ಹೊರದೇಶದಲ್ಲಿ ಅರಳಿದ ಎರೆಡು ಕನ್ನಡದ ಹೂವುಗಳು : ಭರತನಾಟ್ಯದಲ್ಲಿ ಭರವಸೆ ಮೂಡಿಸಿದ ಪೂಜಾ, ಶೃತಿ |
ಪ್ರಕಟಿಸಿದ ದಿನಾಂಕ : 2008-07-17
ಬಹರೇನಿನಲ್ಲಿ ಕರ್ನಾಟಕದ ಮೆರೆಗು ಮೂಡಿಸಿದ ರಂಗಪ್ರವೇಶ : ಕಿರಿಯರ ಸಾಧನೆಗೆ ಶ್ಲಾಘನೆ
ಮನಾಮಾ, ಜುಲೈ 17: ಬಹರೇನಿನಲ್ಲಿ ಬೆಳೆಯುತ್ತಿರುವ ಕನ್ನಡದ ಕಿಶೋರಿಯರಿಬ್ಬರು ಭರತನಾಟ್ಯಕಲೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಭವಿಶ್ಯದ ಉತ್ತಮ ಕಲಾವಿದರಾಗುವ ಭರವಸೆ ಮೂಡಿಸಿದ್ದಾರೆ. ಶ್ರೀ ಸುರೇಶ್ ಹಳೆಯಂಗಡಿ ಮತ್ತು ಲತಾ ಸುರೇಶ್ ದಂಪತಿಗಳ ಪುತ್ರಿ ಕುಮಾರಿ ಪೂಜಾ ಸುರೇಶ್ ಹಾಗೂ ಸುರೇಶ್ ಹೆಗಡೆ ಮತ್ತು ವಿದ್ಯಾ ಸುರೇಶ್ ಹೆಗಡೆ ದಂಪತಿಗಳ ಪುತ್ರಿ ಕುಮಾರಿ ಶೃತಿ ಹೆಗಡೆ ಯವರು ಜುಲೈ 10 ರಂದು ಮನಮಾದ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನಡೆದ -ರಂಗಪ್ರವೇಶ- ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ವಿದೂಶಿ ಆಸ್ತಿಕಾ ಸುನಿಲ್ ಶೆಟ್ಟಿಯವರ ವಿಶ್ವ ಕಲಾನಿಕೇತನ ಕಲಾಶಾಲೆಯಲ್ಲಿ ವಿದ್ಯಾರ್ಥಿಗಳಾಗಿರುವ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ರಂಗಪ್ರವೇಶ ಕಾರ್ಯಕ್ರಮ ಉದಯೋನ್ಮುಖ ಕಲಾವಿದರಿಗೆ ಒಂದು ವೇದಿಕೆಯನ್ನೊದಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರಿನ ವಿಶ್ವಕಲಾನಿಕೇತನ ಕಲಾಶಾಲೆಯ ಸ್ಥಾಪಕರಾದ ಕುಡ್ಕಾಡಿ ವಿಶ್ವನಾಥ ರೈಯವರು ವಹಿಸಿದ್ದರು. ಬಹರೇನ್ ಕನ್ನಡ ಸಂಘದ ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ರವರು ಕಲಾವಿದರನ್ನು ಸಭೆಗೆ ಪರಿಚಯಿಸಿದರು. ವಿಶೇಷ ಅತಿಥಿಗಳಾಗಿ ಬಹರೇನಿನಲ್ಲಿ ಭಾರತೀಯ ರಾಯಭಾರಿಯಾಗಿರುವ ಶ್ರೀ ಬಾಲಕೃಷ್ಣ ಶೆಟ್ಟಿಯವರು ಉಪಸ್ಥಿತರಿದ್ದರು.
ಬಹರೇನಿನ ಏಶಿಯನ್ ಸ್ಕೂಲ್ ನಲ್ಲಿ ಎಂಟನೆಯ ತರಗತಿಯ ವಿದ್ಯಾರ್ಥಿನಿಯಾಗಿರುವ ಪೂಜಾ ಸುರೇಶ್ ಬಹುಮುಖ ಪ್ರತಿಭೆಯುಳ್ಳ ವಿದ್ಯಾರ್ಥಿನಿಯಾಗಿದ್ದು ಬಹರೇನ್ ಕನ್ನಡ ಸಂಘ ಆಯೋಜಿಸಿದ್ದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾಳೆ. ನಾಟ್ಯ ಮಾತ್ರವಲ್ಲದೇ ಚಿತ್ರಬಿಡಿಸುವಿಕೆ, ಪ್ರಬಂಧ, ಛದ್ಮವೇಶ ಮೊದಲಾದ ಕಲೆಗಳಲ್ಲೂ ಪಾರಾಂಗತಳಾಗಿದ್ದಾಳೆ.
