ಸೌದಿ ಅರೇಬಿಯಾ: ಬೇಸಿಗೆ ರಜೆಯಲ್ಲಿ ಉಮ್ರಾ ನಿರ್ವಹಿಸುವ ಭಕ್ತರಿಗೆ ಹೆಚ್ಚಿನ ಸೌಲಭ್ಯ |
ಪ್ರಕಟಿಸಿದ ದಿನಾಂಕ : 2008-07-03
ಮಕ್ಕಾ ಮಸೀದಿಯಲ್ಲಿ ತೆರೆಯಲಾದ ಬೇಸ್ ಮೆಂಟ್ : ಹೆಚ್ಚಿನ ಸ್ಥಳಾವಕಾಶ
ಮಕ್ಕಾ, ಜುಲೈ 3: ಗಲ್ಫ್ ರಾಷ್ಟ್ರಗಳಲ್ಲಿ ಬೇಸಿಗೆ ರಜೆ ತೊಡಗಿದ್ದಂತೆ ಉಮ್ರಾ ನಿರ್ವಹಿಸಲು ಮಕ್ಕಾ ನಗರಕ್ಕೆ ತೆರಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹೆಚ್ಚಿನ ಜನಸಂದಣೆಯನ್ನು ನಿರ್ವಹಿಸಲು ಮಕ್ಕಾ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ಕೆಲವು ಸೌಲಭ್ಯಗಳನ್ನು ಹೊಸತಾಗಿ ನೀಡಿದೆ. ಮಸೀದಿಯ ಬೇಸ್ ಮೆಂಟ್ ನಿರ್ಮಾಣ ಕಾಮಗಾರಿ ಮುಗಿದಿದ್ದು ಅದನ್ನು ಭಕ್ತರ ಅನುಕೂಲಕ್ಕಾಗಿ ತೆರೆಯಲಾಗಿರುವುದರಿಂದ ಹೆಚ್ಚಿನ ಸ್ಥಳಾವಕಾಶ ಲಭ್ಯವಾಗಿದೆ.
ಎಲ್ಲೆಡೆ ಹವಾನಿಯಂತ್ರಣಗಳನ್ನು ಅಳವಡಿಸಲಾಗಿದ್ದು ಸೆಖೆಯಿಂದ ಭಕ್ತರಿಗೆ ಅಹ್ಲಾದಕರವಾಗಿದೆ. ಇಡಿಯ ಪ್ರದೇಶದಲ್ಲಿ ಸುಂದರ ರತ್ನಗಂಬಳಿಯನ್ನು ಹಾಸಲಾಗಿದ್ದು ಅಲ್ಲಲ್ಲಿ ಕುಡಿಯುವ ನೀರನ್ನು ಇರಿಸಲಾಗಿದೆ. ಪವಿತ್ರ ಜಮ್ ಜಮ್ ನೀರನ್ನು ಸದಾಕಾಲ ಇರುವಂತೆ ಹೊಸದಾಗಿ ನೇಮಕಗೊಂಡಿರುವ ಹೆಚ್ಚಿನ ಸಿಬ್ಬಂದಿ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲೂ ನಿಯಮಿತವಾಗಿ ಸ್ವಚ್ಛತಾಕಾರ್ಯ ನಡೆಸುತ್ತಿರುತ್ತಾರೆ.
ವಿವಿಧ ಪ್ರಾಂತಗಳಿಂದ ಉಮ್ರಾ ನಿರ್ವಹಣೆಗೆ ಆಗಮಿಸಿರುವವರಿಗೆ ಅನುಕೂಲವಾಗುವಂತೆ ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಪ್ರವಚನ ಹಾಗೂ ಸೂಚನಾಶಿಬಿರಗಳನ್ನು ಏರ್ಪಡಿಸಲಾಗಿದೆ. ಕಾಅಬಾ ಪ್ರದಕ್ಷಿಣೆ ಹಾಗೂ ಸಈ ನಿರ್ವಹಣೆಯ ಸರಿಯಾದ ಕ್ರಮದಲ್ಲಿ ನಿರ್ವಹಣೆಯ ಬಗ್ಗೆ ಮಾಹಿತಿ ಹಾಗೂ ಸೂಚನೆಗಳನ್ನು ನೀಡಲಾಗುತ್ತದೆ.
ಒಂದು ವೇಳೆ ಉಮ್ರಾ ನಿರ್ವಹಿಸುವ ರೀತಿಯಲ್ಲಿ ತಪ್ಪಾದರೆ ಅದನ್ನು ಸರಿಪಡಿಸಿಕೊಳ್ಳಲು ಅಲ್ಲಲ್ಲಿ ಸ್ಥಾಪಿಸಲಾಗಿರುವ ಇಂಟರ್ ಕಾಮ್ ದೂರವಾಣಿಯ ಮೂಲಕಮಾಹಿತಿಯನ್ನು ಪಡೆಯಬಹುದಾಗಿದೆ. ಮಸೀದಿಯ ಆವರಣದಲ್ಲಿ ಐದು ವೈದ್ಯಕೀಯ ಡಿಸ್ಪೆನ್ಸರಿಗಳನ್ನು ತೆರೆಯಲಾಗಿದ್ದು ಭಕ್ತರಿಗೆ ತುರ್ತು ಚಿಕಿತ್ಸೆ ನೀಡುವ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಒಂದು ವೇಳೆ ರೋಗಿಯ ಪರಿಸ್ಥಿತಿ ಕೈಮೀರುವ ಪ್ರಸಂಗ ಎದುರಾದರೆ ಅನತಿ ದೂರದಲ್ಲಿರುವ ಅಲ್ ಜಿಯಾದ್ ಆಸ್ಪತ್ರೆಗೆ ರೋಗಿಯನ್ನು ಕ್ಷಿಪ್ರಕಾಲದಲ್ಲಿ ಕರೆದೊಯ್ಯಲು ಸೂಕ್ತ ವ್ಯವಸ್ಥೆಯನ್ನೂ ಮಾಡಲಾಗಿದೆ.
ವರದಿಯ ವಿವರಗಳು |
 |
ಕೃಪೆ : ಸೌದಿ ಗೆಜೆಟ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-03
|
|
|