೆ ರಾಯಭಾರಿಗಳಲ್ಲಿ ವಿಚಾರ ವಿನಿಮಯ ನಡೆಸಿದ್ದಲ್ಲದೇ ಇದರ ಸಮಗ್ರ ಚಿತ್ರಣವಿರುವ ಕೈಪಿಡಿಯೊಂದನ್ನು ರಾಯಭಾರಿಗಳಿಗೆ ಹಸ್ತಾಂತರಿಸಿದರು. 
ಸಮಾಜದ ವಿವಿಧ ಕ್ಷೇತ್ರಗಳಲ್ಲಿ, ಅದರಲ್ಲೂ ಗ್ರಾಮೀಣ ಜನರಿಗಾಗಿ ಧರ್ಮಸ್ಥಳವು ಯಶಸ್ವಿಯಾಗಿ ಜಾರಿಗೆ ತಂದಿರುವ ಯೋಜನೆಗಳು, ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ರಾಯಭಾರಿಗಳು ತಮ್ಮ ಸಂತಸ ವ್ಯಕ್ತಪಡಿಸಿ ಮುಕ್ತ ಕಂಠದಿಂದ ಪ್ರಶಂಶಿಸಿದರು. ಬಹರೇನ್ ಕನ್ನಡ ಸಂಘದ ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ಕುಮಾರ್, ಬಹರೇನ್ ಬಿಲ್ಲವರ ಒಕ್ಕೂಟವಾದ ಗುರುಸೇವಾ ಸಮಿತಿಯ ಅಧ್ಯಕ್ಷರಾದ ರಾಜಕುಮಾರ್, ಖ್ಯಾತ ಕನ್ನಡಿಗ ಉದ್ಯಮಿಯಾದ ಸುಧಾಕರ ಶೆಟ್ಟಿ, ರಾಮಾ ಸಮೂಹ ಹೋಟೆಲ್ ಸಂಸ್ಥೆಯ ಜನರಲ್ ಮ್ಯಾನೇಜರ್ ಶಾಂತಾರಾಮ ಶೆಟ್ಟಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮಿನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-26
|
|
|