ಶೃತಿ ಸುರೇಶ್ ಹೆಗಡೆ ಸಹಾ ಪೂಜಾಳ ಓರಗೆಯವಳಾಗಿದ್ದು ಭರತನಾಟ್ಯದಲ್ಲಿ ಪಾರಾಂಗತಳಾಗಿದ್ದಾಳೆ. ಕರ್ನಾಟಕ ಸುಗಮ ಸಂಗೀತವನ್ನು ಮಾಡುತ್ತಿರುವ ಶೃತಿ ಉತ್ತಮ ಸಾಧನೆ ತೋರಿದ್ದಾಳೆ. ಶಾಲೆಗಳ, ಸಂಘಸಂಸ್ಥೆಗಳ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಛದ್ಮವೇಶ, ಪ್ರಬಂಧಸ್ಪರ್ಧೆ, ಚಿತ್ರಬಿಡಿಸುವಿಕೆ ಮೊದಲಾದ ಕಲೆಗಳಲ್ಲಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾಳೆ. ಕಳೆದ ಬಾರಿಯ ಬಹರೇನ್ ಕನ್ನಡ ಸಂಘದ ಮತ್ತು ಕರ್ನಾಟಕ ಸೋಶಿಯಲ್ ಕ್ಲಬ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ -ಪ್ರಿನ್ಸೆಸ್- ಪಟ್ಟ ಪಡೆದಿದ್ದಾಳೆ.
ಇಬ್ಬರ ಗುರುವಾದ ವಿದೂಶಿ ಆಸ್ತಿಕಾ ಸುನಿಲ್ ಶೆಟ್ಟಿಯವರು ನಾಟ್ಯ ಹಾಗೂ ಸಂಗೀತ ವಿದ್ವಾಂಸರ ಮನೆತನದಿಂದ ಬಂದವರಾಗಿದ್ದು ವಿದ್ವಾನ್ ಕುಡ್ಕಾಡಿ ವಿಶ್ವನಾಥ ರೈ ಹಾಗು ಭರತನಾಟ್ಯ ವಿದೂಶಿ ನಯನ ವಿ. ರೈ ಯವರ ಸಹಯೋಗದೊಂದಿಗೆ ನಾಟ್ಯಕಲೆಯನ್ನು ಕಲಿಸುತ್ತಿದ್ದಾರೆ.
ರಂಗಪ್ರವೇಶ ಕಾರ್ಯಕ್ರಮದಲ್ಲಿ ಸಹಕರಿಸಿದವರು: ನಟುವಂಗ - ವಿದೂಶಿ ಆಸ್ತಿಕಾ ಸುನಿಲ್ ಶೆಟ್ಟಿ ಹಾಡುಗಾರಿಕೆ: ಶ್ರೀಮತಿ ವಿಜಯಾ ಸತ್ಯನಾರಾಯಣ ಮೃದಂಗ: ಕೃಷ್ಣಕುಮಾರ್ ಪಿಟೀಲು: ಶ್ರ್‍ಈಮತಿ ಅರ್ಚನಾ ಕೃಷ್ಣಕುಮಾರ್
ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷರು ಹಾಗೂ ರಾಯಭಾರಿಗಳು ಕಲಾವಿದರ ಸಾಧನೆಯನ್ನು ಶ್ಲಾಘಿಸಿ ನಮ್ಮ ಸಂಸ್ಕೃತಿ ಇನ್ನೂ ಹೆಚ್ಚು ಮಕ್ಕಳಲ್ಲಿ ಬೆಳೆಯಬೇಕೆಂದು ಹಂಬಲಿಸಿದರು.
ಭಾಗವಹಿಸಿದ ಕಲಾವಿದರಿಗೆ ಸೂಕ್ತ ಪ್ರಶಸ್ತಿಗಳೊಂದಿಗೆ ಸನ್ಮಾನಿಸಲಾಯಿತು. ಅಂತಿಮವಾಗಿ ಶ್ರೀ ಸುರೇಶ್ ಹೆಗಡೆಯವರು ವಂದನಾರ್ಪಣೆ ಸಲ್ಲಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-17
|
|
| hanif, manglore/dubai | 2008-10-26 | | ಕನ್ನಡದ ಪ್ರತಿಭಗಳು ಇನ್ನಷ್ಟು ಹೊರದೇಶದಲ್ಲಿ ಅರಳಲಿ ....congrats. |
|